ankita ರಮಾಕಾಂತವಿಠಲ
ರಾಗ: [ನೀಲಾಂಬರಿ] ತಾಳ: [ಮಿಶ್ರನಡೆ]
ಲಾಲಿ ಪಾಡುವೆ ರಾಜ ಯತಿಕುಲ ಸುತೇಜ
ಲಾಲಿಸುತ ಜೋಗುಳದಿ ಮಲಗು ಗುರುರಾಜ ಪ
ಅಗಣಿತ ಮಹಿಮ ಸದ್ಗುಣ ಖಣಿಯೆ ಲಾಲಿ
ಜಗದಿ ಭಕುತರ ಪೊರೆವ ಸುರತರುವೆ ಲಾಲಿ
ಮಿಗೆ ಕಾಮಧೇನುಸಮ ಕರುಣಾಳು ಲಾಲಿ
ಹಗಲಿರುಳು ಚಿಂತಿಪರ ಚಿಂತಾಮಣಿಯೆ ಲಾಲಿ 1
ಜೊ ಜೊ ನರಹರಿಪ್ರಿಯ ಪ್ರಹ್ಲಾದರಾಯ
ಜೊ ಜೊ ಬ್ರಹ್ಮಣ್ಯ ಕರಸಂಜಾತ ಜೀಯ
ಜೊ ಜೊ ಮಂತ್ರಾಲಯಸ್ಥಿತ ವಜ್ರಕಾಯ
ಜೊ ಜೊ ಗುರುಸಾರ್ವಭೌಮ ಬುಧಗೇಯ 2
ಸಾರಿ ಸೇವಿಪರನ್ನು ಸಂತೈಸಿ ನಿಂದ
ಸೇರಿ ಪಾಡುತ ಧಣಿಪರೈ ದಾಸವೃಂದ
ಆರಮಿಸಿ ಮಲಗೆಂದು ತೂಗುವುದೆ ಚೆಂದ
ಶ್ರೀರಮಾಕಾಂತವಿಠಲನ ಪ್ರೀತಿಯ ಕಂದ 3
***