..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಶ್ರೀ ಕೃಷ್ಣಾಮೃತಸಾರ
ಬಾರೋ ಎನ್ನ ಮನಕೆ ಗೋಪಾಲಕೃಷ್ಣ
ಬಾರೋ ಎನ್ನ ಮನಕ್ಕೆ ಪ
ಬಾರೋ ಎನ್ನ ಮನಕೆ ಭಾಮೆ ರುಕ್ಮಿಣೀ ಸಹ
ಸರಸೀರುಹಾಸನ ಶಿವಾದ್ಯಮರ ವಂದ್ಯ ಅ.ಪ.
ಮೋದಚಿನ್ಮಯ ಜಗಚೇಷ್ಟಕ ಬಲರೂಪ
ಯದುಪತೇ ಕೃಷ್ಣ ನೀನು ದೇವಕೀ ಸುತನೆನಿಸಿ
ಮೇದಿನಿಯಲಿ ಅವತಾರ ಮಾಡಿದ ಅಜ
ಸಾಧು ಸದ್ಭಕ್ತರ ಸದ್ಧರ್ಮ ರಕ್ಷಿಸಲು 1
ಪೂತನಿ ಶಕಟ ತೃಣಾವರ್ತ ವತ್ಸ ಬಕ
ಅಘಧೇನು ಕೇಶಿ ಚಾಣೂರ ಮುಷ್ಟಿಕ
ದೈತ್ಯ ಕುವಲಯ ಪೀಡಾ ಕಂಸಾದಿ ದುಷ್ಟರನ್ನ
ಸದೆದು ಭೂಬಾರವ ಇಳಿಸಿದಿ ಶೌರಿ2
ಸುಂದರ ವದನದಲ್ಲಿ ಜಗವೆಲ್ಲಾ ತೋರಿಸಿದಿ
ಉದ್ಧರಿಸಿ ಮಣಿಗ್ರೀವ ನಳಕೂಪರನ್ನ
ಮುಖಾದಿಂದ್ರಶ್ಚಾಗ್ನಿ ದಾವಾಗ್ನಿಯನು ನುಂಗಿ
ನಂದನ್ನ ವರ್ಣಾಲಯದಿಂದ ಬಿಡಿಸಿ ತಂದಿ 3
ನಾಗಪತ್ನಿಯರಿಗೂ ಕಾಳಿಂಗನಿಗೂ ಒಲಿದು
ನಗವನ್ನ ಎತ್ತಿ ಗೋ ಗೋಪಾ ಜನರ ಕಾಯ್ದಿ
ಉಕ್ಕುವ ಪ್ರೇಮದಿಂ ಸೇವಿಸಿದ ಗೋಪಿಯರ
ಭಕುತೀಗೆ ಮೆಚ್ಚಿ ಯೋಗ್ಯ ಸಾಧನ ಫಲವಿತ್ತಿ 4
ಸುದರ್ಶನಾಭಿದ ವಿದ್ಯಾಧರನ್ನ ಶಾಪದಿಂದ
ಪಾದ ಸ್ಪರ್ಶವನಿತ್ತು ಮೋಚನೆ ಮಾಡಿ
ಉದ್ಧರಾಕ್ರೂರ ಸ್ತ್ರೀ ವಾಯುಕ ಮಾಲಾಕಾರ
ಮೊದಲಾದವರ್ಗೂ ವಿಪ್ರ ಸ್ತ್ರೀಯರಿಗೂ ಒಲಿದಿ 5
ಬಲಭದ್ರ ಸುಭದ್ರ ಸಹ ಕೃಷ್ಣ ಜಗನ್ನಾಥ
ಮಾಲೋಲ ನಿನ್ನಯ ಬಾಲಲೀಲೆಗಳು
ಬಲು ಶುಭತಮ ಪಾಲ್‍ಬೆಣ್ಣೆಯ ಪ್ರಿಯ ಈಶ
ಪಾಲಾಬ್ಧಿಶಾಯಿ ಅಚ್ಚುತಾನಂದ ಗೋವಿಂದ 6
ಈರಾರು ಯೋಜನ ದ್ವಾರಕಾ ದುರ್ಗವು
