ಶ್ರೀಶ ಕೊಳಲನೂದಿದನಿಂದು ಶ್ರೀಧರನಿಂದು
ಶ್ರೀಶ ಕೊಳಲನೂದಿದನಿಂದು
ವಾಸವ ವಂದಿತ ವಾಸಜ ಸೇವಿತ
ವಾಸುಕಿ ಶಯನನು ವಾರೆ ಸುನೋಟದಿ
ಶ್ರೀಶ ಕೊಳಲನೂದಿದನಿಂದು
ಶ್ರೀಧರನಿಂದು ಶ್ರೀಶ ಕೊಳಲನೂದಿದನಿಂದು || ೧ ||
ಬೆರಳ ಸಂದಿಲಿ ಮುರಳಿ ಪಿಡಿದು
ಮುರಾರಿ ತಾನು ಹರುಷದಿಂದಲಿ ಸ್ವರಗಳ ನುಡಿದು
ವಾರಿಜ ನೇತ್ರ ಅರಳು ಮಲ್ಲಿಗೆ ಸ್ವರಗಳ ಮುಡಿದು
ಕೊರಳ ಪದಕ ಹಾರ ಕೌಸ್ತುಭ ಶೋಭಿತ
ಮರಳು ಮಾಡುತ ಮಡದಿಯರೆಲ್ಲರ
ಶ್ರೀಶ ಕೊಳಲನೂದಿದನಿಂದು ಶ್ರೀಧರನಿಂದು
ಶ್ರೀಶ ಕೊಳಲನೂದಿದನಿಂದು || ೨ ||
ಗೌರಿ ಗಾಂಧಾರಿ ಗೌಳಿ ಪಂತು ಗೌರೀಶ ಭೂಷಣ
ಚೌರಿ ಸಾರಂಗ ಮೋಹನನಿಂತು ಕಾವೇರಿ ಶೃತಿ
ಭೈರವಿ ವ್ಯಾಗಡೆ ಊದುತ ನಿಂತು
ಮಾರಜನಕ ತಾನಾನಂದದಿಂದಲಿ
ವೀರ ಶ್ರೀ ಕೃಷ್ಣನು ವಿಧ ವಿಧ ರಾಗದಿ
ಶ್ರೀಶ ಕೊಳಲನೂದಿದನಿಂದು ಶ್ರೀಧರನಿಂದು
ಶ್ರೀಶ ಕೊಳಲನೂದಿದನಿಂದು || ೩ ||
ನಾರದ ತುಂಬುರು ನಾಟ್ಯವನಾಡಿ ನಳಿನ ನಾಭನ
ಗಿರಿಜಾ ಪತಿಯು ವಂದಿಸಿ ಬೇಡಿ
ಗೋಪಾಲ ಕೃಷ್ಣನ ಭಾರತಿ ಪತಿ ತಾ ಕೊಂಡಾಡಿ
ವರಗುರು ವಂದಿತ ವಿಜಯವಿಠಲರೇಯ
ಹರುಷವ ಪಡಿಸುತ ವನಿತೆಯರೆಲ್ಲರ
ಶ್ರೀಶ ಕೊಳಲನೂದಿದನಿಂದು ಶ್ರೀಧರನಿಂದು
ಶ್ರೀಶ ಕೊಳಲನೂದಿದನಿಂದು
ವಾಸವ ವಂದಿತ ವಾಸಜ ಸೇವಿತ
ವಾಸುಕಿ ಶಯನನು ವಾರೆ ಸುನೋಟದಿ
ಶ್ರೀಶ ಕೊಳಲನೂದಿದನಿಂದು ಶ್ರೀಧರನಿಂದು
ಶ್ರೀಶ ಕೊಳಲನೂದಿದನಿಂದು ಕೊಳಲನೂದಿದನಿಂದು ಕೊಳಲನೂದಿದನಿಂದು || ೪ ||
*******