Showing posts with label ಹತ್ತೈದು ವಿಂಶತಿ vijaya vittala ankita suladi ನಾಡಿ ಪ್ರಕರಣ ಸುಳಾದಿ HATTAIDU VIMSHATI NAADI PRAKARANA SULADI. Show all posts
Showing posts with label ಹತ್ತೈದು ವಿಂಶತಿ vijaya vittala ankita suladi ನಾಡಿ ಪ್ರಕರಣ ಸುಳಾದಿ HATTAIDU VIMSHATI NAADI PRAKARANA SULADI. Show all posts

Monday 9 December 2019

ಹತ್ತೈದು ವಿಂಶತಿ vijaya vittala ankita suladi ನಾಡಿ ಪ್ರಕರಣ ಸುಳಾದಿ HATTAIDU VIMSHATI NAADI PRAKARANA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ  ನಾಡಿ ಪ್ರಕರಣ ಸುಳಾದಿ 

 ರಾಗ ಹಂಸಾನಂದಿ 

 ಧ್ರುವತಾಳ 

ಹತ್ತೈದು ವಿಂಶತಿ ಮ್ಯಾಲೆರಡು ಸಾವಿರ 
ಮತ್ತೆ ನೂರೊಂದು ನಾಡಿ ದೇಹದೊಳಗೆ 
ತಥ್ಥಳಿಸುತಿಪ್ಪದು ಬಲಸವ್ಯ ವಿಡಿದು ಯಿ -
ನಿತ್ತು ಕೇಳುವದು ನಾಡಿಗಳ ಶಾಖಾ 
ಹತ್ತು ಹತ್ತೊಂದು ಮುಖ್ಯ ನಾಡಿಯ ನೂರರಿಂದ 
ಬಿತ್ತರಿಸಿ ಗುಣಿಸೆ ಅಯುತ ನೂರು 
ಸತ್ಯವಾಯಿತು ನೋಡಿ ಇದಕೆ ವಿವರವುಂಟು 
ಉತ್ತಮ ಗುಣದವರು ತಿಳಿಯಬೇಕು 
ಹತ್ತು ಹತ್ತು ಗುಣಿಸಿ ಅದರನ್ನು ಅಷ್ಟರಿಂದ 
ಜತ್ತಾಗಿ ಹೆಚ್ಚಿಸಲು ಸಾವಿರವಹುದು 
ಇತ್ತ ಮುಂದಕೆ ನೂರು ಇಟ್ಟುಕೊಂಡು ಒಂ -
ಭತ್ತರಿಂದಲಿ ಗುಣಿಸೆ ಒಂಭತ್ತು ನೂರು 
ಸುತ್ತದಿರಿ ಇನ್ನು ತ್ರಯನೂರು ಎಂಟರಿಂದ 
ಚಿತ್ತದಲ್ಲಿ ಗುಣಿಸೆ ಆದಾದಿದಕೊ ಇ - 
ಪ್ಪತ್ತು ನಾಲ್ಕು ನೂರು ಆ ತರುವಾಯ ಒಂ - 
ಭತ್ತು ಸಾವಿರದ ಆರುನೂರು 
ಆರ್ಥಿಯಿಂದಲೆ ಇದೆ ಆರಾರಿಂದ ಗುಣಿಸೆ 
ಹತ್ತೈದು ಯೇಳು ಸಾವಿರಾರು ನೂರು 
ಇತ್ತಂಡದಿಂದ ಪೂರ್ವೋತ್ತರ ನೋಡೆ ಅರ - 
ವತ್ತೊಂದು ಸಾವಿರೆಂಟೊಂದು ನೂರು 
ಮತ್ತೆ ಇದರ ಕೆಳಗೆ ಮ್ಯಾಲಿನ ಅಯುತ ನೂರು 
ಇತ್ತರೆ ಸಪ್ತೆರಡು ಆಯುತ ನಾಡಿಯು 
ನಿತ್ಯವೆ ಸರಿಯಿದಕೆ ನೂರೊಂದು ಮುಖ್ಯನಾಡಿ 
ತತ್ತಳಗೊಳ್ಳದಲೆ ಕೂಡಿಸಲು 
ಮತ್ತೆ ವುಳ್ಳದಕೆ ಹೆಚ್ಚುವಾದಿಷ್ಟೆ ನಾಡಿಗಳು 
ಮರ್ತ್ಯ ಲೋಕದ ಜನರು ಗುಣಿಸಿದರು 
ಅತ್ಯಂತ ಮಹಿಮಾ ನಮ್ಮ ವಿಜಯವಿಠ್ಠಲರೇಯ 
ಸ್ತೋತ್ರ ಮಾಡಿದವರ ಮನಕೆ ಇಂತು ತಿಳಿಪುವಾ ॥ 1 ॥

