Showing posts with label ತುರುಗಾಯ ಬಂದ ಗೋಪಿಯ ಕಂದ rangavittala TURUGAAYA BANDA GOPIYA KANDA. Show all posts
Showing posts with label ತುರುಗಾಯ ಬಂದ ಗೋಪಿಯ ಕಂದ rangavittala TURUGAAYA BANDA GOPIYA KANDA. Show all posts

Friday, 1 October 2021

ತುರುಗಾಯ ಬಂದ ಗೋಪಿಯ ಕಂದ ankita rangavittala TURUGAAYA BANDA GOPIYA KANDA

Audio by Hallerao Kembhavi


ತುರುಗಾಯ ಬಂದ ಗೋಪಿಯ ಕಂದ
ಆನಂದದಿಂದ ||ಪ||

ಸುರ ನರ ತರು ಮೃಗ ಜಲಚರ ಮೋಹಿಸೆ
ತರಳೇರ ಮನಸೂರೆಯಾಗೆ ಕೊಳಲಿಂದ ||ಅ.ಪ||

ತಂದೆಯ ಕಂದನೆಂದು ಕೊಂಕುಳೊಳಿಟ್ಟು
ಕಂದನ ಕೆಳಗಿಟ್ಟು
ಅಂದುಗೆ ಗೆಜ್ಜೆ ಕಿವಿಗಳಿಗಿಟ್ಟು
ಮುತ್ತಿನ ಬಟ್ಟು
ಹೊಂದಿಸಿ ಗಲ್ಲದಲಿ ತಾನಿಟ್ಟು
ಕಸ್ತೂರಿಯ ಬಟ್ಟು
ಮುಂದಾಗಿ ಮೂಗಿನ ಮೇಲಳವಟ್ಟು
ಮನೆಬಾಗಿಲ ಬಿಟ್ಟು
ಕಂದರ್ಪನ ಶರದಿಂದ ನೊಂದು ಬಹು
ಕಂದಿಕುಂದುತಲಿಂದುವದನೆಯರು
ಇಂದಿರೇಶನಾನಂದದ ಗಾನಕೆ
ಚಂದ್ರಮುಖಿಯರೊಂದಾಗುತ ಬರುತಿರೆ ||೧||

ಮುರಳಿಯ ಸ್ವರಕೆ ಮೋಹಿತರಾಗೆ
ಕರುಗಳನು ತಂದು
ಕರದಿಂದಲೆತ್ತಿ ತೊಟ್ಟಿಲೊಳಗೆ
ಇರಿಸುತ್ತ ಹಾಲ
ಬೆರೆಸುತ್ತ ಮಜ್ಜಿಗೆ ಮೊಸರಿನೊಳಗೆ
ಪರಮಾತ್ಮನ ನೆನೆದು
ಹೊರಟರು ಬಿಸಿಲು ಚಳಿ ಮಳೆಯೊಳಗೆ
ಮನೆಮನೆಯೊಳಗೆ
ತರಳ ಬೆದರಿಸಿ ಮಾರ್ಜಾಲಕೆ ಮೊಲೆ
ತ್ವರಿತದಿ ಉಣಿಸುತ ಸರಿಸರಿಯೆನುತಲಿ
ಪರಿಪರಿ ಭ್ರಾಂತರಾಗಿ ನೋಡುತ
ಪುರಮಾರ್ಗಕೆ ಬರುವರು ನಿರುಕಿಸುತ ||೨||

ಮದನ ಶತಕೋಟಿ ತೇಜನು ಬಂದ
ಸ್ತ್ರೀರೆದುರಲಿ ನಿಂದ
ಅಧರಾಮೃತ ಪಾನ ಮಾಡಿರೆಂದ
ಬಾಯಾರಿದಿರೆಂದ
ಬದಿಯಲ್ಲಿ ಬಂದು ಕುಳ್ಳಿರಿ ಎಂದ
ಅವರಿವರನೆ ನೋಡ್ದ
ಚದುರೇರ ಮೋಹಕನೆ ನಾನೆಂದ
ವಾದ್ಯದ ರವದಿಂದ
ಸದಯನೆದುರ ರಂಭೆ ಊರ್ವಶಿ ಮೇನಕೆ
ಒದಗಿ ನಾಟ್ಯಗಳ ಚದುರತನದಲಾಡೆ
ಮಧುಸೂದನ ಭಕ್ತರ ಕಾಯ್ವುದಕೀ
ವಿಧದೊಳಗಾಡಿದ ರಂಗವಿಠಲ ತಾ ||೩||
****

ಮೋಹನ ರಾಗ ಆದಿತಾಳ (raga/tala may differ in audio)