ankita ಮಂಗಳಾಂಗಹರಿವಿಠಲ
ರಾಗ: ಕಲ್ಯಾಣಿ ತಾಳ: ಏಕ
ಬೇಡುವೆ ವರಗಳ ಮಂತ್ರಾಲಯ ಪ್ರಭುವೆ ಪ
ನೀಡು ಸನ್ಮತಿಯ ಸಂತರ ನಿಜ ಗುರುವೆ ಅ.ಪ
ಜನುಮಜನುಮದ ಪಾಪಗಳನೆ ಅಳಿದು
ಅನುದಿನ ಬಾಧಿಪ ಆಧಿವ್ಯಾಧಿಗಳಳಿದು
ತನುವಿಗಾಶ್ರಯವಾದ ತ್ರಯತಾಪವಳಿದು
ಹನುಮನಯ್ಯನಲ್ಲಿ ಮನನಿಲ್ಲಿಸೆಂದು 1
ಅಷ್ಟಮದಗಳಳಿದು ಇಷ್ಟ ಪೂರ್ತಿಗೈದು
ಕಷ್ಟ ಸುಖ ಮೊದಲಾದ ದ್ವಂದ್ವ ನಾಶನಗೈದು
ಶಿಷ್ಯನೆಂದೆನಿಸೆನ್ನ ಭ್ರಷ್ಟ ಗುಣಗಳ ಬಡಿದು
ಇಷ್ಟದಾಯಕನೆ ಅನಿಷ್ಟಗಳಳಿಸೆಂದು 2
ಭಂಗಗಳ ಪರಿಹರಿಸಿ ಹಿಂಗಿಸಿಜನುಮಗಳ
ಮಂಗಳಾಂಗಹರಿವಿಠಲನ ದ್ವಂದ್ವ ಪಾದಂಗಳ
ಕಂಗಳಿಂದಲಿ ಕಾಂಬ ಮನದ ಹಂಬಲಗಳ
ಅಂಗಜನಗೆಲಿದಯತಿಯೇ ಪೂರೈಸು ಇಚ್ಛೆಗಳ 3
***