..
kruti by ಬೇಲೂರು ವೈಕುಂಠ ದಾಸರು belur vaikunta dasaru
ಶನೀಶ್ವರ ದಂಡಕ
ಶ್ರೀಮನ್ಮಹಾ ಮಾರ್ತಾಂಡ ಪುತ್ರ ಮುನೀಂದ್ರಾದಿಸ್ತೋತ್ರ ಪವಿತ್ರ ವಿಚಿತ್ರಚರಿತ್ರ ಕಾಷ್ಯಪಾವತ್ಸ ಗೋತ್ರ ನಮೋ ಮಾರ್ಗ ಸಂಚಾರಿ ನೀನಾಗಿ ನಾನಾಗ್ರಹ ಸ್ಥಾನಕಂ ಬಂದು ನೀನೊಂದು ರಾಶಿಯೊಳ್ ಪೊಂದಿನಿಂದಾಕ್ಷಣಂ ಮಾಸ ಮೂವತ್ತು ಪರಿಯಂತರಂ ಸಂಧಿಸಲ್ ಜನ್ಮಾಷ್ಟ ದ್ವಾದಶ ಪಂಚಮ ಸ್ಥಾನದಿಂ ವಕ್ರಮಂ ಮಾಳ್ಪ ವೈಖರ್ಯವೇನೆಂಬೆ ಬ್ರಹ್ಮ ರುದ್ರಾದಿ ಯಕ್ಷ ಗಂಧರ್ವ ಮೌನೀಂದ್ರ ವಿದ್ಯಾಧರಾನೇಕ ಯೋ[ಗೀಂದ್ರ]ರಂ [ಪೊದ್ದು] ನಿಂದಲ್ಲಿ ನಿಲಲೀಯದೆ ದೇಶಾಂತ [ರ ಚರಿ] ಸಲಾಹಾರಮಂ ಕಾಣದೆ ತಾಪಶ್ಚಾ[ತ್ತಾಪ] ಮೋಪಾಸನಾ ಭಾಸತ್ವವೆ ಹೊಂದಿ ಮೌನತ್ವದಿಂದಷ್ಘ ಕಷ್ಟೋಪ ಕಷ್ಟಂಗಳಂ ಬಿಟ್ಟು ಈ ರೀತಿಯನು ಮಾಳ್ಪುದೆ ನಿನ್ನಯ ಚೇಷ್ಟೆ ವಿಲಾಸವೇನೆಂಬೆ ನಾ[ನೆಂ] ದೆಸೆ ಗುಂದು[ವರು] ಮಹಾಮೌನಿ ರುಂದ್ರ[ರು] ಸದಾ ಭೀತಿಯಿಂದ ಮಹಾರಾಯ ಚಕ್ರೇಶ್ವರಾನೇಕ ವೀರಾಧಿವೀರ ಗಣೇಶ್ವರರಂ ಅಹೋ ನಿನ್ನ ಕ್ರೂರಾನು ದೃಷ್ಟಿವುಂಟಾದ ಮಾರ್ಗಕ್ಕೆ ಮಹೀಪಾಲನೋ ಯೋಗಿ[ಯೋ] ಭ್ರಷ್ಟತ್ವವ ಹೊಂದಿ ಸಹಾಯಂಗಳಂ ಮಾಡದೆ ಗುಹಾರಣ್ಯ ವಾಸಸ್ತರಾಗಿ ಅಹೋರಾತ್ರಿಯೊಳ್ಮನಸ್ತಾಪಂಗಗಳಂಬಟ್ಟು ಮಾನಿನಿ ಮಕ್ಕಳಂ ಕಾಣದೆ ಮೈಮರತು ಚಂಡಾಲ ದೇಹತ್ವವ ಹೊಂದರೆ, ಶಂಭು, ಚಂಡಾಲ [ನನೋ]ಲೈಸನೆ, ಹರಿಶ್ಚಂದ್ರ ನಳನುಂ ಕಾಲಮಂ ಕಳೆಯರೆ ಭೂನಾಥರನಿಕಾರಾನಿ-ಕಾರತ್ವವ ಹೊಂದರೆ ಆ ಪಾಂಡುನಂದನರು, ನಿನ್ನದೊಂದಾಟೋಪಕಂ ಅಂಜದೆಯಿರುವರಾರಯ್ಯ ಮೂರ್ಲೋಕದೊಳ್ ಮಹಾಸ್ಥೂಲಕಾಯ ಅಹೋ ಕಷ್ಟಂಗೈಯ್ವ ಕಲಿಯುಗದ ಜನ[ತೆಗೆ] ಇನ್ನಾದ ಪಾಡೇನೆಂಬೆ ಇದ್ದವೂರೆಲ್ಲ ಕ್ಷುದ್ರ ಮಾಡಿ ಉಪದ್ರದಿಂ [ಸುಖ] ಮಂ ಹೋಗಿ ನಿಜಾನಂದವಾದಂಗಳಿಂ ತಿರುಗಿ ಗ್ರಾಸವಾಸಕ್ಕಿಲ್ಲದೆ ಸಾಲಮಂ ತೆಗೆದು ಕೊಡುವದಕ್ಕಿಲ್ಲದೆ ಕಡು ನಿಷ್ಟೂರವಂ ಪೇಳ್ದು ಚಿಂತಾದ್ರಿಯೊಳ್ಮುಳುಗಿ ನಿಜಾಶ್ರಯಮಂ ಮಾಡಿ ನಿಂದತ್ವವೆ ಹೊಂದಿ ಬಂಧುತ್ವದಿಂ ಭಜನೆಯಂಗೆಟ್ಟು ದಾರಿದ್ರವಂ ಬಿಡದೆ [ಬನ್ನಗೆಡು] ಎಂದಾರೈಸುವಿಯಲ್ಲೊ ಇದು ನಿನ್ನದಲ್ಲೊ ಸದಾನತ್ವವಲ್ಲೊ ಬೆನ್ನಟ್ಟಿ ನೀ ಬಿಡದೆ ಬಚ್ಚಿಟ್ಟ ದ್ರವ್ಯಮಂ ಕಣ್ಣಾರ ಕಾಣಿಸಿದ[ಂತೆ] ಕಳೆ ಕಳೆಸಿ ದುರ್ಬುದ್ಧಿಯೊಳ್ ಅಣ್ಣಗಂ ತಮ್ಮಗಂ ಮಗಂ[ಗಂ] ಅತಿವೈರತ್ವವಂಬೆಳೆಸಿಪುತ್ರ ಮಿತ್ರಾದಿಗಳ ಶತ್ರುತ್ವವೆನಿಸಿ ಅತಿಹೀನರಂ ಮಾಡಿ ಅನ್ಯಾಯಮಂ ಹೊರಿಸಿ ವ್ಯರ್ಥದೇಹಿಗಳೆನಿಸಿ ಊರೆಲ್ಲವೂ ಕರೆಸಿ ಸಜ್ಜನಭಯ ಚೋರ ಭಯ ರಾಷ್ಟ್ರಭಯವುಂಟಾಗಿ ವಾಜಿಯಿಂ ಕೆಟ್ಟು ಕಟ್ಟಾಳುತನ ಮಾತು ಕಟ್ಟದೆ ಸಭೆಯಲಿ [ಶಿಕ್ಷೆಕೊಂ]ಬವರು ಕೊಡುವ ಮನಸಿಲ್ಲ[ವೆಂದು] ಕೆಲವರನು ಹದಗೆಡಿಸಿ ಉಟ್ಟ [ಬಟ್ಟೆಯು]ಮಂ ಕಳೆದು ಹಿಟ್ಟಿಗು ಕಷ್ಟವಾಗಿ ಅಟ್ಟುಕೊಂಬುವ ಪಾತ್ರೆಗವಕಾಶ ತಪ್ಪಿಸಿ ಪರರ ಮನೆಯನು ಸೇರಿ ಪರಿಪಾಟು ಬಿದ್ದಲ್ಲಿ ಮಡದಿ ಸುತರೊಂದು ದೆಸೆ ತಾನೊಂದು ದೆಸೆಯಲ್ಲಿ ಒಡಲು ಹೊರೆಯುತ್ತಿರಲು ಕಡು ಮಹಾ[ಪಾ]ಪನಿಂದ್ಯ ಕ್ಕೊಡಂಬಟ್ಟು ನಡುನಡುಗಿ ಮಿಡುಕಿದುರ್ಮತಿಯೆ ಘನವಾಗಿ ಕುತ್ಸಿತರ ಬಾಗಿಲಲಿ ಸಮಯವನು ಅನುಸರಿಸಿ ಅಲ್ಪರಿಗೆ ಪಲ್ತೆರೆದು ನಮೋ ನಮೋ ಎಂದು ನಿಂದು ಲಜ್ಜೆಯಂ ತೊರೆದು ಮಾನಮಂ ಕಾಣದೆ ಹೀನ ದುಶ್ಚಿಂತೆಯಲಿ ಹಿತಗೆಟ್ಟು ಐಶ್ವರ್ಯಮಂ ಬಿಟ್ಟು ಬಟ್ಟ ಬಯಲೆ ಆಗಿ ವಿಠಲನ ಕೃಪೆಯಿಂದ ಅಟ್ಟದೊಳಿಹ ಮೂಡೆ ಕಟ್ಟಿದ್ದ ಗೋ ಹಿಂಡು ನೆಟ್ಟನೆ ಹಗೇವದಲ್ಲಿದ್ದ ನಿಜಧಾನ್ಯ ಪಟ್ಟೆಂದು ಚಲಿಪುದು ಪರಿಪರಿಯ ವಸನಗಳು ಇಟ್ಟಲ್ಲಿ ನೆಲೆಸಿಹವಾಗಿಕಾಣಿಸದು ಅಟ್ಟೀವಹುಲಿಕರಡಿಉರಿಬಿಸಿಲು ಘನವಾಗಿ ಮಟ್ಟ ಮಧ್ಯಾಹ್ನದಲಿ ನೀರಡಿಸಿ ಕುಳಿತಿರಲು ಆರಿ[ಹ] ರೈ[ಕಾ]ವರಿಲ್ಲೆಂದು ಸಾರಸಂ [ಬಡುತ] ಕಾಡಿ [ಮೊರೆ]ಯಿಡೆ ನಿನ್ನ ಮೋಡಿ [ಮೆರೆವುದು] ಜರ್ಝರಿ ಭೂತ[ಂಗಳೆಲ್ಲಂ] ಬಿಟ್ಟು ಈ ದಂಡಕಂ ಹನ್ನೊಂದು ಬಾರಿ ಶನಿವಾರವೈದರಲಿ ಪಠಿಪರ್ಗೆ ಹನ್ನೊಂದನೆ ರಾಶಿಯೊಳಿರ್ದ ಫಲವನಿತ್ತು ಚೆಲುವ ವೇಲಾಪುರದ ವೈಕುಂಠ ವಿಠಲನ ಭಕ್ತನೆಂದೆನಿಸಿ ನಿನ್ನ ಪೆತ್ತ ಮಾತೆಯ ಪೆಸರನೆನಿತ ಧನ್ಯರಂ ಮಾಡಿಸದೆ ಅನ್ಯಾಯ[ಹಂ] ಕಾರಗಳಿಗಂಜಿ ನೀ ಬಿಡದೆ ನಿನ್ನ ಮನಬಂದ ರೀತಿಯಲಿ ಬಾಧಿಸದೈಯಾ ಸನ್ಮುನಿವಂದ್ಯ ಸರ್ವೇಶ್ವರಾನಂದ ಸಂಚಾರಿರವಿಸೂನು ಯಮ ಸಹೋದರ ವೀರಧರ್ಮ ಪರಿಪಾಲನೆ ಶನೈಶ್ವರ ಮಹಾರಾಯನೆ ತ್ರಾಹಿ ತ್ರಾಹಿ ನಮಸ್ತೆ ನಮಸ್ತೆ ನಮಃ
ಶ್ರೀ ಕೃಷ್ಣಾರ್ಪಣಮಸ್ತುಃ
***