ಸುರದ್ರುಮ ಲತೋದ್ಯಾನ ವಿಚಿತ್ರೋಪ ವನಗಳ್
ಪುರುಟ ಶೃಂಗೋನ್ನತ ಸ್ಫಟಿಕ ಅಟ್ಟಾಳ
ಗೋಪುರಗಳು ನವರತ್ನ ಸ್ವರ್ಣಗೃಹಗಳ್ 7
ಆಶ್ಚರ್ಯ ಕಡಲ್‍ಮಧ್ಯ ದ್ವಾರಕಾ ನಿರ್ಮಿಸಿ
ಅಚ್ಛನ್ನ ಭಕ್ತ ಸೇವಕರೊಡೆ ಇದ್ದಿ
ಮುಚುಕುಂದನಿಗೆ ಒಲಿದು ಕಾಲನ್ನ ಕೊಲ್ಲಿಸಿದಿ
ರಚಿಸಿದಿ ಮದುವೆಯ ಅಣ್ಣ ಬಲರಾಮಗೆ 8
ಸಿಂಧುಜಾ ಇಂದಿರಾ ಜನಕಜಾ ಸೀತೆಯೇ
ಪ್ರಾದುರ್ಭವಿಸಿಹಳು ರುಕ್ಮಿಣೀ ಭೈಷ್ಮಿ
ಸಿಂಧುಜನಕಾ ತೆರದಿ ಅಲ್ಲದೇ ಭೀಷ್ಮಕ
ಪುತ್ರ ದುಷ್ಟಗೆ ಸೋತು ಚೈದ್ಯನಿಗೆ ಕೊಡಲಿದ್ದ 9
ಅನಾದಿ ನಿತ್ಯ ನಿನ್ನ ಸತಿ ರಮಾ ರುಕ್ಮಿಣಿ
ಜ್ಞಾನ ತೇಜಃ - ಪುಂಜ ಭಕ್ತಿಪ್ರವಾಹ ಓಲೆ
ನಿನಗೆ ಕಳುಹಿಸಿದಳು ದ್ವಿಜವರ ಶ್ರೇಷ್ಠ
ಬ್ರಾಹ್ಮಣ ಅಚ್ಛಿನ್ನ ಭಕ್ತನ ಕೈಯಲ್ಲಿ 10
ಉನ್ನಾಮ ಉದ್ದಾಮ ಅಚ್ಚುತ ನೀ ನಿತ್ಯ
ಆನಂದ ಚಿತ್ತನು ಯದುಪತಿ ಕೃಷ್ಣ
ನೀನೇ ತನ್ನ ಪತಿ ಸಿರಿ ತಾನು ಎಂದು
ಅನಘ ಲಕ್ಷ್ಮೀಭೈಷ್ಮಿ ಪತ್ರದಿ ಹೇಳಿಹಳು 11
ಸುಧಾಕಲಶ ವಿಪ ಕಿತ್ತಿ ತಂದ ತೆರದಿ
ಚೈದ್ಯ ಮಾಗಧ ಸಾಲ್ವಾದಿ ಕಡೆಯಿಂದ
ಎತ್ತಿತಂದಿಯೋ ಸ್ವಯಂವರದಿಂದ ಶ್ರೀಭೈಷ್ಮಿಯ
ವಂದಿಸಿ ಶರಣಾದೆ ಕೃಷ್ಣ ರುಕ್ಮಿಣಿಗೆ 12
ಜಯ ಕೃಷ್ಣ ನೀ ರುಕ್ಮಿಣೀ ಸಮೇತದಿ ಬಾರೆ
ಜಯಭೇರಿ ತಾಡಿಸಿ ದ್ವಾರಕಾವಾಸಿಗಳು
ಗಾಯಕರು ನರ್ತಕರು ವಿಪ್ರಮುತ್ತೈದೆಯರು
ಜಯ ಜಯತು ಎನ್ನುತಾನಂದ ತೋರಿಸಿದರು 13
ಯದುಪುರಿಯಲಿ ಮನೆ ಮನೆಯಲಿ ಮಹೋತ್ಸವ
ಮುದದಿ ಅಲಂಕೃತವಾಗಿ ಸ್ತ್ರೀ ಪುರುಷರು
