Showing posts with label ನಿನ್ನ ನಾಮ ಪೀಯೂಷಾ vijaya vittala ankita suladi ಹರಿನಾಮ ಪ್ರಶಂಸನಾ ಸುಳಾದಿ NINNA NAMA PEEYOOSHA HARINAMA PRASHAMSANA SULADI. Show all posts
Showing posts with label ನಿನ್ನ ನಾಮ ಪೀಯೂಷಾ vijaya vittala ankita suladi ಹರಿನಾಮ ಪ್ರಶಂಸನಾ ಸುಳಾದಿ NINNA NAMA PEEYOOSHA HARINAMA PRASHAMSANA SULADI. Show all posts

Thursday 7 January 2021

ನಿನ್ನ ನಾಮ ಪೀಯೂಷಾ vijaya vittala ankita suladi ಹರಿನಾಮ ಪ್ರಶಂಸನಾ ಸುಳಾದಿ NINNA NAMA PEEYOOSHA HARINAMA PRASHAMSANA SULADI

 

Audio by Mrs. Nandini Sripad


ಶ್ರೀ ವಿಜಯದಾಸಾರ್ಯ ವಿರಚಿತ  ಶ್ರೀಹರಿನಾಮ ಪ್ರಶಂಸನಾ ಸ್ತೋತ್ರ ಸುಳಾದಿ 

( ಪರಮಾತ್ಮನ ನಾಮವೇ ಜ್ಞಾನಿಗಳಿಗೆ ಅಮೃತಾನ್ನವು. ಅನಂತಕಾಲದಲ್ಲಿ ಅದೇ ಶುಚಿಯಾದದ್ದು , ರುಚಿಯಾದದ್ದು. ಇದರ ರುಚಿಯನ್ನು ಬಲ್ಲವನು ಅನ್ಯರಸಕ್ಕೆ ಎಂದೂ ಮನಸ್ಸು ಮಾಡನು. ಶ್ರೀಹರಿಯ ನಾಮದ ಮಹಿಮೆಯನ್ನು ಅರಿತವನು ತನ್ನೊಳಗೆ ನಲಿದಾಡುವನು. ಘನಸಮರ್ಥನಾದ ಪರಮಾತ್ಮನ ನಾಮಸುಧೆಯನ್ನು ಉಂಡವನೇ ಧಿಟ್ಟನು. ಹಣ ಕೊಟ್ಟು ಶ್ರಮಬಟ್ಟು ಸಂಗ್ರಹಿಸುವ ವಸ್ತುವಿದಲ್ಲ. ಆರು ರಸಗಳಿಗಿಂತಲೂ ಹೆಚ್ಚು ರುಚಿಯಾದದ್ದು. ಈ ನಾಮಾಮೃತವನ್ನು ಎಷ್ಟು ಉಂಡರೂ ಬೇಸರಿಕೆ ಬಾರದು , ಅಜೀರ್ಣವಾಗದು ಎಂಬ ಮುಂತಾದ ಹರಿನಾಮಾಮೃತದ ಮಹತ್ವವನ್ನು ದಾಸರು ಈ ಸುಳಾದಿಯಲ್ಲಿ ಹೇಳಿದ್ದಾರೆ. ) 


