Showing posts with label ಜಯರಾಯ 2 ಜಯದೇವಿ vijaya vittala ankita suladi ಜಯತೀರ್ಥ ಸ್ತೋತ್ರ ಸುಳಾದಿ JAYARAYA 2 JAYADEVI JAYATEERTHA STOTRA SULADI. Show all posts
Showing posts with label ಜಯರಾಯ 2 ಜಯದೇವಿ vijaya vittala ankita suladi ಜಯತೀರ್ಥ ಸ್ತೋತ್ರ ಸುಳಾದಿ JAYARAYA 2 JAYADEVI JAYATEERTHA STOTRA SULADI. Show all posts

Sunday 8 December 2019

ಜಯರಾಯ 2 ಜಯದೇವಿ vijaya vittala ankita suladi ಜಯತೀರ್ಥ ಸ್ತೋತ್ರ ಸುಳಾದಿ JAYARAYA 2 JAYADEVI JAYATEERTHA STOTRA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯರ ವಿರಚಿತ 
 ಶ್ರೀ ಜಯತೀರ್ಥರ ಸ್ತೋತ್ರ ಸುಳಾದಿ 

 ರಾಗ ಕಲ್ಯಾಣಿ 

 ಧ್ರುವತಾಳ 

ಜಯರಾಯ ಜಯರಾಯ ಜಯದೇವಿ ಅರಸನ್ನಾ -
ಶ್ರಯಮಾಡಿಕೊಂಡಿಪ್ಪ ತಪೋವಿತ್ತಪ
ಭಯವ ಪರಿಹರಿಸಿ ಭವದೂರರ ಮಾಡಿ ಹರಿಭ -
ಕ್ತಿಯ ಕೊಡು ಜ್ಞಾನ ವೈರಾಗ್ಯದೊಡನೆ
ದಯ ದೃಷ್ಟಿಯಿಂದ ನೋಡು ಕಾಪಾಡು ಮಾತಾಡು
ಲಯ ವಿವರ್ಜಿತವಾದ ವೈಕುಂಠಕೆ
ಸ್ವಯವಾಗಿ ಮಾರ್ಗ ತೋರು ಸಜ್ಜನರೊಳಗಿಟ್ಟು
ಜಯವ ಪಾಲಿಸು ಎನಗೆ ಯತಿಕುಲರನ್ನ
ಅಯುತಕ್ಕಾದರು ನಾನು ಐಹಿಕ ಸೌಖ್ಯವನೊಲ್ಲೆ
ಬಯಸುವೆ ಸತತದಲ್ಲಿ ಹರಿಯ ನಾಮ -
ತ್ರಯಗಳೆ ನಾಲಿಗೇಲಿ ನೆನೆದು ನೆನೆದು ಕರ್ಮ
ಕ್ಷಯವಾಗುವಂತೆ ಕ್ಷಿಪ್ರದಲ್ಲಿ ಬಿಡದೆ
ಪ್ರಯತ್ನವೆಂಬೋದಿದಕೆ ಸಾರ್ಥಕವಾಗಲಿ
ಪಯೋನಿಧೆ ಸುತೆರಮಣ ಮನದೊಳು ನಿಲ್ಲಲು
ಪಯಃಪಾನದಿಂದಧಿಕ ನಿಮ್ಮ ದರುಶನ ಎನಗೆ
ಪ್ರಿಯ ಮತ್ತೊಂದಾವದಿಲ್ಲ ಇದೇ ಬಲು ಲಾಭ
ಗಯ ಕಾಶಿ ತ್ರಿಸಂಗಮ ಮೊದಲಾದ ತೀರ್ಥಕ್ಷೇತ್ರ
ನಯದಿಂದ ಮಾಡಿದ ಫಲಬಪ್ಪುದು
ಪಯೋಧರಗಳ ತಿನದಂತೆ ಮಾಳ್ಪುದು ಹೃ -
ದಯದೊಳಗಿಪ್ಪದೆನೆಗೆ ಇದೇ ಏಕಾಂತ
ಭಯಕೃದ್ಭಯನಾಶ ವಿಜಯವಿಠ್ಠಲನ ಸೇ - 
ವೆಯ ಮಾಡುವ ಸದ್ಗುಣಶೀಲ ಸುಜನಪಾಲಾ ॥ 1 ॥

 ಮಟ್ಟತಾಳ 

ಆವ ಜನುಮದ ಪುಣ್ಯ ಫಲಿಸಿತು ಎನಗಿಂದು
ರಾವುತನಾಗಿದ್ದ ಜಯತೀರ್ಥರ ಕಂಡೆ
ದೇವಾಂಶರು ಇವರ ಸ್ವರೂಪವನ್ನು
ಭಾವದಿಂದಲಿ ತಿಳಿದು ಕೊಂಡಾಡುವ ಬಲು ಧನ್ಯ
ಪಾವಿನ ಪರಿಯಲ್ಲಿ ಇಲ್ಲಿ ಇರುತಿಪ್ಪ
ಕಾವುತ ಭಕುತರ ಪಾವನಗೈಸುವ
ದೇವ ದೇವೇಶ ಸಿರಿ ವಿಜಯವಿಠ್ಠಲನಂಘ್ರಿ -
ತಾವರೆ ಭಜಿಸುವ ನಿಷ್ಕಾಮುಕ ಮೌನಿ ॥ 2 ॥

