ಶ್ರೀ ಗೋಪಾಲದಾಸಾರ್ಯರ
ಯಮಕ ಮುಂಡಿಗೆ
ಮಾವಾರಿ, ಮಾವಾರಿಜಜಮನಸಿಜರ ಮನಕತಿದೂರ,
ಯಶೋದಜಯಶೋದಜ ಯವನೀಯೋ!
ಜಂಭಾರಿಜಂಭಾರಿ ಶೋಕಪಡೆಯೆ ನೀ ಪೇಳ್ದೆ
ಕುರುಪಂಥ ಕುರುಪಂಥವನು ನಿಲಿಸಿದೆ!
ನಗಪ ಮನ್ನಗಪ ಪಂಚಾಸ್ಯನುತ ಕಾಯೋ
ಗೋಪಾಲವಿಠ್ಠಲ!!
***
ಮಾವಾರಿ ಮಾವಾರಿಜಜ
ಮಾವಾರಿ -
ಸೋದರಮಾವನಾದ ಕಂಸನಿಗೆ ಅರಿ(ಶತ್ರು)ಯಾದವನೆ
ಮಾವಾರಿಜಜ
ಮಾ - ವಾರಿಜ - ಮನಸಿಜರ
ಮಾ - ಲಕ್ಷ್ಮೀದೇವಿ
ವಾರಿಜ- ಜ - ಕಮಲದಿಂದ ಜನಿಸಿದ ಬ್ರಹ್ಮದೇವರು
ಮನಸಿ ಜ - ಮನಸ್ಸಿನಿಂದ ಹುಟ್ಟಿದ ಕಾಮ( ಮನ್ಮಥ)
ಇವರೀರ್ವರ
ಮನಕತಿದೂರ
ಮನಸ್ಸಿಗೆ ಸರ್ವಥಾ ಸರ್ವದಾ ನಿಲುಕದವನು
ಯಶೋದ - ಜ
ಯದ್ಯಪೀ ಯಶೋದೆಯಲ್ಲಿ ಹುಟ್ಟದಿದ್ದರೂ (ಅವತಾರ)
ಯಶೋದೆಯಿಂದ ಜನಿಸಿದವನೆಂದು ಲೋಕದಲ್ಲಿ ಪ್ರಸಿದ್ಧಿ ಪಡೆದವನಂತೆ
ಯಶೋದ -
ನೀರಿನಂತೆ ಸ್ವಚ್ಛವಾದ ( ನಿಷ್ಕಲ್ಮಷ) ಯಶಸ್ಸುವುಳ್ಳವನೆ
ಜಯವನೀಯೋ-
ಸರ್ವತ್ರ ಜಯ ಪ್ರಾಪ್ತಿಯಾಗುವಂತೆ ಕರುಣಿಸಿ ಅನುಗ್ರಹಿಸು
ಇನ್ನೊಂದು ಅರ್ಥದಲ್ಲಿ
ಜಯ ಎನಿಸಿರತಕ್ಕಂಥ ಮಹಾಭಾರತಾದಿ ಇತಿಹಾಸ ಪುರಾಣಗಳ ವಿಶೇಷವಾದ ಜ್ಞಾನವನ್ನು ಪಡೆಯುವಂತೆ ಅನುಗ್ರಹಿಸು
ಜಯೋ ನಾಮೇತೀಹಾಸೋಟಿಯಂ ಕೃಷ್ಣದ್ವೈಪಾಯನೇರಿತಂ
ಜಂಭಾರಿ ಜಂ -
ಜಂಭಾರಿ-ಇಂದ್ರದೇವರಿಂದ
ಜ - ಹುಟ್ಟಿದಂಥ ಅರ್ಜುನನು
ಭಾರೀ ಶೋಕ ಪಡೆಯೆ
ಬಂಧುಗಳನ್ನು ಹೇಗೆ ಕೊಲ್ಲವುದು ಚಿಂತಾಕ್ರಾಂತನಾಗಿರಲು
ನೀ ಪೇಳ್ದೆ -
ಮಹಾಭಾರತ ಪಾರಿಜಾತ ಪುಷ್ಪದ ಮಧುವಿನಂತೆ ಇರುವ
ಶ್ರೀಮದ್ಭಗವದ್ಗೀತೆ ಉಪದೇಶಿಸಿ ಬಂಧು ವ್ಯಾಮೋಹವನ್ನು ದೂರಮಾಡಿದೆ ಅರ್ಥಾತ್ ಅವರ ಮೇಲಿನ ಅಭಿಮಾನ ವನ್ನು ತೊರೆಯುವಂತೆ ಮಾಡಿದೆ
ಕುರುಪಂಥಕೆ-
ಕೌರವರ ನಾಶಕ್ಕಾಗಿ ಪಾಂಡವರಿಂದ ಸಭೆಯಲ್ಲಿ ಮಾಡಲ್ಪಟ್ಟ
ಉರುಪಂಥ -
ಭಯಂಕರವಾದ ಪ್ರತಿಜ್ಞೆಗಳನ್ನು
ಪೂರ್ತಿಯಾಗುವಂತೆ ಮಾಡಿದೆ
ಹಾಗೆಯೇ ...
