Showing posts with label ಶ್ರೀಗುರುವಿನ ನೆನೆದು vijaya vittala ankita suladi ಅಗ್ನಿಹೋತ್ರ ಸುಳಾದಿ SRI GURUVINA NENEDU PANCHAPRANA AGNIHOTRA SULADI. Show all posts
Showing posts with label ಶ್ರೀಗುರುವಿನ ನೆನೆದು vijaya vittala ankita suladi ಅಗ್ನಿಹೋತ್ರ ಸುಳಾದಿ SRI GURUVINA NENEDU PANCHAPRANA AGNIHOTRA SULADI. Show all posts

Saturday 27 February 2021

ಶ್ರೀಗುರುವಿನ ನೆನೆದು vijaya vittala ankita suladi ಅಗ್ನಿಹೋತ್ರ ಸುಳಾದಿ SRI GURUVINA NENEDU PANCHAPRANA AGNIHOTRA SULADI

Audio by Mrs. Nandini Sripad

 ಶ್ರೀವಿಜಯದಾಸಾರ್ಯ ವಿರಚಿತ  ಪಂಚಪ್ರಾಣಾಗ್ನಿಹೋತ್ರ ಸುಳಾದಿ 


 ರಾಗ ಮುಖಾರಿ 


 ಧ್ರುವತಾಳ 


ಶ್ರೀಗುರುವಿನ ನೆನೆದು ನಿರ್ಮಳನಾಗಿ ಸರ್ವ -

ಯಾಗ ಭೋಕ್ತನಾದ ನಾರಾಯಣಗೆ

ಬಾಗಿ ಭಕುತಿಯಿಂದ ಚಿಂತಿಸಿ ಹೃದಯದಲ್ಲಿ

ಆಗಮ ಸ್ತುತಿಯಿಂದ ವಿಹಿತ ತಿಳಿದೂ

ಭೋಗಗಳೆಲ್ಲ ಸರ್ವಯಾಗಗಳೆಂದು ಲೇ -

ಸಾಗಿ ಸಂಚರಿಪದು ಸತತವಾಗಿ

ಈ ಗಾತ್ರದಲ್ಲಿ ಪಂಚ ಪ್ರಾಣ ಯಜ್ಞ ಸ್ಥಳಗಳು

ಭಾಗಂಗಳುಂಟು ಒಂದೊಂದು ಕಡೆ

ಮೊಗದಲ್ಲಿ ಪ್ರಾಣನೆಂಬೊ ಹೋತ್ರನು ವಾಸ -

ವಾಗಿಪ್ಪಪಾನ ದೆಶೆಯಿಂದ ಉದ್ಗಾತ್ರನಾಗಿಪ್ಪ ಯಜಮಾನ -

ನಾಗಿಪ್ಪ ವ್ಯಾನನೆಂಬುವನು ನಾಭಿಯಲ್ಲಿ

ವೇಗ ಕಂಠದಲ್ಲಿ ಉದಾನನೆಂಬೋऽಧ್ವರಿಯ

ಪೂಗರ್ಭನಾಮಕ ಸಮಾನ ಸರ್ವಾಂಗದಲ್ಲಿ

ಈ ಗಣಿತದೈವರು ಪ್ರಾಣ ರೂಪಗಳಿಂದ

ಯಾಗದಧಿಕಾರಿಗಳ ದೇಹದೊಳಗೆ

ಯೋಗಿಜನನುತ ವಿಜಯವಿಟ್ಠಲರೇಯ 

ಭಾಗ ಮಾಡಿ ಕೊಡುವ ಉಂಡ ಪದಾರ್ಥವ ॥ 1 ॥ 


 ಮಟ್ಟತಾಳ 


ವದನದಲ್ಲಿ ಆಹವನೀಯ ಎಂಬಾಗ್ನಿ

ಹೃದಯದಲ್ಲಿ ಅಗ್ನಿ ಗಾರ್ಹಸ್ಪತ್ಯನು

ಇದೇ ದಕ್ಷಿಣಾಗ್ನಿ ನಾಭಿ ಸ್ಥಾನದಲ್ಲಿ

