ankita ನರಸಿಂಹ
ರಾಗ: ತೋಡಿ ತಾಳ: ಮಿಶ್ರಛಾಪು
ದಾಸನೆಂದೆನಿಸೊ ಎನ್ನ ನಿನ್ನ ದಾಸನೆಂದೆನಿಸೊ ಎನ್ನ
ವಾಸುದೇವನ ನಿಜದಾಸವರೇಣ್ಯ ಪ
ಈಸಲಾರದೆ ಭವ ವಾರಾಶಿಯೊಳು ಮುಂದೆ
ಘಾಸಿಗೊಂಡಿಹೆನಯ್ಯ ಈ ಸಮಯದಿ ಸಲಹಿ ಅ.ಪ
ತರಳ ವೆಂಕಣ್ಣನಿಗೆ ಅನುಗ್ರಹಿಸಿ
ಧರೆಯೊಳಾದವಾನಿಗೆ
ವರ ಮಂತ್ರಿ ಎನಿಸಿ ನಿಜ ಶರಣರ ಪೊರೆಯಲು
ವರ ಮಂತ್ರಾಲಯದೊಳು ಬಂದು ನಿಂತೆಯಾ ಸ್ವಾಮಿ 1
ಭೃತ್ಯನೊಬ್ಬನು ಯಾಚಿಸೆ ಶೌಚದ ವೇಳೆ
ಮೃತ್ತಿಕೆಯನನುಗ್ರಹಿಸಿ ಗೃ-
ಹಸ್ಥನ ಸಂತಾನದಪಮೃತ್ಯು ಕಳೆದು ನಿಜ
ಭೃತ್ಯನ ಸದ್ಗೃಹಸ್ಥನಗೈಸಿದ ಸ್ವಾಮಿ 2
ಪ್ರಹ್ಲಾದರೆಂದೆನಿಸಿದೆ ಧರೆಯೊಳು ಮತ್ತೆ
ಬಾಹ್ಲೀಕರಾಗವತರಿಸಿದೆ
ಲೀಲಾವತಾರ ಶ್ರೀವ್ಯಾಸಯತೀಂದ್ರ
ಮೂಲ ರಾಮರ ಪೂಜೆಗೈದ ರಾಘವೇಂದ್ರ 3
ಭ್ರಷ್ಠನಾದೆನೊ ನಾನು ಅರಿಯದೆ ನಿನ್ನ
ಶ್ರೇಷ್ಠ ಮಹಿಮೆಗಳನ್ನು
ಇಷ್ಟರೊಬ್ಬರ ಕಾಣೆ ಸೃಷ್ಟೀಶನಾಣೆ ನಿ-
ನ್ನಷ್ಟಾಕ್ಷರಿಯಿತ್ತು ಕಷ್ಟಗಳ ಪರಿಹರಿಸಿ 4
ಮಂತ್ರ ತಂತ್ರಗಳರಿಯೆ ವಿಚಾರಿಸೆ ಹೇ
ಮಂತ್ರಾಲಯ ದೊರೆಯೆ
ಧಾತ್ರಿಯೊಳ್ ವರಗಂಜಿಗುಂಟಾಖ್ಯಪುರವಾಸ
ಧಾತೃಪಿತ ಲಕುಮಿ ನರಸಿಂಹನ ನಿಜದಾಸ 5
***