 ಮಟ್ಟತಾಳ 

ಇನಿತು ನಾಡಿಯ ಶಾಖ ಭೇದವನ್ನೆ ತಿಳಿದು 
ಗುಣಿಸುವದು ನಿತ್ಯ ಸಕಲರು ಮನದಲ್ಲಿ 
ಇನಿತರೊಳಗೆ ಮುಖ್ಯ ನೂರೊಂದು ನಾಡಿ 
ಅನಿತರ ಮಧ್ಯದಲಿ ಕೇವಲ ಪೆಸರಾಗಿ 
ಮಿನುಗುತಿಪ್ಪವು ದ್ವಾದಶ ನಾಡಿಗಳಲ್ಲಿ 
ಕೊನೆ ಮೊದಲೊಂದಾಗಿ ನವ ದ್ವಾರವೆ ವಿಡಿದು 
ಘನನಾಡಿ ವೊಂದೆ ಅಡಿ ಅಂಬರವ್ಯಾಪ್ತಿ 
ತನುವು ವ್ಯಾಪಿಸಿ ಕೊಂಡದು ಒಂದು ನಾಡಿ - 
ಯನು ತಿಳಿವದು ಒಂದೆ ನಾಡಿಯು ಒಂದೇ ಠಾ - 
ವಿನಲಿ ಪೊಂದಿಪ್ಪದು ತಿಳಿದರೆ ಬಲು ಸುಲಭ 
ಕ್ಷಣ ಬಿಡದಲೆ ಕಾವ ವಿಜಯವಿಠ್ಠಲರೇಯ 
ಚಿನುಮಯನಾಗಿ ಕಾಣಿಸುವನು ಒಂದರಲ್ಲಿ ॥ 2 ॥

 ತ್ರಿವಿಡಿತಾಳ 

ಒಂದೊಂದು ನಾಡಿಯಲಿ ಒಂದೊಂದು ನದಿಗಳು 
ಕುಂದದೆ ಉಂಟು ಹನ್ನೆರಡರಲ್ಲಿ |
ಮಂದಾಕಿನಿ ಇಡಾ ನಾಡಿಯಲ್ಲಿ ಭಾನು - 
ನಂದನೆ ಪಿಂಗಳಾನಾಡಿಯಲ್ಲಿ 
ಗಾಂಧಾರಿಯಲಿ ವುಂಟು ಕಾವೇರಿ ಹಸ್ತಿನಿಗೆ 
ಶಿಂಧು ನದಿಯೆನ್ನಿ ತಾಮ್ರಪರ್ಣಿ 
ಸಂದಿದೆ ಬಹು ಬಗೆ ಲಂಬುಶಿನಾಡಿಯಲ್ಲಿ 
ಛಂದುಳ್ಳ ಗೋಮತಿ ಮಧ್ಯನಾಡಿ -
ಯಿಂದ ಗಂಡಿಕೆ ನೋಡಿ ಸರಸ್ವತಿ ನಾಡಿಯಲ್ಲಿ 
ನಂದ ಕೃಷ್ಣವೇಣಿ ಕುಹದಿ ಸೋಮ - 
ನಂದನೆ ತಪತಿ ಶಂಖಿನಿ ನಾಡಿಯಲ್ಲಿ ವಾಸ - 
ವೆಂದು ತಿಳಿಯೊ ಗೋದೆ ವಾರುಣಿ ನಾಡಿಯಲ್ಲಿ 
ಅಂದವಾದ ಪೂರ್ಣ ಪೂರ್ಣ ಪಯಶ್ವಿನಿ -
ಯಿಂದ ಪುಟ್ಟಿಪದು ಅಲ್ಲಿಗಲ್ಲಿ 
ಪೊಂದಿ ಕೊಂಡಿಪ್ಪವು ಜ್ಞಾನಿಗಳು ಸ್ತುತಿಸಿ 
ಮಿಂದು ಪರಮ ಪದವಿಯ ಪಡಕೊಂಬುವರೊ 
ವೃಂದಾರಕ ವಂದ್ಯ ವಿಜಯವಿಠ್ಠಲರೇಯನ 
ಸಂದರುಶನ ಮಾಳ್ವ ಮಾಹತ್ಮ ಬಲ್ಲನು ॥ 3 ॥