ಕುರುಪಂಥದಲ್ಲಿ ಉಳಿದ ಕೌರವ ಪಾಂಡವರ ಸಂತಾನ ಬೀಜ ಪ್ರಾಯನಾದ ಪರೀಕ್ಷಿತ್ ಮಹಾರಾಜನನ್ನು ಅಶ್ವತ್ಥಾಮಾಚಾರ್ಯರ
ಬ್ರಹ್ಮಾಸ್ತ್ರದಿಂದ ಬದುಕಿ ಉಳಿಯುವಂತೆ ಮಾಡಿ ಕ್ಷೇಮಕ ರಾಜನ ಪರ್ಯಂತ
ಪಾಂಡವರ ಸಂತತಿ ಅನುಸ್ಯೂತ
(ಅವ್ಯಾಹತ) ನಿರಂತರವಾಗಿ ಸುರಕ್ಷಿತವಾಗಿ ಇರುವಂತೆ ಮಾಡಿದೆ..
ನಗ - ಪ ..
ಕೈಲಾಸ ಪರ್ವತ ವನ್ನು ಪಾಲಿಸುವ ಸಂರಕ್ಷಿಸುವ ಪ್ರಭುವಾದ ಒಡೆಯನಾದ ರುದ್ರದೇವರು
ಪಂಚಾಸ್ಯ -
ಸರ್ಪಗಳನ್ನು ಪಾಲಿಸುವಂಥ ಶೇಷದೇವರೇ ಮೊದಲಾದವರಿಂದ
ನುತ..
ನುತಿಸಲ್ಪಟ್ಟ ಸ್ತುತಿಸಲ್ಪಟ್ಟ
ಗೋಪಾಲ
ಗೋ - ಗೋವು ವೇದ ಭೂಮಿ ಇಂದ್ರ ನಂದ ಬಾಣ
ಮೊದಲಾದವರನ್ನು ರಕ್ಷಿಸುವ
ಗೋಪಾಲವಿಠಲನೇ..
ಭೂಮಿ ಪಾಲಕನಾದ ಧರ್ಮರಾಜನಿಗೆ ಸಂದರ್ಭಾನುಸಾರವಾಗಿ ಗೋ ಎಂಬ ಪದವನ್ನು ಅರ್ಥೈಸಿಕೊಂಡಾಗ
ಭೀಷ್ಮಾಚಾರ್ಯ ರಲ್ಲಿ ನಿಂತು ವಿಶಿಷ್ಟವಾದ ವಿಶೇಷವಾದ ಜ್ಞಾನವನ್ನು ನೀಡಿ
ಸಂರಕ್ಷಿಸಿದವನೇ ಕಾಪಾಡು
ಇನ್ನೊಂದು ಅರ್ಥದಲ್ಲಿ
ಗೋ - ಬಾಣ
ಬತ್ತಳಿಕೆಯಲ್ಲಿ ಅಕ್ಷಯವಾಗಿ ಬಾಣಗಳು ಉಳಿಯುವಂತೆ ಯುದ್ಧ ಕೌಶಲವನ್ನು ತೋರಿದಂಥ ಅರ್ಜುನನಿಗೆ ಬಂದ ಸಂದೇಹವನ್ನು ಹೋಗಲಾಡಿಸಿ ಜ್ಞಾನ ಶೂನ್ಯನಾದ ಅರ್ಜುನನಿಗೆ ವಿಶೇಷಜ್ಞಾನವನ್ನು ನೀಡಿ
ಗೀತೆ ಯನ್ನು ಅನುಗ್ರಹಿಸಿದವನೆ ನನ್ನನ್ನೂ
ಕಾಪಾಡು ಎಂದು
ಶ್ರೀ ಗೋಪಾಲದಾಸಾರ್ಯರು ಅರ್ಜುನನನ್ನು ನಿಮಿತ್ತ ಮಾಡಿಕೊಂಡು ಇಡೀ ಜಗತ್ತಿಗೆ
ಲೋಕಕಲ್ಯಾಣಕ್ಕಾಗಿ ಗೀತೆಯನ್ನು ಸಾರಿದವನೇ ನಮ್ಮೆಲ್ಲರನ್ನು ಕಾಪಾಡುವಂತೆ ನಮ್ಮ ಪರವಾಗಿ ಶ್ರೀ ಗೋಪಾಲದಾಸಾರ್ಯರು
ತಮ್ಮ ಉಪಾಸ್ಯಮೂರ್ತಿ ಗೋಪಾಲವಿಠಲನಲ್ಲಿ
ಪರಿ ಪರಿಯಾಗಿ ಭಕ್ತಿಯಿಂದ ಬಿನ್ನವಿಸಿಕೊಂಡ ರೀತಿಯಿದು
ಈ ಯಮಕ ಮುಂಡಿಗೆ ಯಲ್ಲಿ ಮಹಾಭಾರತದಲ್ಲಿ ಬರುವ ಪ್ರಧಾನಘಟ್ಟಗಳನ್ನು
ತುಂಬಾ ಚೇತೋಹಾರಿಯಾಗಿ
ವರ್ಣಿಸಿದ್ದಾರೆ
ಶ್ರೀ ದಾಸಾರ್ಯರು
ಯಥಾಮತಿ ಅತ್ಯಲ್ಪ ಪ್ರಯತ್ನ ಕೇವಲ ಸೇವಾರೂಪದಲ್ಲಿ ಸಂಕ್ಷಿಪ್ತವಾಗಿ ಅಷ್ಟೇ...
ಶ್ರೀ ದಾಸಾರ್ಯರ
ಅಂತರ್ಗತ
ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ
ಶ್ರೀ ರಾಮಕೃಷ್ಣವೇದವ್ಯಾಸಾಭಿನ್ನ
ಗೋಪಾಲವಿಠ್ಠಲ ನಲ್ಲಿ ಸಮರ್ಪಿತವು
ನಂದೇನದೋ ಸ್ವಾಮಿ ನಿಂದೇ ಇದೆಲ್ಲವೂ
***