ಉಯ್ಯಾಲೆ ಉತ್ಸವಗೀತೆ
ಜೊ ಜೊ ಜೊ ಜೊ ಶ್ರೀರಂಗನಾಥ
ಜೊ ಜೊ ರಂಗನಾಯಕಿರಮಣನೆ ಭೂಮಿಕಾಂತ ಪ.
ಮಂಟಪವನು ಶೃಂಗರಿಸಿದರಂದು
ಎಂಟುದಿಕ್ಕಿಗೆ ಪುಷ್ಪಗಳಲಂಕರಿಸಿ ವೈ
ಕುಂಠವಾಸನ ಉಯ್ಯಾಲೆಮಂಟಪವನ್ನು
ಭಂಟರು ಬಂದು ಶೃಂಗಾರ ಮಾಡಿದರು 1
ಆಶ್ವೀಜ ಮಾಸದ ಶುಕ್ಲಪಕ್ಷದಲ್ಲಿ ಆ
ತುಲಾ ಮಾಸದ ಆರುದಿವಸದಲ್ಲಿ
ವಾರಿಜಮುಖಿಯರ ಒಡಗೊಂಡು ರಂಗ ವೈ
ಯ್ಯಾರದಿಂದಲೆ ಬಂದನು ಮಂಟಪಕೆ 2
ಮತ್ತೆ ಮರುದಿನದೊಳಗಚ್ಚುತನಂತ
ಕುತ್ತನಿಅಂಗಿ ಕುಲಾವಿ ಧರಿಸಿ
ರತ್ನದ ಪಾನುಪಟ್ಟಿಯು ಅರಳೆಲೆ ಕಟ್ಟಿ
ಭಕ್ತವತ್ಸಲನಾಡಿದನುಯ್ಯಾಲೆ 3
ಮೂರುದಿವಸದಲಿ ಮುರವೈರಿ ತಾನು
ಭಾರಿ ವಜ್ರದ ಮಕರಕಂಠಿಯಾ ಧರಿಸಿ
ನೀರಜನೇತ್ರನು ನಿಗಮಗೋಚರನು ವೈ
ಯ್ಯಾರದಿಂದಲಿ ಆಡಿದನುಯ್ಯಾಲೆ 4
ನಾಲ್ಕು ದಿವಸದಲಿ ನಂದನಕಂದ ನವ
ರತ್ನದ ಮಕರಕಂಠಿಯಧರಿಸಿ
ನಾನಾ ವಿಧದ ಪುಷ್ಪಮಾಲಿಕೆಯನು
ಧರಿಸಿ ನಾಗಶಯನನಾಡಿದನುಯ್ಯಾಲೆ 5
ಐದು ದಿವಸದಲಿ ಅಕ್ರೂರವರದಗೆ ಕರಿ
ದಾದ ಕುಲಾವಿ ಕಲ್ಕಿಯ ತುರಾಯಿ
ಗಂಡಭೇರುಂಡಪಕ್ಷಿಯ ಪದಕವನಿಟ್ಟು
ಪುಂಡರಿಕಾಕ್ಪನಾಡಿದನುಯ್ಯಾಲೆ 6
ಆರು ದಿವಸದಲಿ ಅಂಗಜನಯ್ಯಗೆ
ಕೂರೆ ಕುಲಾವಿ ವೈಯಾರದಿಂಧರಿಸಿ
ಹಾರ ಮಾಣಿಕ ರತ್ನ ಸರಗಳಳವಡಿಸಿ
ನೀರಜನೇತ್ರನಾಡಿದನುಯ್ಯಾಲೆ 7
ಸಪ್ತದಿವಸದಲಿ ರತ್ನ ಮೌಳಿಯ ಧರಿಸಿ
ಹಸ್ತದಿ ರತ್ನಹಾರ ಗಂಧವಿರಿಸಿ
ಅರ್ತಿಯಿಂದಲೆ ತನ್ನ ಮಿತ್ರರು ಸಹಿತಲೆ
ಬತ್ತವಳಿಸಿ ಬಂದ ಭಕ್ತವತ್ಸಲನು 8
ಓರೆಗೊಂಡೆಯ ವೈಯಾರದಿಂ ಧರಿಸಿ
ನಾರಿಯರೆಡಬಲದಲಿ ಕುಳ್ಳಿರಿಸಿ
ವಾರಿಜನೇತ್ರನು ನಡುವೆ ಕುಳ್ಳಿರಲು
ವಾರಾಂಗನೆಯರೆಲ್ಲ ಪಾಡುತಿರಲು 9
ಅಷ್ಟಮ ದಿವಸದಿ ಅರ್ತಿಯಿಂದಲೆ
ಕೃಷ್ಣಮೂರುತಿಗೆ ರಾಜಮುಡಿಯನು ಧರಿಸಿ
ಹಿಂದಿನ ತೋಳಿಗೆ ಬಂದಿ ತಾಯಿತನಿಟ್ಟು
ಇಂದಿರೆ ರಮಣನಾಡಿದನುಯ್ಯಾಲೆ 10
ಎಡಬಲದಲಿ ಭಕ್ತರು ನಿಂತಿರಲು
ಪಿಡಿದು ಚಾಮರ ವ್ಯಜನವ ಬೀಸುತಿರಲು
ಬೆಡಗಿನಿಮ್ಮ[ಡಕೆ]ಲೆ ಕರ್ಪೂರದ ಗುಳಿಗೆಯ ಎ
ನ್ನೊಡೆಯಗೆ ಭಕ್ತರು ಪಿಡಿದು ನಿಂದಿರಲು 11
ದಾಸರಿಸಂದವು ಧಗಧಗನುರಿಯೆ ಸಹ
ಸ್ರ ಸೂರ್ಯನಂತೆ ಪದಕಗಳೊಳೆಯೆ
ಲೇಸಾದ ರತ್ನದ ಪಾದುಕೆಯನು ಧರಿಸಿ
ವಾಸುದೇವನು ಆಡಿದನುಯ್ಯಾಲೆ 12
ಇಂದಿರೆ ರಮಣ ಒಂಭತ್ತು ದಿನದೊಳು
ಚಂದ್ರ ಪುಷ್ಕರಣೀಲಿ ತೀರ್ಥವನ್ನಿತ್ತು
ಬಂದು ಮಜ್ಜನವನ್ನು ಮಾಡಿ ವೆಂಕಟರಂಗ
ಇಂದಿರೆಸಹಿತಲೆ ನಿಂದ ಹರುಷದಲಿ 13
***