ರಾಗ: ಭೈರವಿ ತಾಳ: ತ್ರಿಪುಟ
ಸಾಕಿನ್ನು ಸ್ವಸ್ಥದಿ ಇರು ಕಂಡ್ಯ ಮನವೆ
ಏಕಿಂತು ತೊಳಲುವೆ ಬರಿದೆ ನೀ ಮನವೆ ಪ
ಏಕಾಗ್ರಚಿತ್ತದಿ ಗುರು ರಾಘವೇಂದ್ರರ
ಏಕೆ ನೀ ನೆನೆಯದೆ ಕೊರಗುವೆ ಮನವೆ ಅ.ಪ
ದೇಹವೆಂಬುದು ಇದು ಎಲುಬಿನ ಗೂಡು
ಊಹಿಸಿ ನೋಡಲು ಪಾಪದ ಬೀಡು
ದೇಹದಭಿಮಾನವ ಬಿಡದೆ ಈಡ್ಯಾಡು
ವಿಹಿತಮಾರ್ಗದಿ ನೀ ಗುರುವ ಕೊಂಡಾಡು 1
ಭವಬಂಧದೊಳು ನೀ ಬಳಲಲಿಬೇಡ
ಭವದೂರ ಗುರುವನು ಮರೆಯಲಿಬೇಡ
ಪವನಪತಿಯ ಪಾದಸ್ಮರಿಸದೆ ಇರಬೇಡ
ದುರ್ವಾದಿಗಳ ಕೂಡೆ ವಾದವು ಬೇಡ 2
ಅಧಿಕಾರ ಸಂಪತ್ತು ತಾ ಸ್ಥಿರವಲ್ಲ
ಬಾಧೆಗೊಳಿಪುದು ಪರರ ತಾ ಒಳಿತಲ್ಲ
ಅಧಿಕಾರ ಹೋದಂತು ಕೇಳುವರಾರಿಲ್ಲ
ಅಧಿಕ ಪುಣ್ಯವ ಗಳಿಸೆ ಬಹಳ ಲೇಸಲ್ಲ 3
ತುತ್ತಿನಚೀಲವ ನಂಬಲಿ ಬೇಡ
ಮತ್ತಿದಕಾಗಿ ನೀನಾಶಿಸಲಿ ಬೇಡ
ಮತ್ತನಾಗುತ ನೀ ತಿರುಗಲಿ ಬೇಡ
ಉತ್ತಮ ಗುರುವನು ಮರೆಯಲಿಬೇಡ 4
ಅಳಿವು ಉಳಿವು ಎಲ್ಲ ದೇವರಧೀನ
ಅಳಿವ ಕಾಯವು ಒಂದೇ ಮನುಜಗಧೀನ
ಇಳೆಯೊಳು ಶ್ರೀ ಕೃಷ್ಣವಿಠಲನ ಧ್ಯಾನ
ತಿಳಿದು ನೀ ಮಾಡುತ ಪಡೆಯಲೋ ಜ್ಞಾನ 5
***