Audio by Mrs. Nandini Sripad
ರಾಗ ಆರಭಿ
ಧ್ರುವತಾಳ
ಇಂದಿರಾದೇವಿ ಮಾತೆ ತಂದೆ ವಿಠಲನರ-
ವಿಂದ ಚರಣಕಿನ್ನು ಅಂದಿಗೆ ಗೆಜ್ಜೆಯಾದೆ
ಹೊಂದಿಕೆಯಾದ ಊರು ಜಾನು ಕೈಯ ಮೇಲೆ
ಚೆಂದದ ಸ್ವರೂಪ ಪೀತಾಂಬರೊಡ್ಯಾಣಾದೆ
ಮಂದರಧರನೊಕ್ಷ ಸ್ಥಳದಲಿ ನೀ ನಿಂದೆ
ಕಂದರದಲಿ ಚಿತ್ರವೈಚಿತ್ರ್ಯ ಪರಿಗಂಧವು
ಪದಕ ಹಾರಂಗಳು ಪುಷ್ಪ ತುಲಸಿ -
ಯಿಂದೊಪ್ಪುವ ಅಲಂಕಾರ ನಂದ ಶೋಭಿತಳಾದೆ
ಒಂದೊಂದು ಹಸ್ತದಲ್ಲಿ ಆಯುಧಗಳಾದೆ
ಚೆಂದುಳ್ಳ ಕಡೆಯ ತೋಳ್ಬಂದಿ ಭುಜಕೀರ್ತಿ
ಕುಂದು ಇಲ್ಲದೆ ಕರ್ಣಕುಂಡಲ ನಾನಾಪರಿ
ಅಂದವಾದರಳೆಲೆ ಸುಂದರ ಕಿರೀಟವು
ಸಂದಿಸಂದಿಗೆ ನಾನಾಭರಣಾಲಂಕಾರಳಾದೆ
ಇಂದಿರೇಶನ ಪ್ರತಿ ಅವಯವಗಳಲಿನ್ನು
ಇಂದಿರೆ ಪ್ರತಿ ಪ್ರತಿ ವಸ್ತುವಾದೆ
ಕಂದರ್ಪನಯ್ಯನ ಆನಂದ ಬೆರೆದು ಸುಖಸುರಿದೆ ನೀ
ಒಂದರಘಳಿಗೆ ಅಗಲದೆ ಇನ್ನು
ಕಂದ ಬೊಮ್ಮನು ಮತ್ತೆ ನಂದಿವಾಹನ
ಅಮರೇಂದ್ರ ಸನಕ ಸನಂದರಿಂದಲಿನ್ನು
ಕುಂದಿಲ್ಲದೋಲಗವ ನಂದಾದಿ ಕೊಳುತ ಮುಕ್ತ-
ರಿಂದ ಸೇವಿತಳಾಗಿ ಎಂದೆಂದು ಬಿಡದಲೆ
ಸಂದೇಹವಿಲ್ಲದೆ ಗೋಪಾಲವಿಠ್ಠಲನ್ನ
ಪೊಂದಿ ಸುಖದಲಿ ಚೆಂದದಿ ಮೆರೆದೆ ॥ 1 ॥
ಮಠ್ಯತಾಳ
ಹರಿ ಅನಿರುದ್ಧನಾಗೆ ಸಿರಿ ಶಾಂತಿದೇವಿಯಾದೆ
ಹರಿ ಪ್ರದ್ಯುಮ್ನನಾಗೆ ಸಿರಿಕೃತಿದೇವಿ ಆದೆ
ಹರಿ ಸಂಕರ್ಷಣನಾಗೆ ಸಿರಿ ಜಯದೇವಿ ಆದೆ
ಹರಿ ವಾಸುದೇವನಾಗೆ ಸಿರಿ ಮಾಯಾದೇವಿಯಾದೆ
ಎರಡೆರಡವತಾರಕ್ಕೆ ಮರಳಿ
ಮರಳಿ ಚತುರವತಾರಗಳಾದೆ
ಪರಿಪರಿ ಅವತಾರಕ್ಕೆ ಪರಿಪರಿ ರೂಪಳಾದೆ
ಶರಣರ ಪಾಲಕ ಗೋಪಾಲವಿಠ್ಠಲನ್ನ
ಚರಣ ಕಮಲವನ್ನು ಪರಿಪರಿ ಸೇವಿಸುತ ॥ 2 ॥
ತ್ರಿಪುಟತಾಳ
ಧರೆಯ ರೂಪದಿ ಹರಿಗೆ ಕುಳ್ಳಿರೆ ಗದ್ದುಗೆಯಾದೆ
ಮೆರೆವ ಅವ್ಯಾಕೃತ ಗಗನವೆ ಕೊಡೆಯಾದೆ
