by ಬಾಗೇಪಲ್ಲಿ ಶೇಷದಾಸರು
ರಾಗ : ಆನಂದಭೈರವಿ ತಾಳ : ಆದಿ
ಇಷ್ಟೇ ಬೇಡುವೆ ನಾ ನಿನಗೆ ಕರವ ಮುಗಿದು ।।ಪ।।
ಅಷ್ಟು ಸೌಭಾಗ್ಯ ಕೊಟ್ಟು ನೀ ಎನ್ನ
ಕಷ್ಟ ಬಿಡಿಸೆಂದು ಬೇಡೆನೋ ಕೃಷ್ಣರಾಯ ।।೧।।
ಸೃಷ್ಟಿಗೊಡೆಯ ನಿನ್ನಿಷ್ಟವಿದ್ದಂತಾಗಲಿ
ಶಿಷ್ಟ ಜನರ ಸಂಗ ಕೊಟ್ಟು ರಕ್ಷಿಸು ಎಂದು ।।೨।।
ಜ್ಞಾನಿಗಳರಸ ಜಾಣ ಪ್ರಾಣನಾಥವಿಠಲರಾಯ
ಸಾನುರಾಗದಿ ನಿನ್ನ ಧ್ಯಾನ ಕೊಟ್ಟು ಬಹು ಮಾನಿಯೆಂದೆನಿಸೆಂದು ।।೩।।
*********