Audio by Mrs. Nandini Sripad
ಶ್ರೀ ವಿಜಯದಾಸಾರ್ಯ ವಿರಚಿತ
ಗುರು ಮಹಾತ್ಮೆ ಸುಳಾದಿ
( ಮುಮುಕ್ಷುವು ಸಾಧನಾವಸ್ಥೆಯಲ್ಲಿ ಸ್ವಯೋಗ್ಯ ಗುರುಗಳ ಸ್ಥಾನ-ಮಾನ-ಮಹಾತ್ಮ್ಯೆಗಳನ್ನರಿತು , ಅವರಲ್ಲಿ ಭಕ್ತಿಯಿಂದ ಶಿಷ್ಯತ್ವ ವಹಿಸಿ ಅವಶ್ಯ ಸಂಪಾದನೀಯವಾದ ಅವರ ಸುಪ್ರಸನ್ನತೆಯನ್ನೂ , ತನ್ಮೂಲಕ ಅವರೇ ಉಪದೇಶಿಸಿದ ಬ್ರಹ್ಮವಿದ್ಯೆಯ ಶ್ರವಣ , ಮನನ , ನಿಧಿಧ್ಯಾಸನಾ ನಂತರ ಮೋಕ್ಷಪ್ರದನಾದ ಶ್ರೀಮುಕುಂದನಲ್ಲಿ ಸರ್ವೋತ್ಕೃಷ್ಟ ಭಕ್ತಿಯನ್ನು ಮಾಡಿದ ನಂತರ ದೊರೆತ ಆತನ ಅತ್ಯರ್ಥ ಪ್ರಸಾದದ ಮೂಲಕವೇ ಈ ಸಂಸಾರ ಬಂಧನದಿಂದ ಬಿಡುಗಡೆ ಹೊಂದಿ , ಸ್ವರೂಪಾನಂದಾನುಭವರೂಪ ಶಾಶ್ವತ ಪುರುಷಾರ್ಥವಾದ ಮೋಕ್ಷವನ್ನು ಹೊಂದಲು ಸಾಧ್ಯ ಎಂದು ಈ ಸುಳಾದಿಯಲ್ಲಿ ನಿರೂಪಿಸಿದ್ದಾರೆ . )
ರಾಗ ಮುಖಾರಿ
ಧ್ರುವತಾಳ
ಗುರುಮಂತ್ರವನ್ನೆ ಮಾಡು ಗುಣವಂತನಾಗಿ ಮನುಜಾ
ಗುರುತು ನಿನಗೆ ಪೇಳುವೆನು ಗುಪ್ತವಿಟ್ಟು
ಗುರು - ಲಘು - ಪಾಪಂಗಳು ದಹಿಸಿ ಪೋಗೋವು ನಿತ್ಯ
ಗುರುವೇ ಮುಖ್ಯನು ಕಾಣೊ ಸದ್ಗತಿಗೆ
ಗುರುಭಕುತಿ ಬೇಕೊ ವೈದಿಕ ಲೌಕಿಕಕ್ಕೆ
ಗುರು ಉಪದೇಶವಿಲ್ಲದೆ ವಿದ್ಯವಿಲ್ಲ
ಗುರುವೆ ಜಗದ್ಗುರು ತಾನಾದ ಕಾಲಕ್ಕೆ
ಭರತವರ್ಷದಲ್ಲಿ ಜನ್ಮ ಧರಿಸಿದಾಗ
ನರ ಯಃಕಶ್ಚಿತನಾಗೆ ಅವನಿಂದ ಉಪದೇಶ
ಗುರುಭಾವದಿಂದ ಕೊಂಡು ನಮಿಸಬೇಕು
ಅರೆಮರೆ ಮಾಡಸಲ್ಲಾ ಸ್ವರೂಪೋತ್ತಮನಲ್ಲ
ಹರಿ ಆಜ್ಞೆ ಅಂಥಾದ್ದೇ ಮೀರಲುಂಟೆ
ಗುರುಮುಖದಿಂದ ವಿದ್ಯಾಪ್ರಾಪ್ತವಾಗುವದೆಂದು
ವರಶ್ರುತಿತತಿಯಲ್ಲಿ ಪೇಳುತಿದಕೊ
ಸುರನರೋರಗ ಲೋಕದಲ್ಲಿದ್ದ ಕಾಲಕ್ಕೂ