 ಅಟ್ಟತಾಳ 

ಮಹತತ್ವಾತ್ಮಕ ಬಲಭಾಗದ ನಾಡಿ 
ಮಹದೇವತತ್ವಾತ್ಮಕ ಎಡಗಡೆ ನಾಡಿ 
ಇಹದನು ನೋಡಿ ಇವಕಿವಕೆ ಮಾನಿಗಳುಂಟು 
ಆ ಹಿರಣ್ಯೋದರ ವಾಯು ಇವರ ಪತ್ನಿ 
ಮಹಕೇಶ ಸರ್ಪ ಖಗೇಶ್ವರ ತರುವಾಯ 
ರೋಹಿಣಿ ನೀಲ ಮೊದಲಾದ ಸತಿಯರು 
ಶ್ರೀಹರಿಗೆ ಹೆಂಡರು ಕಾಣೊ ತಿಳಿವದು 
ಗುಹನ ಜನನಿ ವಾರುಣಿ ಸೌಪರಣಿಯು 
ಮೋಹದಿಂದಲಿ ನಾಡಿ ನಾಡಿಯಲಿಪ್ಪರು 
ರಹಸ್ಯವಿದು ಬಿಚ್ಚಿ ಬಿಸಾಟದೀರು 
ಕುಹಕರಿಗೆ ಪೇಳಿದರೆ ಫಲಿಸದು 
ಮೋಹನಮೂರುತಿ ನಮ್ಮ ವಿಜಯವಿಠ್ಠಲರೇಯ 
ಇಹನೊ ಜ್ಞಾನಾನಂದಮಯನಾಗಿ ॥ 4 ॥

 ಆದಿತಾಳ 

ಪೊಕ್ಕಳ ಭಾಗದಿಂದ ನಾಡಿಗಳೊಂದೊಂದು 
ದಿಕ್ಕಿಗೆ ಪೋಗಿಪ್ಪವು ಶೋಧಿಸಿ ನೋಡುವದು 
ಮುಕ್ಕಣ್ಣನುತ ವಾಯು ನಿತ್ಯ ಜೀವಿಗಳ 
ತಕ್ಕ ವ್ಯಾಪಾರವ ಮಾಡುವ ಬಿಡದೆ ದೇ - 
ವಕ್ಕಳ ಕೂಡ ತಾನೆ ಹರಿ ಪ್ರೇರಣೆಯಿಂದ 
ಭಕ್ತಿ ಭುಕ್ತಿಯ ಕೊಡುವ ವಂದನೇಕ ರೂಪನಾಗಿ 
ಸಿಕ್ಕ ಗೊಡನು ತನ್ನ ಭಕ್ತರ ನರಕದಲ್ಲಿ 
ರಕ್ಕಸಗಣಕೆ ಕುವೃತ್ತಿಯ ಪ್ರೇರಿಸಿ 
ಕಕ್ಕಸಗತಿಯಲ್ಲಿ ಸೇರಿಸುವ ಹರುಷದಲ್ಲಿ 
ಸೊಕ್ಕಿದವರಗಂಡ ವಿಜಯವಿಠ್ಠಲರೇಯ 
ದಕ್ಕುವ ವಿದರಂತೆ ಧೇನಿಪ ಸುಜನರಿಗೆ ॥ 5 ॥

 ಜತೆ 

ನಾಡಿ ಪ್ರಕರಣವನು ತಿಳಿದು ಕೊಂಡಾಡಲು 
ಗೂಡಿನೊಳಗಿದ್ದಂಥ ವಿಜಯವಿಠ್ಠಲ ಒಲಿವ ॥
*********


 ಇದರ ಗಣಿತ ಪ್ರಮಾಣ ವಿವರಣೆ : 

ತುಂದಿ ಮೂಲಾಧಾರವಿಡಿದು ಶಿರಃಪರಿಯಂತ ಬಹುಸೂಕ್ಷ್ಮದಿಂದ ಋಜುವಾಗಿ (ನೆಟ್ಟಗೆ) ಒಂದೇ ನಾಡಿಯಿದೆ.
ಇದೇ ಬ್ರಹ್ಮನಾಡಿ ನಾಡಿಯು. ಇದರಲ್ಲಿ 5 ವಿಭಾಗವಾದರೂ , ಸುಷುಮ್ನಾ ಎಂದು ಒಂದೇ ನಾಡಿಯೆಂದು ಕರೆಸುತ್ತದೆ.