ಜ್ಯೋತಿ ಉಜ್ವಲ ದೀಪಾವಳಿ ಪೂರ್ಣಕುಂಭಗಳು
ಛಂದ ಗೊಂಚಲ ಪುಷ್ಪರತ್ನ ತೋರಣಗಳ್ 14
ಸಂಜಯ ಕುರು ಕೇಕಯಾದಿ ರಾಜರುಗಳು
ರಾಜಕನ್ಯೆಯರು ಗಜಗಳ್ ಓಡ್ಯಾಟ
ಮೂರ್ಜಗದೊಡೆಯ ನೀ ರುಕ್ಮಿಣಿಯ ಕರೆತಂದ
ಸುಚರಿತ್ರೆ ಪೊಗಳಿದರು ನರನಾರಿರೆಲ್ಲರು 15
ಚತುರ್ಮುಖ ವಾಯು ಶಿವ ವೈನತೇಯನು ಶೇಷ
ಶತಮುಖ ಸ್ಮರ ಅಹಂಕಾರಿಕ ಪ್ರಾಣ
ಮೊದಲಾದ ಅಮರರು ಮುನೀಂದ್ರರು ವೇದ
ಮಂತ್ರ ಘೋಷಿಸೆ ಮದುವೆ ವೈಭವ ಏನೆಂಬೆ 16
ಪೂರ್ಣಜÁ್ಞನಾತ್ಮನೆ ಪೂರ್ಣ ಐಶ್ವರ್ಯಾತ್ಮ
ಪೂರ್ಣಪ್ರಭಾನಂದ ತೇಜ ಶಕ್ತ್ಯಾತ್ಮ
ಆನಮಿಪೆ ಅಚ್ಚುತಾನಂತ ಗೋವಿಂದ
ಕೃಷ್ಣ ರುಕ್ಮಿಣಿನಾಥ ಜಗದೇಕ ವಂದ್ಯ 17
ಆದರದಿ ಸುರರಾಜ ವಿಪ್ರರ ವೃಂದ
ಯಾದವರುಗಳು ಶ್ರೀ ರುಕ್ಮಿಣಿಕೃಷ್ಣ
ನಿತ್ಯ ಸತಿಪತಿ ಮದುವೆ ನೋಡಿ ಹಿಗ್ಗಿದರು
ಶ್ರೀದ ನೀ ಕೊಡುವಿಯೊ ಸೌಭಾಗ್ಯ ಇದು ಪಠಿಸೆ 18
ಯೋಗೇಶ್ವರ ದೇವ ದೇವ ಶ್ರೀಯಃಪತೇ
ಅಗಣಿತ ಗುಣಪೂರ್ಣ ಅಪ್ರಮೇಯಾತ್ಮನ್
ಶ್ರೀಕೃಷ್ಣ ವಿಷ್ಣೋ ಶ್ರೀರಮಾರುಕ್ಮಿಣಿ
ಬಾಗಿ ಶರಣಾದೆ ನಿಮ್ಮಲ್ಲಿ ಮಾಂಪಾಹಿ 19
ರುಕ್ಮಿಣಿ ಪತ್ರಧರ ದ್ವಿಜವರ ಶ್ರೇಷ್ಠರು
ಧರ್ಮ ಭೀಮಾರ್ಜುನ ಸಹದೇವ ನಕುಲ
ಅಮಲ ಭಕ್ತಾಗ್ರಣಿ ವಿದುರನು ಇಂಥ
ಸುಮಹಾ ಭಕ್ತ ವಿನುತ ವಂದ್ಯನೇ ನಮೋ ನಮೋ 20
ಜಯತು ದೇವಕೀತನಯ ಸತ್ಯಾ ರುಕ್ಮಿಣೀಕಾಂತ
ಜಯತು ಜಗಜ್ಜನಾದಿಕರ್ತ ನಮೋ ನಮೋ
ಜಯತು ವಿಧಿತಾತ ಶ್ರೀ ಪ್ರಸನ್ನ ಶ್ರೀನಿವಾಸ
ಜಯತು ಜಯತು ದಶಪ್ರಮತಿ ಹೃತ್‍ಪದ್ಮಸ್ಥ 21
-ಇತಿ ಕೃಷ್ಣಾಮೃತಸಾರ ಸಂಪೂರ್ಣಂ -
***