ಗುರುವೆ ಕಾರಣಕರ್ತಾ ಶಿಕ್ಷಿಪುದಕೆ
ಹರಿಬ್ರಹ್ಮ ಮರುತಗೆ , ಮರುತ , ಗರುಡಾಹಿ ಶಿವಗೆ
ಹರಿ ಇಂದ್ರ ಪ್ರದ್ಯುಮ್ನಗೆ ಸುರಪ ಚಂದ್ರಾರ್ಕ ಯಮಗೆ
ತರಣಿ ವರುಣಮುನಿಗೆ ಭೃಗುವಾದಿಗೆ ಹೀಗೆ
ಗುರುವೆನಿಸಿಕೊಂಬೋರು ನಿಜಸ್ವರೂಪಾ
ತರತಮ್ಯ ಇದೆ ವ್ಯತ್ಯಾಸಯಿಲ್ಲಾ ಸತ್ಯ
ಧರೆಯೊಳು ಸಂಸಾರ ಪ್ರವೇಶಿಸೆ
ತರತಮ್ಯ ಪ್ರಯೋಜನವಲ್ಲಾ ವಿದ್ಯ ಮಾತ್ರ
ಇರಬೇಕು ಉಪದೇಶ ಕೊಳಬೇಕಲ್ಲಿ
ಹರಿವಾಯುಗಳಿಗೆಲ್ಲ ವಿದ್ಯಾಭ್ಯಾಸವೇಕೆ
ನರಲೀಲೆ ತೋರುವರು ಲೋಕಚರ್ಯಾ
ಉರಗಭೂಷಣ ಮಿಕ್ಕ ಜ್ಞಾನಾಂಶಕೇ
ಅರಿತು ಅರಿಯರು ಕಾಣೊ ಅವತಾರದಲ್ಲಿ ವಿದ್ಯಾ
ಗುರುಪ್ರಸಾದವೆ ಬೇಕು ಮನುಜಾಂಗದೀ
ತರತಮ ಇಲ್ಲ ಇಲ್ಲ ನೀಚ ಉತ್ತಮ ಉತ್ತು -
ಮರು ಪೇಳುವರು ನೀಚಗೆ ಉಪದೇಶ
ಉರುಕಾಲ ಇನಿತು ಇಪ್ಪ ಆಮೇಲೆ ಪಕ್ವಕಾಲ
ಬರಲಾಗ ತನಗಿಂದ ಒಂದೆರಡು ಗುಣದ
ಗುರುವು ಮೊದಲುಮಾಡಿ ಅಧಿಕಾಧಿಕವಾಗಿ
ಗುರು ದೊರಕುವನಯ್ಯಾ ಉಪದೇಶಕ್ಕೆ
ಸರಿಯೆನ್ನಿ ಇಲ್ಲಿಗೆ ಸಂಚಿತ ಆಗಾಮಿನಾಶ
ಪರಿಪರಿ ಪ್ರಾರಬ್ಧ ಭುಂಜಿಸುವ ಸಮಯ
ಬರಲಾಗಿ ನಿಜಗುರು ಪ್ರಾಪ್ತನಾಹಾ
ಕರುಣಾದಿಂದಲಿ ಇವನ ಯೋಗ್ಯತೆ ತಿಳಿದು ಸು -
ಸ್ಥಿರವಾದ ಮಾರ್ಗಭಜನೆ ತೋರಿಕೊಡುವಾ
ತರತಮ್ಯ ಇದ್ದರು ನಿಜಗುರು ಸಚ್ಚಿಷ್ಯ
ಪರಲೋಕದಲಿ ವುಂಟು ದೋಷವಲ್ಲಾ
ಎರಡೊಂದು ಯುಗದಲ್ಲಿ ಮಾತ್ರ ಸ್ವಲ್ಪು
ಕೊರತೆಯಿಲ್ಲದೆ ಕಲಿಯುಗದಂತೆಯಲ್ಲ ಇದೆ
ಪರ ಮೂಢಭಾವ ನರಜೀವಿಗೆ
ಧರಣಿಸುರನು ಮೂರುಜಾತಿಗೆ ಗುರು ಕಾಣೊ
ವರಣೋಚಿತ ಕರ್ಮ ಪೇಳಬೇಕು
ಗುರು ಉಪದೇಶವಿಲ್ಲದ ಮಂತ್ರ ವೃಥಾ -
ಕ್ಷರ ಕಾಣೊ ಫಲವಿಲ್ಲ ಸಿದ್ಧಿಸದು
ವರ ಅವರರಿಗೆ ಗುರುಬೇಕು ಗುರುಬೇಕು