ಮುದದಿ ಶರಭಿ ಅಗ್ನಿ ನಾಭಿ ದಕ್ಷಿಣಭಾಗ

ಅದರ ತರುವಾಯ ಅವಶರಭಿ ಎಂ -

ಬುದು ಕಾಣೊ ನಾಭಿ ಉತ್ತರ ದಿಕ್ಕಿಲಿ

ಇದೆ ಇದೆ ಪಂಚಾಗ್ನಿ ಎನಿಸುವದು ಸಿದ್ಧಾ

ಪದುಮಲೋಚನ ನಮ್ಮ ವಿಜಯವಿಟ್ಠಲ ಹರಿಯ

ಪದಗಳ ಭಜನೆಯಲೀ ಬಗೆಯನು ಮಾಡುವದು ॥ 2 ॥ 


 ತ್ರಿವಿಡಿತಾಳ 


ಶರೀರ ಎಂಬೋದೆ ಅರಣಿ ಎನಿಪ ತಾ ಹಂ -

ಕಾರವೆಂಬೋ ಪಶು ಯೂಪಸ್ತಂಭ ಪ್ರಣವ

ಈ ರೀತಿಯೆ ಉಂಟು ಯಜ್ಞ ಪತ್ನಿಯೆ ಬುದ್ಧಿ

ತೋರುವದು ಬೆನ್ನು ವೇದಿಕವು

ಈ ರೋಮ ರೋಮಗಳು ದರ್ಭೆ ಎಂದದಿ ಕಾಣೊ

ಸಾರಿ ಸಾರಿಗೆ ಮೆಲುವ ಜಿಹ್ವೆ ಸ್ರುಕ್‍ ಸೃವಗಳು

ಚಾರು ಮನಸು ಯಜ್ಞ ಮಧ್ಯದಲಿ ಸಂಚಾರ

ಸಾರಿರಯ್ಯಾ ಸುಜನರು ಇನಿತು ನೋಡಿ

ಕಾರಣಕರ್ತನು ವಿಜಯವಿಟ್ಠಲರೇಯ 

ಸಾರಭೋಕ್ತನು ಪ್ರಾಣ ಯಜ್ಞದೊಳಗೆ ಇಪ್ಪಾ ॥ 3 ॥ 


 ಅಟ್ಟತಾಳ 


ಭೋಕ್ತ ಪುರುಷನ ಲಕ್ಷಣವನ್ನು ಕೇಳೋದು

ರಕ್ತ ಹರಿದ್ರಾ ವರ್ಣ ಕೂಡಿದ ಕಣ್ಣು

ಶಕ್ತ ಸರ್ವಕಾಲ ಜನನಾದಿ ವಿದೂರ

ಮುಕ್ತಿ ಪ್ರದಾತ ಪಾವಕ ಸದೃಶರೂಪ

ಭಕ್ತರು ಭಕ್ತಿಲಿ ಕೊಟ್ಟ ಪದಾರ್ಥವ

ವ್ಯಕ್ತದಲಿ ಕೈಕೊಂಡು ಮನ್ನಿಸುವನು

ಉಕ್ತ ಕ್ರಮದಿಂದ ಗುಣ ತೋರಿಸಿಕೊಂಬ

ಭಕ್ತವತ್ಸಲ ಸಿರಿ  ವಿಜಯವಿಟ್ಠಲರೇಯ 

ಭುಕ್ತಿಯವನಲ್ಲ ಬಲು ಲೀಲೆಗಾರನು ॥ 4 ॥ 


 ಆದಿತಾಳ 


ಉತ್ತಮ ಜ್ಞಾನಿ ತಾನು ಹೋತ್ರಾದಿಗಳ ತಿಳಿದು

ಮತ್ತೆ ಪಂಚಾಗ್ನಿ ಉಳ್ಳ ಸ್ಥಾನವೆ ಪತಿಕರಿಸಿ

ತುತ್ತು ತುತ್ತಿಗೆ ಆತ್ಮ ಅಂತರಾತ್ಮ ರೂಪಗಳು

ತುತ್ತಿಸಿ ಭೋಜನ ಮಾಡಲು ಬಲು ಪುಣ್ಯ

ಚಿತ್ತ ನಿರ್ಮಲ ಸರ್ವದೇವತಿಗಳು ಸ -

ಮ್ಮತ ಮಾಡಿಕೊಂಬೋರು ಇವನ ಕುಲಕೋಟಿ ಉದ್ಧಾರ

ಚಿತ್ತದೊಡಿಯರಂಗ ವಿಜಯವಿಟ್ಠಲರೇಯ 

ಅತ್ಯಂತ ಕೃಪೆಯಲ್ಲಿ ತೃಪ್ತಿಯ ಬಡಿಸುವ ॥ 5 ॥ 


 ಜತೆ 


ಪ್ರಾಣಯಾಗವ ತಿಳಿದು ನಡೆದ ಜನರಿಗೆಲ್ಲ

ಪ್ರಾಣನಾಗಿಪ್ಪ ವಿಜಯವಿಟ್ಠಲ ನಿತ್ಯ ॥

********