..
ರಚನೆ: Dr. ಸುಧಾ ಆದಿಶೇಷ
ಹರಿದಿನ ಮಹಿಮೆ
ಹರಿದಿನಕೆ ಸಮನಾದ ಸರಿದಿನ ಮತ್ತಿಲ್ಲ
ಹರಿದು ಪಾಪದರಾಶಿ ಪರಗತಿಯ ತೋರ್ಪುದು||ಪ||
ಹರುಷದಿಂದಲೆ ಎದ್ದು ಉದಯ ಕಾಲದ ಕರ್ಮ
ಪರುಷೋತ್ತಮನ ಪೂಜೆಯೆಂದು ಪೂರೈಸಿ
ವರ ಶಾಸ್ತ್ರ ಶ್ರವಣದಿ ಮನವಿಟ್ಟು ಸುಖಿಸುತ
ಅರವಿಂದನಾಭನ ಅರಘಳಿಗೆ ಬಿಡದೆ ಭಜಿಸುತಿರು||೧||
ನಿರ್ಜರ ವಂದಿತನ ನಿಜ ಭಕುತಿ ಬೇಡುತ
ನಿರ್ಜಲ ಉಪವಾಸ ಜಾಗರವ ಮಾಡುತ
ಅರ್ಜುನ ಸಖನಿತ್ತ ಗೀತಾಮೃತದ ಪಾನದಿ
ಆರ್ಜಿಸು ಮೋಕ್ಷಸುಖ ನರಜನ್ಮ ಸಾರ್ಥಕವು||೨||
ಹರಿದಿನದ ಹಿರಿಮೆಯ ಹರಿಭಕ್ತರರಿವರು
ದ್ರುವರಾಜ ಪ್ರಹ್ಲಾದ ಅಂಬರೀಷರೆ ಸಾಕ್ಷಿ
ನರಕವ ತಪ್ಪಿಸುವ ಮರುತ ಮತವನನುಸರಿಸಿ
ಶ್ರೀಹರಿಯೆ ಸರ್ವೋತ್ತಮನೆಂದು ಕೊಂಡಾಡು||೩||
***