1. ಪೂರ್ವಕ್ಕೆ - ಪ್ರಕಾಶಿನಿ , ಧವಳವರ್ನ , ವಾಸುದೇವ
2. ದಕ್ಷಿಣಕ್ಕೆ - ವೈದ್ಯುತಿ , ಪಿಂಗಳ , ಸಂಕರುಷಣ
3. ಪಶ್ಚಿಮಕ್ಕೆ - ವಜ್ರಿಕಾ , ಹರಿದ್ವರ್ನ , ಪ್ರದ್ಯುಮ್ನ
4. ಉತ್ತರಕ್ಕೆ - ಆರ್ಯ , ನೀಲವರ್ಣ , ಅನಿರುದ್ಧ
5. ಮಧ್ಯೆ - ಬ್ರಹ್ಮನಾಡಿ , ರಕ್ತವರ್ಣ , ನಾರಾಯಣ
ಇದರಲ್ಲಿಯೇ 32 ಕಮಲಗಳು. ಹೃದಯಕಮಲದಲ್ಲಿಯೇ ಬಿಂಬದರ್ಶನ. ಮುಖ್ಯ ಸುಷಮ್ನಾ ನಾಡಿಯೇ ಪ್ರಧಾನ.
ಈ ಸುಷಮ್ನಾ ನಾಡಿಗೆ ಮುಖ್ಯವಾಗಿ ಮೇಲಿನಂತೆ ನಾಲ್ಕು ಶಾಖಾನಾಡಿಗಳು .

 ಇಡಾ ನಾಡಿಯು ತುಂದಿಯಿಂದ ಎಡಭಾಗದಲ್ಲಿ ಬೆಳೆದು ಬಲಭಾಗ ಕಿವಿಗೆ ಹೋಗಿದೆ.
 ಪಿಂಗಳಾ ನಾಡಿಯು ತುಂದಿಯಿಂದ ಬಲಭಾಗದಲ್ಲಿ ಬೆಳೆದು ಎಡಕಿವಿಗೆ ಹೋಗಿದೆ.
ಇಡಾಂಶಗಳು - 50 ವಿಧ
ಪಿಂಗಳಾಂಶಗಳು - 50 ವಿಧ
ಸುಷುಮ್ನಾ - 1 ವಿಧ
ಹೀಗೆ , 101 ಮುಖ್ಯ ಪ್ರಧಾನನಾಡಿಗಳು.
ಈ 101 ನಾಡಿಗಳಿಗೆ ಒಂದೊಂದಕ್ಕೆ 100 ರಂತೆ ಶಾಖಾ ಬೆಳೆದು , 10100 ನಾಡಿಗಳು.
ಇದರಲ್ಲಿ , 100 ಶಾಖಾನಾಡಿಗಳು ಸುಷುಮ್ನಾದವು.
5000 ನಾಡಿಗಳು ಪಿಂಗಳಾಂಶದವು
5000 ನಾಡಿಗಳು ಇಡಾಂಶದವು.

ಈ 10100 ನಾಡಿಗಳಿಗೆ , 4 ಪ್ರಕಾರ ವಿಭಾಗ.
100 ನಾಡಿಗಳಿಗೆ 10 ಶಾಖೆ - 1000
100 ನಾಡಿಗಳಿಗೆ 9 ಶಾಖೆ - 900
300 ನಾಡಿಗಳಿಗೆ 8 ಶಾಖೆ - 2400
9600 ನಾಡಿಗಳಿಗೆ 6 ಶಾಖೆ - 57600

10100 ನಾಡಿಗಳಿಗೆ - 61900
ಮುಖ್ಯನಾಡಿಗಳು - 10100
ಒಟ್ಟು ನಾಡಿಗಳು - 72000
ಪ್ರಧಾನನಾಡಿಗಳು - 101
ಒಟ್ಟು - 72101

ಇದರಲ್ಲಿ , ಪಾದದಲ್ಲಿ 12000
ಮಧ್ಯದೇಹದಲ್ಲಿ 14000
ಬಾಹುಗಳಲ್ಲಿ 4000
ಶಿರಸ್ಸಿನಲ್ಲಿ 6000

ಬಲಭಾಗಕ್ಕೆ ಪುರುಷರೂಪಿ ಹರಿ (ಮಹತತ್ವಾತ್ಮಕ) - 36000
ಎಡಭಾಗಕ್ಕೆ ಸ್ತ್ರೀರೂಪಿ ಹರಿ(ಅಹಂಕಾರತತ್ವಾತ್ಮಕ)- 36000

