Showing posts with label ದಾಸ ಪುರಂದರನ vijaya vittala ankita suladi ಆತ್ಮಕಥನ ಸುಳಾದಿ DAASA PURANDARANA ATMAKATHANA SULADI. Show all posts
Showing posts with label ದಾಸ ಪುರಂದರನ vijaya vittala ankita suladi ಆತ್ಮಕಥನ ಸುಳಾದಿ DAASA PURANDARANA ATMAKATHANA SULADI. Show all posts

Monday, 23 November 2020

ದಾಸ ಪುರಂದರನ vijaya vittala ankita suladi ಆತ್ಮಕಥನ ಸುಳಾದಿ DAASA PURANDARANA ATMAKATHANA SULADI

 

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ  ಶ್ರೀವಿಜಯದಾಸರ ಮೂಲಸ್ವರೂಪ ಅವತಾರಾದಿ ಆತ್ಮಕಥನ ಸುಳಾದಿ 


 ರಾಗ ಭೈರವಿ 

 ಧ್ರುವತಾಳ 


ದಾಸ ಪುರಂದರನ ಪಾದವನು ಪೊಂದಿದೆನು

ಏಸು ಜನ್ಮದ ಪುಣ್ಯರಾಶಿ ಫಲಿಸಿತೊ ಎನಗೆ

ಕಾಸಿಗಾಗದವನು ಸಾಸಿರಕೆ ಬೆಲೆಯಾದೆ

ಸೂಸುವ ಭಕುತಿಯಲ್ಲಿ ಶ್ರೀಶನ ನಾಮ ಪೀ -

ಯೂಷವನ್ನುಂಡೆನೊ ಉಚಿತ ಸಾಧನದಿಂದ

ಲೇಸಾಗಿ ಪುರಂದರದಾಸರನ ಪಾಲಿಸಿದ

ಸಾಸಿರಪಾದ ನಮ್ಮ ವಿಜಯವಿಟ್ಠಲನ್ನ 

ದಾಸರ ದಾಸನಾದೆ ದೋಷ ವಿರಹಿತನಾದೆ ॥ 1 ॥


 ಮಟ್ಟತಾಳ 


ಇಂದಿನ ದಿನವಾನಂದದಲ್ಲಿ ನಾವು

ಇಂದಿನ ದಿನವಾನಂದ ದಿನವು

ಇಂದಿನ ದಿನಮಾನಂದದ ದಿನ ಪು -

ರಂದರದಾಸರು ಇಂದುವಿನಂತೆ

ಬಂದೆನ್ನ ಕಣ್ಣು ಮುಂದೀಗ ಸುಳಿಯಲು

ಸಂದರುಶನದಿಂದ ದಣಿದೆ ನಾ -

ರಂದವರದ ಪುರಂದರ ವಿಜಯವಿಟ್ಠಲನ ಕರುಣಾ -

ಸಿಂಧುವಿನೊಳಗೆ ನಾ ಪೊಂದಿದೆ ಮಿಂದೆನೊ ॥ 2 ॥


 ತ್ರಿವಿಡಿತಾಳ 


ಸುರಲೀಲನಾಗಿ ನಿಕಂಪನೆಂದೆನಿಸಿ ದ್ವಾ -

ಪರದಲ್ಲಿ ಜನಿಸಿದೆ ಕೆಲವು ದಿನ ಬಿಡದೆ

ತರುವಾಯ ವರ ಕಲಿಯುಗದಲ್ಲಿ ಈಗ ಜನನ -

ಮರಣವಾಗುತ ಬಂದು ಧರೆಯೊಳಗೆ ಮೆರೆದು

ಹರಿ ಕೃಪೆಯಿಂದಲಿ ಇವರ ಸದನದೊಳಗೆ