 ರಾಗ ಬಿಲಹರಿ 


 ಧ್ರುವತಾಳ 


ನಿನ್ನ ನಾಮ ಪೀಯೂಷಾನ್ನವೊ ಜ್ಞಾನಿಗಳಿಗೆ

ನಿನ್ನ ನಾಮವೆ ರುಚಿ ಅನಂತ ಕಾಲದಲ್ಲಿ

ನಿನ್ನ ನಾಮವೆ ಸವಿದುಣ್ಣಲು ಸುಖಾ

ನಿನ್ನ ನಾಮದ ನೆಲೆಯನ್ನು ಬಲ್ಲ ಮಾನವ

ಅನ್ಯ ರಸಗಳಿಗೆ ಮನಸು ಎರಗಿಲೀಸಾ

ನಿನ್ನ ನಾಮವೆ ತಿಳಿದು ತನ್ನೊಳಗೆ ತಾನೆ ನಲಿದು

ಚನ್ನಾಗಿ ನಾಮಸುಧೆಯನ್ನು ನಾಲಿಗೆಯಲ್ಲಿ

ಕಣ್ಣೆವೆ ಹಾಕುವ ಅನ್ನಿತದೊಳಾದರು 

ಮನ್ನಿಸಿ ಹರಿಯ ಕಾರುಣ್ಯ ನಾಮಾಮೃತ 

ಬಿನ್ನಾಣದಲಿ ಸುರಿದವನ್ನ ಸೌಭಾಗ್ಯಕ್ಕೆ 

ಇನ್ನು ಎದುರುಂಟೆ ಅನಂತ ಜೀವಿಯೊಳು

ಜನ್ಮಾದಿರಹಿತ ಶ್ರೀವಿಜಯವಿಟ್ಠಲರೇಯಾ 

ನಿನ್ನ ಶರಣಾಗತರು ಧನ್ಯರೋ ತ್ರಿಜಗಕ್ಕೆ ॥ 1 ॥ 


 ಮಟ್ಟತಾಳ 


ಹರಿ ನಿನ್ನ ನಾಮ ಕರಣ ಶುದ್ಧಿಯಲ್ಲಿ ಪರೀಕ್ಷಿಸಿ ಪ್ರತಿದಿನ

ಸುರಿ ಸುರಿದು ಬಹಳ ಹರುಷನಾಗುವ ನರನು

ಧರಣಿಯೊಳಗೆವುಳ್ಳ ಚರಿಸುವ ರಸಂಗಳ

ಸರಕು ಮಾಡನು ಕಾಣೊ ಅರಿದು ಬಿಡುವಾ

ನಿರಾಕರಣೆಯನು ಮಾಡಿ ಪರಲೋಕಕೆ ಸುಖ -

ಕರವಿದು ಅಲ್ಲೆಂದು ಹರಿ ನಿನ್ನ ಸಿರಿಚರಣ

ಶರಣರ ಮನೋಗತ ನರರಾದರೂ ಒಮ್ಮೆ

ಅರಿಯಲಾರರು ಕಾಣೊ ಪರತತ್ವ

ವರರಂಗ ವಿಜಯವಿಟ್ಠಲ ನಿನ್ನ ಪರಮ 

ನಿರ್ಮಳ ನಾಮದಾರು ರಸ ಬಲು ಸವಿಯೋ ॥ 2 ॥ 


 ತ್ರಿವಿಡಿತಾಳ 


ಮನಸಾರ ಹರಿ ನಿನ್ನ ನಾಮಾಮೃತವು ಬಿಡದೆ

ನೆನೆಸುತ್ತ ಸವಿದುಂಡ ಮಾನವಗಾದರೂ

ಕನಸಿನೊಳಾದರೂ ಹಸಿವಿ ತೃಷಿಗಳಿಲ್ಲ

ಮನುಜೋತ್ತಮನಾಗಿ ಬಾಳುವನೋ

ಜನ ಸರತಿಯಲಧಿಕಾ ಕುಂದನುಡಿಗಳಿಲ್ಲ

ಮನಸಿಜನುಪಹತಿ ಇರಲಿಸಲ್ಲ

ಅನುಸರಿಸಿ ಅನ್ಯರನ್ನು ಬೇಡಿ ಕಾಡುವದಲ್ಲ

ತನುಶುಚಿಯಲ್ಲದೆ ಕ್ಲೇಶವಿಲ್ಲಾ

ಅನಿಶ ಬಿಡದೆ ಕಾಯುವ ವಿಜಯವಿಟ್ಠಲರೇಯಾ 

ಘನ ಸಮರ್ಥನ ನಾಮಸುಧಿ ಉಂಡವನೇ ಧಿಟ್ಟಾ ॥ 3 ॥ 


 ಅಟ್ಟತಾಳ 


ಧರೆ ಸುತ್ತಿ ಹಣವೀಸಾ ಕೊಟ್ಟು ತರುವದಲ್ಲ

ಮರೆಸಿ ಮೋಸದಲ್ಲಿ ವ್ಯವಹಾರ ಮಾಡುವದಲ್ಲ

ಇರಿಸಿದ ಪದಾರ್ಥ ಪೋಯಿತು ಎನಸಲ್ಲ

ಬೆರೆಸಿದಡೆಯಲ್ಲಿ ಅದೆ ಇಲ್ಲೆಂಬದಲ್ಲ

ತರಿಸುವದಲ್ಲ ಅನ್ಯರಿಂದ ಕೇಳಿ

ಧರಿಸುವದಲ್ಲ ಶಿರದ ಮೇಲೆ ಅನುದಿನ

ಅರಸರ ಬಾಗಿಲು ಕಾಯಿದು ಕೇಳುವದಲ್ಲ

ಅರಸಿ ಭುವನವೆಲ್ಲ ತಿರುಗಿ ನೋಡುವದಲ್ಲ

ಮೆರೆವ ಸುರರೊಳು ವಿಜಯವಿಟ್ಠಲನ್ನ 

ವರ ಸಮೀಪದಲ್ಲಿ ಸುಖ ಬಡಿಸುವದಿದು ॥ 4 ॥ 


 ಆದಿತಾಳ 


ಒಗರು ವಿಷ ಖಾರ ಹುಳಿ ಕಟು ಷಡುರಸಕೆ

ಮಿಗಿಲೆನಿಸುವದು ಅನಂತಾನಂತ ಮಡಿ

ಹಗಲು ಇರಳು ಸವಿದುಣ್ಣಲು ಬೇಸರಿಕೆ ಇಲ್ಲ

ಹೊಗೆ ಉರಿಯಿಂದ ಪರಿಪಕ್ವವಾಗುವದಲ್ಲ

ಉಗಳಿ ಕಳೆವದಲ್ಲಾ ಹೇಶಿಕೆ ಪುಟ್ಟಿತೆಂದು

ತೆಗೆಯೆಂದು ಒಬ್ಬರಿಗೆ ದೈನ್ಯ ಬಡುವದಲ್ಲ

ಜಗದೊಳು ನಾಮರಸ ಸುರಿಯೆ ಅವನ ವಂಶ

ಅಘದಿಂದ ದೂರರಾಗಿ ನಿತ್ಯತೃಪ್ತಿ ಬಡುವರು

ಅಘದೂರ ವಿಜಯವಿಟ್ಠಲನ ನಾಮಸುಧಿ

ವಿಗಡನಾಗದೆ ಸುರಿಯೆ ರಗಳೆ ಭವದನಿಗಳ ಹರಾ ॥ 5 ॥ 


 ಜತೆ 


ಹರಿ ನಾಮಾಮೃತವನ್ನು ಉಣಬಲ್ಲ ಜ್ಞಾನಿಗೆ

ಬರಿದೆ ನೆಚ್ಚನು ವಿಷಯಾ ವಿಜಯವಿಟ್ಠಲ ವಲಿವಾ ॥

********