Audio by Vidwan Sumukh Moudgalya
ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀಹರಿಯ ಪ್ರಾರ್ಥನಾ ಸುಳಾದಿ
( ಐತಿಹಾಸಿಕ - ಮಾಳಿಗಿ ಶ್ರೀನಿವಾಸಾಚಾರ್ಯರ ಮನೆಯ ವಿಜಯವಿಠ್ಠಲ ದೇವರು ಒಲಿದು ಬಂದಾಗ ಶ್ರೀಹರಿಯ ಪ್ರಸಾದ ವಿಷಯ ಪ್ರಾರ್ಥನೆ )
ರಾಗ ಶಂಕರಾಭರಣ
ಧ್ರುವತಾಳ
ಇಂದು ಎನ್ನ ಮನೆಗೆ ಬಂದ ಕಾರಣವೇನು
ಇಂದಿರಾರಮಣ ಗೋವಿಂದ ಕೃಷ್ಣ
ಸುಂದರವಿಗ್ರಹ ಮಂದರಧರ ಸುಖ -
ಸಾಂದ್ರ ಗುಣಾರವಿಂದ ಚರಣ ಉ -
ಪೇಂದ್ರ ಇಂದ್ರಾನುಜ ಕಂದರ್ಪಪಿತ ದಯ -
ಸಿಂಧುವೆ ಎನಗೆ ನೀನಿಂದೊಲಿದದು
ಎಂದಿಗೆಂದಿಗೆ ಇನಿತೆಂದು ತಿಳಿದುದಿಲ್ಲ
ಹಿಂದರುಹಲಿಲ್ಲೆನಗೆ ಒಂದರ ಅರಿವಿಲ್ಲ
ಒಂದು ಪರಮ ಎಳೆಗಂದಿ ಗೋವು ತನ್ನ
ಕಂದನ್ನ ನೋಡಿ ಆನಂದ ಬಡುವಂತೆ
ಇಂದು ದಾಸಗೆ ಬೇಕೆಂದು ಈ ಪರಿಯಲ್ಲಿ
ಸಂದರುಶನವಿತ್ತ ವೃಂದಾವನಪ್ರಿಯ
ಒಂದೆ ದೈವವೆ ನಮ್ಮ ವಿಜಯವಿಠ್ಠಲರೇಯ ಪು -
ರಂದರಗೊಲಿದಂಥ ನಂದನಂದನ ರಂಗ ॥ 1 ॥
ಮಟ್ಟತಾಳ
ಧ್ಯಾನ ಪೂರ್ವಕದಿಂದ ಜ್ಞಾನವಧಿಕರಾದ
ನೀನೆ ನೀನೆ ಎಂಬ ಶ್ರೀನಿವಾಸಾಚಾರ್ಯರ
ಮಾನಸದಲಿ ಪೊಳೆವ ಮಾನಿಸ ರೂಪನೇ
ಏನೆಂಬೆನೂ ನಿನ್ನ ನಾನಾ ವಿಗಡಕ್ಕೆ
ದಾನವಾಂತಕ ರಂಗ ವಿಜಯವಿಠ್ಠಲರೇಯ
ಜ್ಞಾನ ಪುಂಜರಿಂದ ಹೀನಗೊಲಿದದೇನೋ ॥ 2 ॥
ತ್ರಿವಿಡಿತಾಳ
ಅಭಿಷೇಕವಾದ ಉತ್ತಮ ಮನ್ನಣೆಯಿಲ್ಲ
ಆಭರಣ ವಸನ ಗಂಧಾಕ್ಷತೆ ಮೊದಲಿಲ್ಲ
ಶೋಭನವಾದ ಕುಸುಮ ತುಲಸಿಗಳಿಲ್ಲ
ಸೌಭಾಗ್ಯವಾದ ಧೂಪಾದಿ ವೋದನವಿಲ್ಲ
ಆ ಭಕ್ಷ್ಯ ಪಾಯಸ ಪರಿಪಡಿಗಳಿಲ್ಲ
ಅಭಿವಂದನೆ ಸರ್ವ ಪೂಜಾಲಕ್ಷಣವಿಲ್ಲ
ಕುಭವದಲ್ಲಿನ ಲೋಭಿಯ ಸೇರಲು
ಲಾಭವೇನು ಪೇಳು ಜಯಜಯನೇ