ತುರುಕರುವು ಆಗಿ ಜನಿಸಿದೆ ಸುಕೃತದಿಂದ

ಸಿರಿಪತಿಸ್ಥ ವಿಷ್ಣು ನಮ್ಮ ವಿಜಯವಿಟ್ಠಲನ್ನ ದಾ -

ಸರು ಪೇಳಲು ಕವನ ಎರಗಲು ಕರ್ಣಕ್ಕೆ ॥ 3 ॥


 ಅಟ್ಟತಾಳ 


ಶ್ರವಣ ಫಲದಿಂದ ಅವನಿಯೊಳಗೆ ಎರಡು

ಅವನಿ ಸುರರ ಜನ್ಮವನೀಗ ಧರಿಸಿದೆ

ಕವನ ಪೇಳಿದೆ ಸಂಸಾರದಲಿ ಇದ್ದು

ಅವಸರನಾಗಿ ಅವಧಿ ಇಲ್ಲದೆ ಮತ್ತೆ

ಅವನಿಯೊಳಗೆ ಬಂದೆ ಭವದೂರನಾಗಿ

ಕವಿನಾಮ ವಿಜಯವಿಟ್ಠಲನ್ನ ದಿವ್ಯ ನಾ -

ಮವನು ಕೊಂಡಾಡುವ ಅಧಿಕಾರಿ ನಾನಾದೆ ॥ 4 ॥


 ಆದಿತಾಳ 


ಎಪ್ಪತ್ತುಮೂರು ವರುಷ ಹೊಪ್ಪಾ ದೇಹದಲಿದ್ದೆ

ಇಪ್ಪ ಕಾಯದಲಿ ಅದರಪ್ಪದಂತೆ ಬಾಳಿ ತಿರುಗಿ

ಇಪ್ಪತ್ತುವಂದು ದಿನ ತಪ್ಪದಲೆ ಸುಲಭ ನರಕ

ಒಪ್ಪದಲೆ ನೋಡಿ ತಿರುಗಿ ಬಪ್ನೆನಯ್ಯಾ ಧರಿಗೆ

ಅಪ್ಪನಪ್ಪ ಮಹೀಭರ್ತ ವಿಜಯವಿಟ್ಠಲ ಒಲಿ -

ದಿಪ್ಪನು ಇಂದಿನಕಿಂತಧಿಕವಾಗಿ ಎನಗೆ ಬಿಡದೆ ॥ 5 ॥


 ಜತೆ 


ಗುರುಕೃಪೆಯಿಂದಲಿ ಅರಿದೆ ಈ ತೆರದಿಂದ

ಪರಮಾತ್ಮ ವಿಜಯವಿಟ್ಠಲನಂಘ್ರಿ ಸೇರಿದೆನೋ ॥


 ಈ ಸುಳಾದಿಯ ರಚನೆಯ ಸಂದರ್ಭ : 


ಕಾರ್ತೀಕಶುದ್ಧ ನವಮಿ ದಿವಸ ರಾತ್ರಿ ಭಜನೆಯ ಕಲಾಪ ಮುಗಿದು ಜನರು ಏಳಬೇಕೆನ್ನುವಷ್ಟರಲ್ಲಿ ಇದ್ದಕ್ಕಿದ್ದಂತೆಯೇ ಶ್ರೀವಿಜಯದಾಸಾರ್ಯರು ತಮ್ಮ ಆತ್ಮಕಥನರೂಪವಾದ ಈ ಸುಳಾದಿಯನ್ನು ಹಾಡಲುಪಕ್ರಮಿಸಿದರು. ಈ ಸುಳಾದಿಯನ್ನು ಅಲ್ಲಿದ್ದ ಜನರೆಲ್ಲ ಕಿವಿಗೊಟ್ಟು ಆಲಿಸುತ್ತಾ ಶ್ರೀದಾಸರು ದೇಹಬಿಡುವ ಸಮಯ ಅತಿ ಹತ್ತಿರ ಬಂತೆಂದು ತಿಳಿದು ದುಃಖತಪ್ತರಾಗಿ ನಿಂತುಬಿಟ್ಟರು. ಶ್ರೀದಾಸರಾಯರ ಸ್ವರೂಂಪಾಂಶದ ವಿಷಯವು ಎಲ್ಲರಿಗೂ ಸ್ಪಷ್ಟವಾಗಿ ತಿಳಿಯಿತು. ಆಗ ಶ್ರೀದಾಸರು ತಮ್ಮ ದೇಹದ ಅಗಲುವಿಕೆಯಿಂದ ಸ್ಥೈರ್ಯಕೆಡದಂತೆ ಉಪದೇಶಿಸಿ ಆಶೀರ್ವದಿಸಿದರು.


 ಮಟ್ಟತಾಳದ ನುಡಿ : 


 ಕಣ್ಣು ಮುಂದೀಗ ಸುಳಿಯಲು = ಆಗ ತಾನೆ ತಮಗೆ ಶ್ರೀಪುರಂದರದಾಸಾರ್ಯರು ದರ್ಶನ ನೀಡಿದುದರ ಕ್ರಮವರ್ಣನೆ .