 ತ್ರಿವಿಡಿತಾಳ 

ವೈಷ್ಣವ ಜನ್ಮ ಬಂದುದಕಿದೇ ಸಾಧನ
ವಿಷ್ಣುವಿನ ಭಕುತಿ ದೊರಕಿದುದಕೆ
ನಷ್ಟವಾಯಿತು ಎನ್ನ ಸಂಚಿತಾಗಾಮಿ ಕರ್ಮ 
ಕಷ್ಟ ದಾರಿದ್ರಗಳು ಹಿಂದಾದವೋ
ತುಷ್ಟನಾದೆನು ಎನ್ನ ಕುಲಕೋಟಿ ಸಹಿತ ಅ - 
ರಿಷ್ಟ ಮಾರ್ಗಕೆ ಇನ್ನು ಪೋಗೆ ನಾನು
ಸೃಷ್ಟಿಯೊಳಗೆ ಇವರ ದರ್ಶನವಾಗದಲೆ
ಸ್ಪಷ್ಟವಾದ ಜ್ಞಾನ ಪುಟ್ಟದಯ್ಯಾ
ಇಷ್ಟು ಕಾಲ ಬಿಡದೆ ಮುಂದೆ ಮಾಡುವ ಬಲು
ನಿಷ್ಟಗೆ ಅನುಕೂಲ ತಾತ್ವಿಕರು
ಶಿಷ್ಟಾಚಾರವನ್ನು ಮೀರದಲೆ ನಿಮ್ಮ
ಇಷ್ಟಾರ್ಥ ಬಯಸುವದು ಉಚಿತದಲ್ಲಿ
ವೈಷ್ಣವಾಚಾರ್ಯರ ಮತ ಉದ್ಧಾರ ಕರ್ತ 
ಭ್ರಷ್ಟವಾದಿಗಳನ್ನು ನುಗ್ಗಲೊತ್ತಿ
ಕೃಷ್ಣೆವಂದಿತ ನಮ್ಮ ವಿಜಯವಿಠ್ಠಲರೇಯನ 
ಅಷ್ಟ ಕರ್ತೃತ್ವ ಸ್ಥಾಪಿಸಿದ ಧೀರ ॥ 3 ॥

 ಅಟ್ಟತಾಳ 

ಕುಶರಾಯ ಇಲ್ಲಿ ತಪಸು ಮಾಡಿದಂಥ
ವಸತಿಯ ನೋಡಿ ದಿಗ್ದೇಶ ಜಯಿಸಿ ಮಾ - 
ನಸದಲ್ಲಿ ತಿಳಿದು ಅಕ್ಷೋಭ್ಯತೀರ್ಥರು ಇಲ್ಲಿ
ನಸುನಗುತಲೆ ವಾಸವಾದರು ಬಿಡದಲೆ 
ಋಷಿ ಕುಲೋತ್ತಮರಾದ ಜಯರಾಯರು ನಿತ್ಯ
ಬೆಸನೆ ಬೆಸನೆ ಬಂದು ಗುಪ್ತದಲ್ಲಿ ಪೂ - 
ಜಿಸುವರು ಪ್ರೀತಿಲೆ ಏನೆಂಬೆನಾಶ್ಚರ್ಯ 
ಶಶಿ ವರ್ಣದಂತೆ ಪೊಳೆವ ದರುಶನ ಗ್ರಂಥ
ರಸ ಪೂರಿತವಾಗಿ ವಿಸ್ತರಿಸಿದರು ವಿ -
ಕಸಿತವ ಮಾಡಿ ಕರದ ಕನ್ನಡಿಯಂತೆ
ಕುಶಲ ಮಾನವರಿಗೆ ಜ್ಞಾನ ಹೆಚ್ಚುವಂತೆ
ವಸುಧೆಯೊಳಗೆ ನಮ್ಮ ವಿಜಯವಿಠ್ಠಲರೇಯನ 
ವಶವಾಗುವದಕ್ಕೆ ಪ್ರಸಾದ ಮಾಡಿದರು ॥ 4 ॥

 ಆದಿತಾಳ 

ಈ ಮುನಿ ಒಲಿದರೆ ಅವನೆ ಭಾಗ್ಯವಂತ
ಭೂಮಿಯೊಳಗೆ ಮುಕ್ತಿ ಯೋಗ್ಯನೆನಿಸುವನು
ಭೀಮ ಭವಾಂಬುಧಿ ಬತ್ತಿ ಪೋಗುವುದು ನಿ - 
ಸ್ಸೀಮನಾಗುವ ಪಂಚಭೇದಾರ್ಥ ಪ್ರಮೇಯದಲ್ಲಿ
ತಾಮಸ ಜನರಿಗೆ ಭಕ್ತಿ ಪುಟ್ಟದು ದುಃ -
ಖ ಮಹೋದಧಿಯೊಳು ಸೂಸುತಲಿಪ್ಪರು
ಸ್ವಾಮಿ ಈಗಲೆ ಬಂದು ದುರುಳ ಮನುಜನ ನೋಡಿ
ನಾ ಮೊರೆ ಇಡುವೆನು ಕಾಯೊ ಕರುಣದಲ್ಲಿ
ಯಾಮ ಯಾಮಕೆ ನಿಮ್ಮ ಸ್ಮರಣೆ ಪಾಲಿಸಿ ಉ -
ತ್ತಮ ಬುದ್ಧಿಕೊಟ್ಟು ಕೃತಾರ್ಥನ್ನ ಮಾಡು
ರಾಮ ಸುಗುಣಧಾಮ ವಿಜಯವಿಠ್ಠರೇಯನ್ನ 
ನಾಮ ಕೊಂಡಾಡುವ ಟೀಕಾಚಾರ್ಯ ॥ 5 ॥

 ಜತೆ 

ಮೇಘನಾಥಪುರ ಕಕುರ ವೇಣಿವಾಸ
ರಾಘವೇಶ ವಿಜಯವಿಠ್ಠಲನ್ನ ನಿಜದಾಸ ॥
********