ಸರಿ ಮಿಗಿಲು ಗುರು ದೊರಕಿದರು
ತೆರಳಿ ಪೋಗಲಿಬಹುದು ಕೇಳಿ ಕೇಳದೆ ಲೇಸು
ದರ್ಶನಗ್ರಂಥ ವಿದ್ಯಾಭ್ಯಾಸಕ್ಕೆ
ಗುರುಕುಲವಾಸವಾಗಿ ಶುಶ್ರೂಷ ಚನ್ನಾಗಿ
ಪರಮ ಭಕುತಿಯಿಂದ ಮಾಡಬೇಕು
ತಾರತಮ್ಯ ಜ್ಞಾನತತ್ವ ಓದಲೇಕೆ ನಿಜ
ಗುರು ಕರುಣದಿಂದಲಿ ಸಾಧ್ಯವಹದು
ಸರುವ ಧರ್ಮವೆ ತೊರೆದು ಗುರುಧರ್ಮ ನಡಿಸುತಿಪ್ಪ
ನರಗೆ ಆವಾವ ಭಯವಿಲ್ಲ ಕಾಣೊ
ಪರಮಪುರುಷ ನಮ್ಮ ವಿಜಯವಿಟ್ಠಲರೇಯನ್ನ
ಚರಣಕಾಂಬುವದಕ್ಕೆ ಗುರುದ್ವಾರ ಸಂಪಾದಿಸು ॥ 1 ॥
ಮಟ್ಟತಾಳ
ಭೂಸುರ ಭೂಭುಜಗೆ ಭೂಭುಜ ವೈಶ್ಯನಿಗೆ
ವೈಶ್ಯ ಚತುರಜಾತಿಗೆ ಶೂದ್ರ ತನ್ನವರಿಗೆ
ಲೇಶಬಿಡದೆ ಕರದು ಕರುಣದಿಂದಲಿ ಉಪ -
ದೇಶ ಮಾಡಲುಬಹುದು ಇದಕೆ ಸಂಶಯಸಲ್ಲಾ
ಲೇಸು ಲೇಸು ಅವಗೆ ವರಣೋಚಿತಜ್ಞಾನ
ನಾಶವಾಗದು ಕಾಣೊ ಶುಭಮನದಲಿ ಇಪ್ಪ
ದೇಶದೊಳಗೆ ಮಹಾ ಕೀರ್ತಿವಂತನಹಾ
ಭಾಸುರ ಮೂರುತಿ ವಿಜಯವಿಟ್ಠಲರೇಯ
ವಾಸವಾಗಿಪ್ಪನು ಅವರವರ ಬಳಿಯಾ ॥ 2 ॥
ತ್ರಿಪುಟತಾಳ
ಧರೆಯೊಳು ಭೂಸುರ ಬ್ರಹ್ಮೋಪದೇಶಕ್ಕೆ
ವರಬ್ರಾಹ್ಮಣ ತನಗೆ ದೊರಕಾದಿರಲು
ಸರಿಯಾಗಿದ್ದವನಲ್ಲಿ ವಿದ್ಯಾವಿದ್ಯಾದಿಂದ
ನಿರುತ ಗ್ರಹಿಸಬೇಕು ವಿನಯದಿಂದ
ಹಿರಿಯ ಸಮಾನಿಕ ಇಲ್ಲದಿದ್ದರೆ ಅ -
ವರನಿಗೇ ವಿದ್ಯ ಪೇಳುವಾಗ
ಇರಳು ಹಗಲು ಧಾರಣಶಕ್ತಿಯಿಂದ ನಿಂ -
ದಿರದೆ ಚಿಂತಿಸಬೇಕು ಬ್ರಹ್ಮವಿದ್ಯ
ಮರಳೆ ಭೂಸುರಜಾತಿ ಇಲ್ಲದಿದ್ದರೆ ದೇಶಾಂ -
ತರದಲ್ಲಿ ತಾನೊಬ್ಬನಿದ್ದರಾಗೆ
ಕರದು ತನ್ನಲ್ಲಿಗೆ ಬಾಹುಜನ ವಿದ್ಯವ
ಪರೀಕ್ಷಿಸಿ ಮನದೊಳು ಗುಣಿಸಿ ಅವನ
ಗುರುವಿದ್ದ ಗ್ರಾಮಕ್ಕೇ ಪೋಗಿ ವಿದ್ಯಾರಂಭ
ಕರಣಶುದ್ಧಿಯಿಂದ ಮಾಡಲಿಬೇಕು
