..
kruti by ಬೇಲೂರು ವೈಕುಂಠ ದಾಸರು belur vaikunta dasaru
ಲೋಕತ್ರಯ ಪಾಲನೇ ಶುಕ ಮುನಿವಂದ್ಯ ಹರಿ
ಮುಖ ಪೀಠದಲಿ ಕುಳಿತೂ ಪ
ವಿಕಸಿತ ವಡೆದೊಲವನಿತ್ತು ಚನ್ನರಾಯ
ಸುಖದಿ ನೀ ಪವಡಿಸಯ್ಯಾ ಅ.ಪ
ಭವ ಬೊಮ್ಮ ಮೊದಲಾದ ದಿವಿಜ ಸನ್ಮುನಿಗಳೂ
ನವವಿಧ ಭಕುತಿಯಿಂದಾ
ಭವರೋಗ ವೈದ್ಯ ನಿಂ ನವಸರದೂಳಿಗ
ದ್ಹವಣರಿತೋಲೈಸುವ ವಿವರವ ಕಂಡು
ಸವೆಯದ ಸುಖವಿತ್ತು ತವ ಮುಖ್ಯರನು ಕಳುಹಿ
ಸವಿಯಾದ ತೂಲತಲ್ಪದಿ
ನವಸುಂದರ ನಿದ್ದೆ ಪೊ
ತ್ತವನೇ ನೀ ಪವಡಿಸಯ್ಯಾ 1
ತುಂಬುರು ನಾರದನೆಂಬರು ವೀಣೆಯ
ಸಂಭ್ರಮದಿಂ ಮೇಳೈಸಿ
ಅಂಬುಜನಾಭ ನೀನೆಂಬ ಗೀತವ ಸವಿ
ದುಂಬಿ ಪಾಡಲು ಕೇಳುತಾ
ರಂಭೆಯೂರ್ವಸಿ ಹೊನ್ನ ಬೊಂಬೆ ತಿಲೋತ್ತಮೆ
ಯೆಂಬ ಮೇನಕೆ ಸಹಿತ
ಬೆಂಬಿಡದೆ ನಾಟ್ಯವಾಡಲು ನೋಡಿ ಭಕುತ ಕು
ಟುಂಬ ನೀ ಪವಡಿಸಯ್ಯಾ 2
ಪೆಡೆದಲೆಗನ ಮೃದುವಡೆದ ಹಾಸಿನ ಮೇ
ಲಿಡಿಕಿರಿ ವಡಸಿಸುವಾ
ಕಡು ಸೊಗಸಿನ ಗಂಧವಡಿ ಪೂವು ಕಸ್ತೂರಿ
ಯಡಕೆಲೆ ಸಂಭ್ರಮಿಸೇ
ಪೊಡವಿಗಧಿಕ ಶೇಷಗಿರಿ ಗಡಣಕೆಣೆಯೆನೇ ವೇಲಾಪುರ
ದೊಡೆಯ ವೈಕುಂಠ ಚನ್ನಿಗರಾಯ ನಿನ್ನ
ಮಡದಿ ರನ್ನಳು ಸೌಮ್ಯನಾಯಕಿ
ಯೊಡನೈಗೂಡಿ ಮೃಡನುತನೆ ಪವಡಿಸಯ್ಯಾ 3
***