ಎರಡೆರಡೊಂದು ರೂಪದಿ ಹರಿಯಿತ್ತಲು ರಮಾ
ಮರಳಿ ಶ್ರೀರೂಪದಿ ಹರಿಯಿಂದ ಬೆರೆದು
ಸ್ವರಮಣನ ರಮಿಸಿ ಯೋಗನಿದ್ರೆಯ ಮಾಡಿ
ಹರಿಯಾಜ್ಞದಿಂದ ಅಂಭ್ರಣಿರೂಪಳಾದೆ
ಪರಿಪರಿ ಶ್ರುತಿಯಿಂದ ಸೃಷ್ಟಿಯ ರಚಿಸೆಂದು
ಹರಿಯ ಕೊಂಡಾಡಿದೆ ಹರುಷದಿ ನಲಿದೆ
ಹರಿಯ ನಾಭಿಯಲಿನ್ನು ಸರಸಿಜ ರೂಪದಿ
ವಿರಿಂಚಿಯನೆ ಪಡೆದೆ ಕರುಣಾಕರೆ ಮತ್ತೆ
ಅರಿವಂತೆ ಅಜಗಿನ್ನು ತಪತಪವೆಂದು ಅ -
ಶರೀರ ಹಿತ ನುಡಿದೆ ಅವ್ಯಾಕೃತಕಭಿಮಾನಿ
ಪರಿಪೂರ್ಣ ಗುಣಭರಿತ ಗೋಪಾಲವಿಠ್ಠಲನ್ನ
ಕರುಣದಿಂದೆರಡೆರಡು ಸೃಷ್ಟಿಯ ರಚಿಸಿದೆ ॥ 3 ॥
ಅಟ್ಟತಾಳ
ಹರಿಯಾಜ್ಞೆಯಿಂದಲಿ ಜಡ ಪ್ರಕೃತಿ ದೆಸೆಯಿಂದ
ವರ ತ್ರಿಗುಣಾತ್ಮಕವಾದಂಥ ಮಹತತ್ವ
ಅದರಿಂದ ವೈಕಾರಿಕ ತೈಜಸ ತಾಮಸವನ್ನು
ಭರಿತವಾದಂಥ ಅಹಂಕಾರ ತತ್ವ
ಪರಿಪರಿ ಸೃಷ್ಟಿಸಿದೆ ವರಮಾಯಾ ನೋವಿಲ್ಲದೆ
ಪರಮದಯಾಳು ಗೋಪಾಲವಿಠ್ಠಲನು
ಕರುಣಿಸುವನು ನೀ ಕರವಿಡಿದವರ ॥ 4 ॥
ಆದಿತಾಳ
ಮಹತ್ತತ್ವ ದೆಸೆಯಿಂದ ಬೊಮ್ಮನ ಸೃಷ್ಟಿಸಿದೆ
ಅಹಂಕಾರ ವೈಕಾರಿಕದಿಂದ ಮನಸ್ಸು
ಆ ಮಹಾ ಇಂದ್ರಿಯಗಳಿಗಭಿಮಾನಿ ದೇವತೆಗಳನ್ನು
ಅಹಂಕಾರ ಪಂಚ ತನ್ಮಾತ್ರೆಯನ್ನು ಸೃಷ್ಟಿಸಿದೆ
ಅಹಂಕಾರ ತೈಜಸದಿಂದ ಚಕ್ಷುರಾದಿ
ಇಹ ಇಂದ್ರಿಯಗಳನ್ನೆಲ್ಲ ಸೃಷ್ಟಿಸಿದೆ
ಅಹಂಕಾರ ತಾಮಸದಿಂದಲಿ
ಪಂಚ ಮಹಾಭೂತಂಗಳ ಸೃಷ್ಟಿಸಿದೆ
ಮೋಹದಿಂದ ಸಕಲ ತತ್ವೇಶರನ್ನು ಸೃಷ್ಟಿಸಿದೆ
ಆ ಹರಿ ಕರುಣಾಪೂರ್ಣ ಕಟಾಕ್ಷದಿ
ಈ ಮಹಾ ಜಗಕೆಲ್ಲ ಪ್ರೇಮದಿಂದ ಸಲಹುವೆ
ಮೋಹನಮೂರುತಿ ಗೋಪಾಲವಿಠ್ಠಲನ್ನ
ಸಾಹಸವಿಲ್ಲದೆ ರಹಸ್ಯ ಪೂಜಿಪೆ ॥ 5 ॥
ಜತೆ
ನಮೋ ನಮೋ ನಿನ್ನ ಪಾದಕಮಲವೆ ಮೊರೆ ಹೊಕ್ಕೆ
ಮಮತೆ ಪುಟ್ಟಿಸೆನಗೆ ಗೋಪಾಲವಿಠಲ ನಲ್ಲಿ ॥
************