..
kruti by pradyumna teertha ಪ್ರದ್ಯುಮ್ನತೀರ್ಥರು
ಪ್ರೇಮದಿಂದೊಂದಿಸುವೆ ಗುರುವೃಂದಕೇ
ಕಾಮಧೇನುವಿನಂತೆ ಕೊಡಲೆಮಗಭೀಷ್ಟವನು ಪ
ಸತಿಯ ಬೇಡುವನಲ್ಲ ಸುತರ ಬೇಡುವನಲ್ಲ
ಅತಿಶಯದ ಭಾಗ್ಯವನು ಕೇಳ್ವನಲ್ಲ
ರತಿಪತಿ ಆಟವನು ಖಂಡಿಸಿ ಬೇಗದಲಿ
ಮತಿ ತಪ್ಪಲೆನಗೆ ದುರ್ವಿಷಯದೊಳಗೆಂದು 1
ಶಕ್ತಿ ಬೇಡುವನಲ್ಲ ಯುಕ್ತಿ ಬೇಡುವನಲ್ಲ
ಭುಕ್ತಿ ಎನಗಿಲ್ಲೆಂದು ಕೇಳ್ವನಲ್ಲ
ಮುಕ್ತಿದಾಯಕ ನಮ್ಮ ವಿಟ್ಠಲನ ಚರಣದಲಿ
ಭಕ್ತಿ ದೃಢವಾಗೆನಗಿತ್ತು ರಕ್ಷಿಸಲೆಂದು 2
ಮಾನ ಬೇಡುವನಲ್ಲ ದಾನ ಬೇಡುವನಲ್ಲ
ಹೀನತನ ಬ್ಯಾಡೆಂದು ಕೇಳ್ವನಲ್ಲ
ಮಾನನಿಧೀಶ ನಮ್ಮ ಶ್ರೀ ನರಹರಿಯ ಚರಣವನು
ಕಾಣಿಸುವ ಜ್ಞಾನವನು ದಾನಮಾಡಲಿ ಎಂದು3
***