ಶ್ರೀ ಭೂರಮಣ ನಮ್ಮ ವಿಜಯವಿಠ್ಠಲ ನಿನ್ನ
ಸ್ವಾಭಾವ ಈ ಪರಿ ನಿನಗೆ ಪೇಳುವರಾರೋ ॥ 3 ॥
ಅಟ್ಟತಾಳ
ಕಾಲಕಾಲಕೆ ಸ್ತೋತ್ರ ಕಾಲಕಾಲಕೆ ಧೂಪ
ಕಾಲಕಾಲಕೆ ದೀಪ ಕಾಲಕಾಲಕೆ ಎಡೆ
ಕಾಲಕಾಲಕೆ ಪ್ರೀತಿ ಕಾಲಕಾಲಕೆ ಇರಲು
ಹಾಲುಸಾಗರ ಬಿಟ್ಟು ಆ ಲವಣಾಬ್ಧಿಲಿ
ಆಲಯಬಿಗಿದವನೊಲು ಮಾಡಿದೆ ದೇವ
ವ್ಯಾಳಿವ್ಯಾಳಿಗೆ ಕೃಪಾಳಿನ ಕೈಯಿಂದ
ವಾಲಗವನು ಬಿಟ್ಟು ಕೀಳುಮಾನವಗೊಲಿದೆ
ಆಳು ಚನ್ನಾಗಿ ಇನ್ನಾಳು ವಿಜಯವಿಟ್ಠಲ
ಲೋಕದೊಳಗೆ ನಿನ್ನಾಳಿನಾಳಿನ ತೊತ್ತು ॥ 4 ॥
ಆದಿತಾಳ
ಉದ್ಧರಿಸುವದು ಜೀಯ ಶುದ್ಧಮಂದಮತಿಯನು
ಪೊದ್ಧಿಕೊಂಡು ನಿರುತದಲ್ಲಿ ಒದ್ದು ಸಕಲದುರಿತವನ್ನು
ಇದ್ದು ಇಲ್ಲದಂತೆ ಮಾಡೊ ಸಿದ್ಧಾರ್ಥವ ನೀವುತ
ಮುದ್ದುಲಕುಮಿರಮಣನೆ ಮಿದ್ದು ಮನವ ಸರಳಮಾಡೊ
ಶುದ್ಧಕಾಯ ವಿಜಯವಿಠ್ಠಲ
ಬುದ್ಧಿಪಲ್ಲಟಾಗದಂತೆ ತಿದ್ದಿ ಅಂತರಂಗದಲ್ಲಿ
ಇದ್ದು ಸಂತೋಷವನೆ ಪಡಿಸೊ ॥ 5 ॥
ಜತೆ
ಮೆಚ್ಚಿ ನೆಚ್ಚಿಸಲಾರೆ ಅರ್ಚಿಸಿ ಒಲಿಸಲಾರೆ
ನಿಚ್ಚ ನೀನೆ ಪೊರಿಯೋ ವಿಜಯವಿಠ್ಠಲ ಹರಿಯೆ ॥
*********
ಈ ಸುಳಾದಿಯ ರಚನೆಯ ಸಂದರ್ಭ -
ಒಮ್ಮೆ ಶ್ರೀ ವಿಜಯದಾಸರು ತೀರ್ಥಕ್ಷೇತ್ರ ಸಂಚಾರ ಮಾಡುವ ಉದ್ದೇಶದಿಂದ ಚೀಕಲಪರವಿಯಿಂದ ಹೊರಟು ರಾಯಚೂರನ್ನು ತಲುಪುತ್ತಾರೆ. ಆ ಕಾಲದಲ್ಲಿ ಮಾಳಿಗಿ ಶ್ರೀನಿವಾಸಾಚಾರ್ಯ ರೆಂಬ ಜ್ಞಾನಿಗಳು ರಾಯಚೂರಿನಲ್ಲಿ ಇದ್ದವರು. ಅವರು ಪ್ರತಿನಿತ್ಯ ತಮ್ಮ ಪರಂಪರಾಗತ ವಿಜಯವಿಟ್ಠಲ ಪ್ರತಿಮೆಯನ್ನು ಬಹುವೈಭವದಿಂದ ಅರ್ಚಿಸುತ್ತಾ ಇದ್ದರು. ಈ ವಿಜಯವಿಟ್ಠಲ ಸ್ವಾಮಿಯು ತಾನು ಇನ್ನು ಮುಂದೆ ಶ್ರೀವಿಜಯದಾಸಾರ್ಯರಲ್ಲಿದ್ದು ಪೂಜೆಕೈಗೊಳ್ಳುವ ಸಂಕಲ್ಪವನ್ನು