ಶ್ರೀಹರಿಯು ಬೃಹತಿನಾಮಕನಾಗಿ ದೇಹದಲ್ಲಿನ 72000 ನಾಡಿಗಳಲ್ಲಿ ನೆಲೆಸಿರುವನು.
ಜೀವರಿಗೆ ಸ್ಥೂಲದೇಹಕ್ಕೆ ಆಯುಷ್ಯ - 100 ವರುಷಗಳು
360 ದಿನಗಳಿಂದ ಪೆಚ್ಚಿಸಲು = 36000 ದಿವಸಗಳಾಗುತ್ತವೆ.

ಹಿಂದೆ ಹೇಳಿದ , (ಇಡಾಂಶ ನಾಡಿಗಳು 50 ವಿಧ , ಪಿಂಗಳಾಂಶ ನಾಡಿಗಳು 50 ವಿಧ , ಸುಷಮ್ನಾ 1 ವಿಧ =) 101 ನಾಡಾಗಳ ವಿವರ.
ಹೃದಯದಲ್ಲಿ 32 + ಲಿಂಗದಲ್ಲಿ 1 + ಶಿರಸ್ಸಿನಲ್ಲಿ 39 + ಗುದದಲ್ಲಿ 1 + ಕಣ್ಣಿನಲ್ಲಿ 2 + ಕೈಯಲ್ಲಿ (5 + 5) 10 + ಕಿವಿಯಲ್ಲಿ (1 + 1) 2 + ಕಾಲಿನಲ್ಲಿ (5 + 5) 10 + ಬೆನ್ನಿನಲ್ಲಿ 2 + ಜಿಂಹ್ವೆ 1 = 100 + ಸುಷಮ್ನಾ 1 = 101

ಇದರಲ್ಲಿ ಪ್ರಧಾನ ನಾಡಿಗಳು 24 ಇವೆ.
ಇವುಗಳಲ್ಲಿ 12 ನಾಡಿಗಳು ಇಂದ್ರಿಯಗಳಲ್ಲಿರುವುವು.

ನಾಡಿ -> ಸ್ಥಾನ - ನದಿ - ಭಗವದ್ರೂಪ
1) ಇಡಾ -> ದಕ್ಷಿಣನಾಸ - ಗಂಗಾ - ಮಾಧವ
2) ಪಿಂಗಳ -> ವಾಮನಾಸ - ಯಮುನಾ - ಕೃಷ್ಣ
3) ಪುಂಸಾ -> ಬಲಗಣ್ಣು - ತಾಮ್ರಪರ್ಣಿ - ಅನಂತ
4) ಲಂಬುಶಿಖಾ -> ಎಡಗಣ್ಣು - ಗೋಮತಿ - ಮಧುಸೂದನ
(ಮಧ್ಯನಾಡಿ)
5) ಗಾಂಧಾರಿ -> ಬಲಕರ್ಣ - ಕಾವೇರಿ - ಶ್ರೀರಂಗ
6) ಹಸ್ತಿನಿ -> ವಾಮಕರ್ಣ - ಸಿಂಧು - ಕ್ಷೀರಾಬ್ಧಿಶಾಯಿ
7) ಸರಸ್ವತಿ(ಶಾರದ)->ಜಿಂಹ್ವೆ - ಗಂಡಿಕಾ - ತ್ರಿವಿಕ್ರಮ
8) ಕುಹನಾಡಿ -> ಗುದದಲ್ಲಿ - ನರ್ಮದಾ - ವಿಷ್ಣು
9) ಶಂಕಿನಿ -> ಲಿಂಗದಲ್ಲಿ - ತಪತಿ - ಶ್ರೀಧರ
10)ಸುಷಮ್ನ->ಮೂಲಾಧಾರವಿಡಿದು ಮೂರ್ಧ್ನಿ ತನಕ - ಸರಸ್ವತಿ - ಪದ್ಮನಾಭ
11) ವಾರುಣಿ ನಾಡಿ-> ಗೋದಾವರಿ - ನಾರಾಯಣ
12) ಪೂರ್ಣನಾಡಿ->ಪಯಶ್ವಿನಿ - ಹೃಷಿಕೇಶ
*************