ಎರಡನೆ ಜಾತಿಯು ದೊರಿಯದಿದ್ದಡೆ ವೈಶ್ಯ
ವರ ಶೂದ್ರಜಾತಿಯ ಕೇಳುವ ವಿವರ
ಪರಿಪರಿ ವಿಧವುಂಟು ಸಾಧನವಲ್ಲ
ಪರಮ ರಹಸ್ಯಕ್ಕೆ ಸಲ್ಲದು ಕಾಣೊ
ಧರೆಯೊಳು ಭಿಕ್ಷುಕ ಜಡಜೀವರ ನೋಡಿ
ಗುರುವು ಮಾಡಿಕೊಂಡ ಚತುರ್ವಿಂಶತಿ
ಸುರವಿದ್ಯಕ್ಕೆ ಮಾತ್ರ ಸ್ವೋತ್ತಮರಿಂದಲ್ಲದೆ
ಎರಡನೆಯುಪದೇಶ ಕೊಳಲಾಗದು
ಹರಿ ಇಚ್ಛೆಯಿಂದಲಿ ಸಂಸ್ಕಾರ ಬಲದಿಂದ
ಪರಿಪರಿ ಶ್ರುತಿಗೆ ಅವಿರೋಧವಾಗಿ
ಚರಿಯಾ ತೋರಿದರಾಗೆ ಮನಿಯೊಳು ಪಿತಾ ಭ್ರಾತಾ
ಪಿರಿಯರಾಜ್ಞಾದಿಂದ ತಿಳಿಯಬೇಕು
ತರುವಾಯ ತರುವಾಯ ತತ್ವ ವಿಚಾರಿಸಿ
ದುರಿತದಿಂದಲಿ ನರನು ಕಡೆ ಬೀಳುವಾ
ಸುರಪಾಲಕ ನಮ್ಮ ವಿಜಯವಿಟ್ಠಲರೇಯ
ತಾರತಮ್ಯ ಜ್ಞಾನವ ಕೊಟ್ಟು ಪಾಲಿಸುವ ॥ 3 ॥
ಅಟ್ಟತಾಳ
ಶತಕೋಟಿಗಾದರು ಉತ್ತಮ ಗುರು ಬೇಕು
ಸತತ ಗುರುಪತ್ನಿ ಗುರುಪುತ್ರ ಮಿಗಿಲಾದ
ಹಿತದವರ ಸೇವೆ ಪ್ರೀತಿಯಿಂದಲಿ ಮಾಡೆ
ಚ್ಯುತವಾಗದ ವಿದ್ಯಾ ಪರಿಪೂರ್ಣವಾಗೋದು
ಕ್ಷಿತಿಯೊಳು ಉತ್ತಂಕನೆಂಬುವನಾ ನೋಡು
ಗತಲೋಚನನಾಗಿ ಅಲ್ಲಿಂದ ಗುರುವಿನಿಂದಲಿ ಮಹಾ
ಅತಿಶಯವಾದ ಭೇದವಿದ್ಯ ಕಲಿತನು
ಚತುರಾಮೂರುತಿ ನಮ್ಮ ವಿಜಯವಿಟ್ಠಲರೇಯ
ಪ್ರತಿಪ್ರತಿ ದಿನದಲ್ಲಿ ಜ್ಞಾನವ ಕೊಡುತಲಿಪ್ಪಾ ॥ 4 ॥
ಆದಿತಾಳ
ಸುಲಕ್ಷಣ ಗುರುವಿನ ಸಂಪಾದಿಸಿಕೊಂಡು
ಕಾಲಕಾಲಕ್ಕೆ ಮಹಾಬುದ್ಧಿವಂತನಾಗು
ಹೇಳಿ ಕೇಳುವದೇನು ಅನ್ಯಮತವೆ ಪೊಂದಿ
ಕೀಳು ಗತಿಗೆ ಪೋಗಿ ಬೀಳದಿರೊ ಮನಜಾ
ಮೂರ್ಲೋಕದೊಳಗೆ ತಿಳಿ ನಿರ್ಮಲ ಮರುತಮತ
ಆಲಿಸಿ ಕೇಳಿದರೆ ವೈಕುಂಠ ಮುಟ್ಟುತಿದೆ
ಏಳಲಾ ಮಾಡದಿರು ಎಲ್ಲ ಕಾಲದಿ ನಿನಗೆ
ಮೇಲು ಮೇಲು ವಿದ್ಯ ಪ್ರಾಪ್ತವಾಗುವ
ದು
