ಕಾಖಂಡಕಿ ಶ್ರೀ ಮಹಿಪತಿರಾಯರು
ಬೆಡಗು ಅಗಮ್ಯವಿದು ಶ್ರೀ ಗುರುವಿನ ಬೆಡಗು ಅಗಮ್ಯವಿದು ಪ
ಶೂನ್ಯಾಕಾರದ ಬಾಲೆ ಗಗನವ ಹಡೆದಳು ಏನೆಂದ್ಹೇಳಲಿ ಸೋಜಿಗೆ ಘನಲೀಲೆಯು 1
ವ್ಯೋಮಸುಂದರಿ ಜನಿಸಿದಳು ಮಾರುತನ ಭೀಮ ಪರಾಕ್ರಮನ ನೇಮದಿಂದಲಿ 2
ನಿಜ ವಾಯುಕುಮಾರಿ ಜನಿಸಿದಳು ತಾನೊಂದು ತೇಜ:ಪುಂಜದ ರೂಪವ ಮೂಜಗದೊಳು 3
ಥಳಥಳಿಸುವ ತೇಜದ ಖನಿಯು ಹಡೆದಳು ಜಲಮಯದ ರೂಪವ ನಲಿದಾಡುವ 4
ನಿರಾಕಾರದ ಕೂಸು ಭೂಮಿ ಹಡೆದುದ ಕಂಡು ಬೆರಗಾದ ಮೂಢ ಮಹಿಪತಿಯ ಗುರುಜ್ಞಾನದ 5
ಬೆಡಗು ತೋರಿದ ಗುರು ಒಡಿಯ ಸರ್ವೋತ್ಮನು ಪೊಡವಿಯೊಳೊಂದು ಸೋಜಿಗ ಗೂಢವಾಗಿಹ 6
ಕೌತುಕವನು ಕಂಡು ಕೈ ಮುಗಿದು ಮಹಿಪತಿ ತ್ರಾಹಿ ತ್ರಾಹಿ ತ್ರಾಹಿಯೆಂದ ಮನದೊಳಿನ್ನು 7
***