ಅಂಜಲ್ಯಾತಕೋ ಅಖಿಳ ಭವದುರಿತನೆ
ಅಂಜನೆಯ ಸುತಗೆ ಆರೋಪಿಸಿದ ಬಳಿಕ ಪ
ಪಾತಕವು ಬಿಡದೆಂದು ಪರಿಪರಿಯ ಚಿಂತಿಸುತ
ಯಾತಕೆನ್ನಭಿಮಾನ ನಾಥನಿರಲು
ಮಾತಪಿತರಲ್ಲಿ ನಿರ್ಮಿತಮಾಡಿ ನಿಲ್ಲಿಸಿದ
ಆತನಾಜ್ಞೆಯಾದಂತೆ ಆಗುವುದಲ್ಲದೆ 1
ಗುಡ್ಡದಂತೆ ದುರಿತ ಘೋರಿಸುವೆನೆನುತಲಿ
ಅಡ್ಡಬಂದಾಗ ಓಡಿಸುವೆನೆನುತ
ಅಡ್ಡಬಂದಾಗಂತ್ಯ ಕಾಲದಲಿ ರಕ್ಷಿಸುವ
ದೊಡ್ಡ ಕಂಗಳನೆಂಬ ಧೊರೆಯ ಹೊಂದಿದ ಮೇಲೆ 2
ಸೃಷ್ಟಿಯನು ಮಾಡಿದ ಇಷ್ಟ ದೇವತೆ ನಿಮ್ಮ ಬಿಟ್ಟವನೆ
ಭ್ರಷ್ಟ ಚಿಂತೆಯು ಬೇಡವೋ
ಕಷ್ಟಗಳ ಕಳೆವ ಕದರುಂಡಲಗಿ ಹನುಮಯ್ಯನ
ನಿಷ್ಠೆಯಲಿ ಭಜಿಸಿ ನಿಶ್ಚಿಂತನಾಗಿರು ಮನವೆ 3
***