 ತ್ರಿವಿಡಿತಾಳದ ಮತ್ತು ಅಟ್ಟತಾಳದ ನುಡಿ : 


ಶ್ರೀವಿಜಯದಾಸರು ತಮ್ಮ ಹಿಂದಿನ ಅವತಾರಗಳನ್ನು ಈ ತಾಳಗಳಲ್ಲಿ ಹೇಳಿದ್ದಾರೆ.

 ಎರಡು ಅವನಿಸುರರ ಜನ್ಮ = ಶ್ರೀಪುರಂದರದಾಸಾರ್ಯರ ಪುತ್ರ ಗುರುಮಧ್ವಪತಿ ಹಾಗೂ ಶ್ರೀವಿಜಯದಾಸಾರ್ಯರು.

ಶ್ರೀದಾಸರಾಯರು , ಈ ಹಿಂದಿನ ಜನ್ಮದಲ್ಲಿ ಶ್ರೀಪುರಂದರದಾಸಾರ್ಯರ ಕೊನೆಯ ಮಗನಾಗಿ ಹುಟ್ಟಿ ' ಗುರುಮಧ್ವಪತಿ ' ಎಂಬ ಅಂಕಿತರಾದರು. ಈ ಗುರುಮಧ್ವಪತಿಯಾಗಿ ಹುಟ್ಟುವ ಮುಂಚೆ ಶ್ರೀಪುರಂದರದಾಸರಾಯರ ಮನೆಯಲ್ಲಿದ್ದ ಗೋವುವೊಂದರ ಹೊಟ್ಟೆಯಲ್ಲಿ ಗಂಡು ಕರುವಾಗಿ ಜನಿಸಿದ್ದರು. ಆಗ ಶ್ರೀಪುರಂದರದಾಸರಾಯರು ಶ್ರೀಹರಿಸ್ತೋತ್ರಗಳನ್ನು ಹಾಡುತ್ತಿದ್ದುದನ್ನು ಶ್ರವಣ ಮಾಡಿ , ಆ ಶ್ರವಣಫಲದಿಂದಲೇ ' ಗುರುಮಧ್ವಪತಿ ' ಯಾಗಿ ತಾವು ಬಂದದ್ದನ್ನೂ , ಆ ಜನ್ಮದಲ್ಲಿ ಶ್ರೀಪುರಂದರದಾಸರಾಯರ ಸೇವೆ ಮಾಡಿದುದರ ಫಲವಾಗಿ ತಮಗೆ ಈ ಜನ್ಮ ಬಂದಿತೆಂದೂ ' ಎರಡು ಅವನಿಸುರರ ಜನ್ಮ ' ಎಂಬುದರಿಂದ ಸೂಚಿಸಿದ್ದಾರೆ.


 ಈಗ ಧರಿಸಿದೆ = ಈಗ ಅವತರಿಸಲು ಶ್ರೀಹರಿ ನನಗಿತ್ತ ಈ ನಿಯಮಿತ ಅವಧಿಯಲ್ಲಿ ;

 ಅವಸರನಾಗಿ = ಈಗ ಜನ್ಮತಾಳುವ ಸಮಯ ಒದಗಿದ್ದುದರಿಂದ ;


 ಆದಿತಾಳದ ನುಡಿ : 


 ಹೊಪ್ಪ = ಹೋಪ , ಬಿಟ್ಟುಹೋಗುವ (ಶಾಶ್ವತವಲ್ಲದ) ;

 ಅದರಪ್ಪಂತೆ = ಮಾನವ ಶರೀರ ಧರಿಸಿದಾಗ ಇರಬೇಕಾದ ನಿಯಮವನ್ನನುಸರಿಸಿ ;

 ಸುಲಭನರಕ = ದೇವತೆಗಳಿಗೆ ನರಕವೆಂದರೆ ಅಜ್ಞಾನಾವಸ್ಥೆ ;

 ಅಪ್ಪನಪ್ಪ = ಭೃಗುಋಷಿಗಳ ತಂದೆ ಶ್ರೀಬ್ರಹ್ಮದೇವರ ತಂದೆ ಶ್ರೀಮನ್ನಾರಾಯಣ ;


 ವಿವರಣೆ : 

 ಹರಿದಾಸರತ್ನಂ ಶ್ರೀಗೋಪಾಲದಾಸರು

*******