..
ಶ್ರೀಧವನ ದೂತರಿಗೆ ಭೇದವುಂಟೆ
ಕ್ರೋಧ ಜಯಿಸಿದ ನರಗೆ ಕಲಹಗಳುಂಟೆ ಪ
ಗರುಡನಾಲಯದಿ ಉರಗಗಳ ಭಯವುಂಟೆ
ಕರಿಯ ಬೆದರಿಕೆಗೆ ಮೃಗವರಗೆ ಉಂಟೆ
ಹರಿದಿನದಲುಂಬುವಗೆ ದುರೀತ ತಪ್ಪುವದುಂಟೆ
ಗುರು ಕರುಣ ಪಡೆಯದವಗೆ ಪರಗತಿ ಉಂಟೆ 1
ಅದ್ರಿಗಳ ಭಯವುಂಟೆ ಸುರಪನ ವಜ್ರಕೆ
ಯುದ್ಧದ ಭಯವುಂಟೆ ವೀರನಿಗೆ
ಶುದ್ಧ ಮನದಲಿ ನಮ್ಮ ಮಧ್ವಮತ ಸೇರಿದವ
ಗುದ್ಧಾರವಲ್ಲದೆ ನರಕುಪದ್ರಗಳುಂಟೆ 2
ಕಂದರ್ಪ ನಂಜಿಕೆಯು ಶಿಂಧುರಾನನ ಕುಂಟೆ
ನಿಂದಿಸುವ ಜನಕೆ ಸುಜ್ಞಾನವುಂಟೆ
ಮಂದರೋದ್ಧಾರ ಶಾಮಸುಂದರನ ಪದಯುಗವ
ಪೊಂದಿರ್ಪ ಸುಗುಣರಿಗೆ ಆವ ಕುಂದುಗಳಯ್ಯ 3
***