ಪಾಲಸಾಗರಶಾಯಿ ವಿಜಯವಿಟ್ಠಲ ತನ್ನ
ಊಳಿಗದವರೊಡನೆ ವಾಲಗ ಕೊಡುವನು ॥ 5 ॥
ಜತೆ
ಗುರುದ್ವಾರವಿಲ್ಲದೆ ಸಾಧ್ಯ ಸಿದ್ಧನಾಗುವನೆ
ಗುರು ವಾಯು ವಿಜಯವಿಟ್ಠಲಗೆ ವಂದಿಸಬೇಕು ॥
ಲಘುಟಿಪ್ಪಣಿ :
ಧ್ರುವತಾಳದ ನುಡಿ :
ಗುರು-ಲಘು ಪಾಪಂಗಳು = ಅತಿದೊಡ್ಡ ಹಾಗೂ ಚಿಕ್ಕ ಪಾಪಗಳು - ಬ್ರಹ್ಮಹತ್ಯಾ , ಸುರಾಪಾನ , ಸ್ವರ್ಣಸ್ತೇಯ , ಗುರುದಾರಾಗಮನ , ತತ್ಸಂಸರ್ಗಿತ್ವ - ಈ ಐದು ಮಹಾಪಾತಕಗಳು ; ಗೋವಧ , ಸ್ತ್ರೀವಧ , ಬಾಲವಧ , ಭ್ರೂಣಹತ್ಯಾದಿ ಉಪಪಾತಕಗಳು ; ಮಾತೃ , ಪಿತೃ , ಭಾತೃ , ಮಾತುಲ , ಆಚಾರ್ಯ ಇವರ ನಿಂದಾದಿಗಳು ಅತಿಪಾತಕಗಳು .
ಜಗದ್ಗುರು ತಾನಾದ ಕಾಲಕ್ಕೆ = ಶ್ರೀವಾಯುದೇವರು ಗುರುಗಳಾಗಿ ಭೂಲೋಕದಲ್ಲಿ ಅವತರಿಸಿದಾಗ ;
ನರ ಯಃಕಶ್ಚಿತನಾಗೆ = ಶ್ರೀಮನ್ಮಧ್ವಮತದಲ್ಲಿ ಬಂದಿರತಕ್ಕವ ಒಬ್ಬನು ಅಲ್ಪಜೀವನಾದರೂ ನಮ್ಮಿಂದ ಗುರುಭಕ್ತಿ ಮಾಡಿಸಿಕೊಳ್ಳಲು , ಅರ್ಹವಾದ ಗುಣಗಳು ನಮಗೆ ಧೃಡಪಟ್ಟರೆ , ಆತನಲ್ಲಿ (ಶಾಂತಿಪೂರ್ವಕವಾಗಿ) ಉಪದೇಶಗೊಂಡು ನಮಿಸಬೇಕು ;
ವರ ಶ್ರುತಿತತಿಯಲ್ಲಿ ಪೇಳುತಿದಕೊ =
ಯಸ್ಯದೇವೇ ಪರಾಭಕ್ತಿರ್ಯಥಾ ದೇವೇ ತಥಾ ಗುರೌ ।
ತಸ್ಯೈತೇ ಕಥಿತಾಹ್ಯರ್ಥಾಃ ಪ್ರಕಾಶಂತೇ ಮಹಾತ್ಮನಃ ॥
( ಶ್ರೀಮ . ತಾ .ನಿ ) - ಎಂಬ ಶೃತಿಯೂ ಸೇರಿದಂತೆ , ಯಾರಿಗೆ ಶ್ರೀಹರಿಯಲ್ಲಿ ಉತ್ಕೃಷ್ಟವಾದ ಭಕ್ತಿ ಇದೆಯೋ , ಬ್ರಹ್ಮಾದಿ ದೇವತೆಗಳಲ್ಲಿ ಯೋಗ್ಯತಾನುಸಾರವಾದ ಭಕ್ತಿ ಇದೆಯೋ , ಹಾಗೆಯೇ ಗುರುಗಳಲ್ಲಿಯೂ , ಯಥಾಯೋಗ್ಯವಾದ ಭಕ್ತಿ ಇದೆಯೋ ಅಂತಹ ಮಹಾನುಭಾವನಿಗೆ ಗುರುಗಳಿಂದ ಹೇಳಲ್ಪಟ್ಟ ಅರ್ಥಗಳು ಹೊಳೆಯುತ್ತವೆ.
