Showing posts with label ಪೊರೆಯೊ ಈ ವೇಳೆಯಲಿ ಕರಿಗಿರಿನಿಲಯ ಶ್ರೀ gopalakrishna vittala. Show all posts
Showing posts with label ಪೊರೆಯೊ ಈ ವೇಳೆಯಲಿ ಕರಿಗಿರಿನಿಲಯ ಶ್ರೀ gopalakrishna vittala. Show all posts

Monday, 2 August 2021

ಪೊರೆಯೊ ಈ ವೇಳೆಯಲಿ ಕರಿಗಿರಿನಿಲಯ ಶ್ರೀ ankita gopalakrishna vittala

ಪೊರೆಯೊ ಈ ವೇಳೆಯಲಿ ಕರಿಗಿರಿನಿಲಯ ಶ್ರೀ

ನರಹರಿಯೆ ಸುಕ್ಷೇಮವ ಪ.


ಪರಮಪ್ರಿಯರಿಗೆ ಇತ್ತು ವರ ಸೇವೆ ಕೈಕೊಂಡು

ನಿರುತದಿ ಪಾಲಿಸೆನ್ನ ಘನ್ನ ಅ.ಪ.


ದಾಸ ಗುರುಕುಲತಿಲಕರಿವರಿಗೆ ನೀನೀಗ

ಘಾಸಿಗೊಳಿಸುವುದುಚಿತವೆ

ದೋಷದೂರನೆ ಎಮ್ಮ ಮನವನರಿತವ ಜನರ

ದೂಷಣೆಗೆ ಗುರಿ ಮಾಳ್ಪರೆ

ಘಾಸಿಪಡುತಿಹರ ಆಯಾಸಪಡಿಸುವುದು ಬಹು

ಲೇಸಲ್ಲ ನಿನಗೆ ಥರವೆ

ಶೇಷಶಯನನೆ ಎಮ್ಮ ಮಾತು ಲಾಲಿಸಿ ಈಗ

ಪೋಷಿಸಲಿ ಬೇಕೊ ಸ್ವಾಮಿ ಪ್ರೇಮಿ 1

ಕಲ್ಪತರುವಂತಿಹರು ಶಿಷ್ಯವೃಂದಕೆ ಇವರು

ಇಪ್ಪರೋ ಚಂದ ಜಗದಿ

ತಪ್ಪದಲೆ ಆಯುರಾರೊಗ್ಯ ಕೊಟ್ಟು ನೀ

ಸರ್ಪಶಯನನೆ ರಕ್ಷಿಸೊ

ಒಪ್ಪದಿಂದಲಿ ಎಮ್ಮ ಸೇವೆ ಸಫಲವಗೊಳಿಸಿ

ಅಪ್ಪ ಸಂತಸವಪಡಿಸೊ

ಬಪ್ಪ ಪೋಪ ಕೀರ್ತಿ ಅಪಕೀರ್ತಿ ನಿನ್ನಡಿಗೆ

ಪುಷ್ಪದಂತರ್ಪಿಸುವೆನೊ ನೃಹರಿ 2

ಮನವಚನ ಕಾಯದಲಿ ಅನ್ಯ ಬಗೆಯದೆ

ಎಮ್ಮ ಗುರುಗಳನು ಸೇವಿಸುವೆವೊ

ವನಜಾಕ್ಷ ಲಕುಮಿಪತಿ ಎನ್ನ ಮನ ಪ್ರೇರಕನೆ

ಚಿನುಮಯನೆ ನೀ ಸಾಕ್ಷಿಯೋ

ಮನುಜರಿದನೇನ ಬಲ್ಲರು ಕೇಳು ತಂತಮ್ಮ

ಮನ ಬಂದ ತೆರ ನುಡಿವರೊ

ಎನಗದರ ಗೊಡವೇನು ನೀನಿರಲು ಭಯವೇನು

ಘನ ಮಹಿಮ ಪೊರೆಯೊ ಬೇಗ ಸ್ವಾಮಿ 3

ಪಂಚಪ್ರಾಣರು ಇವರು ವಂಚನಿಲ್ಲದೆ ಪೇಳ್ವೆ

ಮುಂಚೆ ನೀ ಕಾಪಾಡೆಲೊ

ಸಂಚಿತಾಗಾಮಿ ಪ್ರಾರಬ್ಧ ದುಷ್ಕರ್ಮಗಳು

ಮಿಂಚಿನಂದದಿ ಮಾಡೆಲೊ

ಸಂಚಿತಾಗಾಮಿಗಳ ಶಿಷ್ಯರಿಗೆ ಕಳೆವರಿಗೆ

ಕೊಂಚ ಬಾಧೆಯ ಕೊಡದೆಲೊ

ಸಂಚಿತಿತ ಪ್ರದನೆ ಎನ್ನ ಮೊರೆ ಲಾಲಿಸು

ಅಚಂಚಲದ ಕ್ಷೇಮವೀಯೋ ದೇವ 4

ಕಾಪಾಡುವ ಕರ್ತ ಈ ಪರಿ ಪ್ರಾರ್ಥಿಸುವೆ

ಶ್ರೀ ಪತಿಯೆ ದಯವ ಮಾಡೊ

ನಾ ಪೇಳ್ವುದಿನ್ನೇನು ನಿನ್ನ ಸೇವಾದಿಗಳು

ಕೃಪೆಯಿಂದ ಗುರುಗಳಿಂದ

ಪಾಪ ಪರಿಹರನೆ ನೀ ಕೈಕೊಂಡು ಕೀರ್ತಿಯನು

ಈ ಪೃಥ್ವಿಯಲ್ಲಿ ನೆಲಸೊ

ಗೋಪಾಲಕೃಷ್ಣವಿಠ್ಠಲನೆ ನೀ ಕಾಪಾಡು

ಕಾಪಾಡು ಜಗದ್ರಕ್ಷಕ ಹರಿಯೆ 5

****