Showing posts with label ಕನಕಗರ್ಭನ ಸುತ abhinavapranesha vittala suladi ಗರುಡದೇವ ಸುಳಾದಿ KANAKAGARBHANA SUTA GARUDA DEVA SULADI. Show all posts
Showing posts with label ಕನಕಗರ್ಭನ ಸುತ abhinavapranesha vittala suladi ಗರುಡದೇವ ಸುಳಾದಿ KANAKAGARBHANA SUTA GARUDA DEVA SULADI. Show all posts

Monday, 9 December 2019

ಕನಕಗರ್ಭನ ಸುತ abhinavapranesha vittala suladi ಗರುಡದೇವ ಸುಳಾದಿ KANAKAGARBHANA SUTA GARUDA DEVA SULADI

Audio by Mrs. Nandini Sripad

ಶ್ರೀ ಅಭಿನವ ಪ್ರಾಣೇಶ ವಿಠಲ ದಾಸರ ಕೃತ ಶ್ರೀ ಗರುಡದೇವರ ಸುಳಾದಿ

ರಾಗ ಮೋಹನ
ಧ್ರುವತಾಳ

ಕನಕಗರ್ಭನ ಸುತ ಕಾಲನಾಮಕನೀತ |
ಕಾನಕಾಸು ಪಕ್ಷ ಸರ್ವ ಪಕ್ಷೀಶನೆ |
ವಿನುತ ಕಶ್ಯಪ ಋಷಿ ತನುಭವನೆನಿಸಿದ|
ಫಣಿ ಭೂಷಣಿ ಫಣಿ ಸಮಕಕ್ಷದಿ ಸೇರಿದ|
ಅನುಜಹಿ ಮೂರುತಿ ಪೊಂಬಣ್ಣನೆ|
ಮುನಿಗಜಕೂರ್ಮರ ನುಂಗಿ ತೇಗಿದ ಧೀರ| 
ಮುನಿವಾಲಖಿಲ್ಯರ ವರವ ಪಡೆದ|
ವನಧಿಯೆಡೆಗೆ ಮಂದರ ಗಿರಿ ತಂದ|
ವಿರೋಚನ ಪುತ್ರ ಬಲಿ ಒಯ್ದ ಮುಕುಟ ತಂದೆ|
ವನದ ಶ್ಯಂದನನೊಡ ಸೆಣಸ್ಯಾಡಿ ಅಮೃತ - |
ವನು ತಂದ ಪಿತೃ ಗಣ ನಾಗಾನಂದ |
ಘನ ನಿಭ ಅಭಿನವ ಪ್ರಾಣೇಶ ವಿಠಲನ |
ಅನುರಾಗವನು ಪಡೆದ ವೀಪ ಗರುಡದೇವ || ೧ ||

ಮಟ್ಟತಾಳ

ಸೌಪರ್ಣಿಪತಿ ರುಗ್ಮವರ್ಣಕಾಯ|
ಕೂಪರಾದ ಮಧ್ಯ ನಾವಿಕರನು ಮೆದ್ದ|
ಶ್ರೀಪತಿಯನು ಪೊತ್ತು ಕರದಿಹ ಪದ ನಖದಿ|
ಭೂಪನ ಪ್ರತಿಬಿಂಬ ನೋಡಿ ನಲಿವ ದೇವ|
ಗೋಪತಿ ಅಭಿನವ ಪ್ರಾಣೇಶ ವಿಠಲನ |
ರೂಪ ರಾಜ್ಯವ ತೋರು ಮಾಪತಿಯ ವಾಹನ || ೨ ||

ತ್ರಿವಿಡಿತಾಳ

ಧುರಲಂಕಾಪುರದಲ್ಲಿ ಮರ್ಕಟವೀರರ |
ಹರಿಜಿತು ಸರ್ವಾಸ್ತ್ರದಿಂದ ಬಂಧಿಸೆ|
ಹರಿ ರಾಮರಾದೇಶವರಿತು ಧಾವಿಸಿ ಬಂದು|
ಉರಗಾಸ್ತ್ರ ಬಂಧನ ಪರಿಹರಿಸಿ|
ತರುಚರ ಗಢಣಕ್ಕೆ ಹರುಷವ ಬೀರಿದೆ|
ಶಿರಿಯರಸನ ಆಜ್ಞೆ ಪೂರೈಸಿದೆ|
ಶರಧರ ಅಭಿನವ ಪ್ರಾಣೇಶವಿಠಲನ
ಕರುಣದಿಂ ಸುರ ಕಾರ್ಯ ಮಾಳ್ಪ ವಿಪದೇವ || ೩ ||

ಅಟ್ಟತಾಳ

ಮುರಹರ ಶಿರಿ ಸತ್ಯಭಾಮ ದೇವಿಯ ಪೊತ್ತು|
ಸುರತರು ಪಾರಿಜಾತವ ತರಲೋಸುಗ|
ಹರಿ ಹಯಪುರ ಹೊಕ್ಕು ಕಿತ್ತಿ ಪೊತ್ತುತಂದ |
ಪರಮ ಸಮರ್ಥನೆ ಚರಣಕೆ ವಂದನೆ|
ಅರಿಧರ ಅಭಿನವ ಪ್ರಾಣೇಶವಿಠಲನ |
ಚರಣ ದೂಳಿಗಕಾರ ಉರಗಾರಿ ವೀರ || ೪ ||

ಅದಿತಾಳ

ಕಾಲನಿಯಾಮಕ ಹರಿಪದ ಸೇವಕ|
ಕಾಲೋತ್ಪಾದಕ ಹರಿಗುಣ ಗಾಯಕ|
ಕಾಲಾಂತರ್ಗತ ಹರಿಗುಣೋಪಾಸಕ|
ಕಾಲಮೂರ್ತಿ ಹರಿ ಚರಣಾರಾಧಕ|
ಕಾಲ ಕಾಲ ಹರಿಪದ ಸಂಚಾರಕ|
ಪಾಲಕ ಅಭಿನವ ಪ್ರಾಣೇಶವಿಠಲನ |
ಕಾಲ ಕಾಲಕೆ ಭಜಿಪ ಬುದ್ಧಿ ಕೊಡು ವೀಂದ್ರ || ೫ ||

ಜತೆ

ಕಾಲ ಮೂರ್ತ್ಯ ಅಭಿನವ ಪ್ರಾಣೇಶ ವಿಠಲನ |
ಮೇಲು ಮೂರುತಿ ತೋರು ಕಾಲನಾಮಕನೆ || ೬ |||| श्री ||      
**************