ಶಿಕ್ಷಿಪುದಕೆ = ಜ್ಞಾನನೀಡುವುದಕ್ಕೆ ;
ಹರಿ = ಶ್ರೀಶೇಷದೇವರು ; ಸುರಪ = ದೇವತೆಗಳನ್ನು ಕಾಪಾಡುವ ಇಂದ್ರದೇವರು ; ಚಂದ್ರಾರ್ಕ = ಚಂದ್ರ ಸೂರ್ಯ ; ತರಣಿ = ಸೂರ್ಯ ;
ತರತಮ್ಯ ಪ್ರಯೋಜನವಲ್ಲಾ = ಸೋತ್ತಮರೇ ಗುರುಗಳಾಗಿರುವರೆಂಬ ನಿಯಮವಿಲ್ಲ - ಉದಾ : ತಾತ್ಕಾಲಿಕವಾಗಿ ಇಂದ್ರದೇವರಿಗೆ ಬೃಹಸ್ಪತಿಗಳು ಗುರುಗಳಾಗಿರುವಂತೆ , ತಮಗಿಂತ ಅವರರಾದವರಿಗೂ ಕೂಡ ಗುರುತ್ವವು ಕೆಲವುಕಡೆ ಕಾರಣವಿಶೇಷದಿಂದ ಆಗುವದು. ಅಂತಹವರೂ ಕೂಡ ಮರ್ಯಾದೆಗೋಸ್ಕರ ಪೂಜ್ಯರೇ . ಆದರೆ ಸ್ವರೂಪೋತ್ತಮ ಗುರುಗಳು ಹೇಗೆ ಪೂಜ್ಯರೋ ಹಾಗೆ ಪೂಜ್ಯರು ಅಲ್ಲವೇ ಅಲ್ಲ ;
ನರಲೀಲೆ ತೋರುವರು = ದೇವತೆಗಳು ಮನುಷ್ಯಲೋಕದಲ್ಲಿ ಅವತರಿಸಿದಾಗ , ಅವರಿಗೆ ಮನುಷ್ಯರಂತೆಯೇ ಪ್ರವೃತ್ತಿಯು , ಜ್ಞಾನಬಲಾದಿಗಳ (ಆಚ್ಛಾದನವು) ಮರೆಮಾಚುವಿಕೆಯೂ , ವರ್ಣಾಶ್ರಮೋಚಿತ ವಿದ್ಯಾಭ್ಯಾಸವೂ ಧರ್ಮವೆಂದು ತಿಳಿಸಲು ಶ್ರೀಕೃಷ್ಣ , ಭೀಮರು ಕ್ರಮವಾಗಿ ಸಾಂದೀಪನಾಚಾರ್ಯರು ಹಾಗೂ ಬಲರಾಮರಲ್ಲಿ ಅಧ್ಯಯನ ಅಭ್ಯಾಸ ಮಾಡಿರುವರು ;
ಉರಗಭೂಷಣ = ರುದ್ರದೇವರು ;
ಮನುಜಾಂಗದೀ = ಮನುಷ್ಯ ಶರೀರದಲ್ಲಿರುವಾಗಲೂ ;
ನಿಜಗುರು = ಸ್ವರೂಪೋದ್ಧಾರಕ ನಿಯತ ಗುರುಗಳು ;
ಮೂರು ಜಾತಿಗೆ = ಕ್ಷತ್ರಿಯ , ವೈಶ್ಯ ಹಾಗೂ ಶೂದ್ರ ಜಾತಿಗೆ ;
ವರಣೋಚಿತ = ಬ್ರಾಹ್ಮಣಾದಿ ವರ್ಣ ಉಚಿತ ;
ದರ್ಶನಗ್ರಂಥ = ಶ್ರೀಮನ್ಮಧ್ವಶಾಸ್ತ್ರಕ್ಕೆ ;
ಸರುವ ಧರ್ಮವೆ ತೊರೆದು = ಸರ್ವ ಅವೈಷ್ಣವ ಧರ್ಮಗಳನ್ನು ಬಿಟ್ಟು ;