ಅಭಿವ್ಯಕ್ತಿ ಮಾಡಿ , ಶ್ರೀನಿವಾಸಾಚಾರ್ಯರಿಗೆ ತನ್ನನ್ನು ಶ್ರೀವಿಜಯದಾಸಾರ್ಯರಿಗೆ ಒಪ್ಪಿಸುವಂತೆ ಸ್ವಪ್ನದಲ್ಲಿ ಆಜ್ಞೆಮಾಡಿದ. ಮರುದಿನವೇ ಶ್ರೀದಾಸಾರ್ಯರು ಶ್ರೀಆಚಾರ್ಯರನ್ನು ಭೋಜನಕ್ಕೆ ಆಹ್ವಾನಿಸಲು , ಆಚಾರ್ಯರ ಮನೆಗೇ ಗೋಪಾಳಕ್ಕೆ ದಯಮಾಡಿದರು. ಶ್ರೀಆಚಾರ್ಯರು ನಮ್ಮ ವಿಜಯವಿಟ್ಠಲನು ಮುಂದೆ ತಮ್ಮಿಂದ ಪೂಜೆಗೊಳ್ಳಲು ಇಚ್ಛಿಸಿದ್ದಾನೆಂದು ತಮಗೆ ಸ್ವಪ್ನವಾದ ವಿಷಯವನ್ನು ಶ್ರೀದಾಸರಿಗೆ ತಿಳಿಸಿ , ಮಾರನೆಯ ದಿವಸ ವಿಟ್ಠಲನ ಪ್ರಸಾದ ನಮ್ಮಲ್ಲಿಯೇ ಸ್ವೀಕರಿಸಿ ಶ್ರೀವಿಜಯವಿಟ್ಠಲನನ್ನು ಕರೆದೊಯ್ಯಲು ವಿಜ್ಞಾಪಿಸಿಕೊಂಡರು. ಮರುದಿವಸ ಶ್ರೀದಾಸರು ಶ್ರೀಆಚಾರ್ಯರ ಮನೆಗೆ ದಯಮಾಡಿ , ಪೂಜೆಯನ್ನು ಸಂಪೂರ್ಣನೋಡಿ , ಪ್ರತಿಮಾಂತರ್ಗತ ಶ್ರೀವಾಯುದೇವರ ಅಂತರ್ಯಾಮಿ ಸಚ್ಚಿದಾನಂದ ಶ್ರೀವಿಜಯವಿಟ್ಠಲ ಸ್ವಾಮಿಯನ್ನು ಸಂದರ್ಶಿಸಿದರು. ಆ ಸಂದರ್ಭದಲ್ಲಿ ಶ್ರೀದಾಸರು ಶ್ರೀವಿಜಯವಿಟ್ಠಲನ ಸನ್ನಿಧಿಯಲ್ಲಿ ಹಾಡಿ , ನರ್ತಿಸಿದ ಪದ " ಈತನೀಗ ವಿಜಯವಿಠ್ಠಲ " .
ಶ್ರೀಆಚಾರ್ಯರು ಅದುವರೆಗೂ ತಮ್ಮಲ್ಲಿದ್ದ ಶ್ರೀಸ್ವಾಮಿಯ ಅಲಂಕಾರದ ಒಡವೆಗಳೊಂದಿಗೆ ಶ್ರೀವಿಜಯದಾಸಾರ್ಯರಿಗೆ ಒಪ್ಪಿಸಿ , ಶ್ರೀವಿಜಯವಿಟ್ಠಲನ ಅಪ್ಪಣೆಯನ್ನು ನೆರವೇರಿಸಿದರು.
ಶ್ರೀವಿಜಯದಾಸಾರ್ಯರು ಆ ವಿಟ್ಠಲಸ್ವಾಮಿಯನ್ನು ತಮ್ಮಲ್ಲಿಗೆ ಕರೆತಂದರು. ಮರುದಿವಸ ಅತ್ಯಂತ ವಿಜೃಂಭಣೆಯಿಂದ ನಡೆದ ಪೂಜಾ ನಂತರ ಶ್ರೀದೇವರನ್ನು ಭುಜಂಗಿಸುವ ಮುನ್ನ ತಮಗೆ ತೋರಿದ ಭಾವವನ್ನು ಶ್ರೀವಿಜಯವಿಟ್ಠಲನಲ್ಲಿ ನಿವೇದಿಸುತ್ತಿದ್ದಾರೆ ಶ್ರೀವಿಜಯದಾಸಾರ್ಯರು. ಅದೇ ಈ ಸುಳಾದಿ .
********