ಗುರುದ್ವಾರ = ಶ್ರೀಹರಿದರುಶನಕ್ಕೆ ಗುರುಗಳ ಅನುಗ್ರಹರೂಪವಾದ ಮಾರ್ಗ ಹಿಡಿ ;
ಮಟ್ಟತಾಳದ ನುಡಿ :
ಭೂಭುಜಗೆ = ಶ್ರೀಹರಿಯ ಬಾಹುಗಳಿಂದ ಉತ್ಪನ್ನ ಕ್ಷತ್ರಿಯ ;
ಚತುರಜಾತಿಗೆ = ಶೂದ್ರಜಾತಿಗೆ ;
ತ್ರಿಪುಟತಾಳದ ನುಡಿ :
ವಿದ್ಯಾವಿದ್ಯಾದಿಂದ = ಸಮಾನಸ್ಕಂಧನಲ್ಲಿ ತನಗೆ ತಿಳಿದ ಒಂದು ವಿದ್ಯೆಯನ್ನು ಅವನಿಗೆ ಹೇಳಿ , ಅವನಿಂದ ಅವನಿಗೆ ತಿಳಿದಷ್ಟನ್ನು ಗ್ರಹಿಸಿಕೊಳ್ಳುವುದು ;
ಮರಳೆ = ಹಾಗಿಲ್ಲದಿದ್ದರೆ ;
ಬಾಹುಜನ = ಕ್ಷತ್ರಿಯನ ;
ಅವನ ಗುರುವಿದ್ದ = ಆ ಕ್ಷತ್ರಿಯನಿಗೆ ಧರ್ಮೋಪದೇಶ ಮಾಡಿದ ಬ್ರಾಹ್ಮಣ ಗುರುವಿರುವ ;
ಎರಡನೆ ಜಾತಿಯು = ಕ್ಷತ್ರಿಯಜಾತಿ ;
ಸುರವಿದ್ಯಕ್ಕೆ = ಬ್ರಹ್ಮವಿದ್ಯೆಗೆ ;
ಅಟ್ಟತಾಳದ ನುಡಿ :
ಶತಕೋಟಿಗಾದರು = ನೂರು ಗೆಣ್ಣುಗಳುಳ್ಳ ವಜ್ರಾಯುಧಧಾರಿಯಾದ ಇಂದ್ರದೇವರಿಗೂ ;
ಆದಿತಾಳದ ನುಡಿ :
ಸುಲಕ್ಷಣ = ಉತ್ತಮ ಸ್ವಭಾವದ ;
ಅನ್ಯಮತವೆ ಪೊಂದಿ = ಶ್ರೀಮನ್ಮಧ್ವಮತವಲ್ಲದೇ ಇತರ ಯಾವುದೇ ಮತವನ್ನು ಆಶ್ರಯಿಸಿ ;
ಏಳಲಾ ಮಾಡದಿರು = ಉದಾಸೀನ ಮಾಡದಿರು ;
ಮೇಲು ಮೇಲು ವಿದ್ಯ = ಹೆಚ್ಚು ಹೆಚ್ಚು ವಿದ್ಯೆ ;
ವಾಲಗ = ಓಲಗ = ಸೇವೆ (ತನ್ನ ಸೇವಕರೊಡಗೂಡಿಸಿ ತನ್ನ ಸೇವೆ ಕೊಡುವ)
ಜತೆ :
ಸಾಧ್ಯ ಸಿದ್ಧನಾಗುವನೆ = ತನ್ನಿಂದ ಸಾಧಿಸಲ್ಪಡಬೇಕಾದ ಮುಕ್ತಿಯು ಕೈಸೇರುವುದೆ ? ಇಲ್ಲ !
ಲಘುಟಿಪ್ಪಣಿ : ಹರಿದಾಸರತ್ನಂ ಶ್ರೀಗೋಪಾಲದಾಸರು
************