Showing posts with label ಅಣುವೆಂದು ನಿನ್ನನು vijaya vittala ankita suladi ಹರಿ ಪ್ರಾರ್ಥನಾ ಸುಳಾದಿ ANUVENDU NINNANU HARI PRARTHANA SULADI. Show all posts
Showing posts with label ಅಣುವೆಂದು ನಿನ್ನನು vijaya vittala ankita suladi ಹರಿ ಪ್ರಾರ್ಥನಾ ಸುಳಾದಿ ANUVENDU NINNANU HARI PRARTHANA SULADI. Show all posts

Wednesday, 6 January 2021

ಅಣುವೆಂದು ನಿನ್ನನು vijaya vittala ankita suladi ಹರಿ ಪ್ರಾರ್ಥನಾ ಸುಳಾದಿ ANUVENDU NINNANU HARI PRARTHANA SULADI

Audio by Mrs. Nandini Sripad


ಶ್ರೀ ವಿಜಯದಾಸಾರ್ಯ ವಿರಚಿತ  ಶ್ರೀಹರಿಯ ಪ್ರಾರ್ಥನಾ ಸುಳಾದಿ 


( ಹರಿದಾಸ್ಯ ಭಾವದಿಂದಲೇ ಆತ್ಮಸಮರ್ಪಣೆ. ಭಕ್ತಿಯಿಂದ ಭಗವಂತನ ಅತ್ಯರ್ಥ ಪ್ರಸಾದದ್ವಾರಾ ಬಿಂಬಾಪರೋಕ್ಷನಾದ ಶ್ರೀಹರಿಯ ಪ್ರಾರ್ಥನೆ.) 


 ರಾಗ ಷಣ್ಮುಖಪ್ರಿಯ 


 ಧ್ರುವತಾಳ 


ಅಣುವೆಂದು ನಿನ್ನನು ಘನವಾಗಿ ಪೂಜಿಸುವೆನೆ

ಅಣುವಲ್ಲ ಅಣುವಲ್ಲ ಅಬುಜನಲ್ಲ

ಘನವೆಂದು ನಿನ್ನ ನಾನು ಅಣು ಮಾತ್ರ ಅರ್ಚಿಸುವೆನೆ

ಘನವಲ್ಲ ಘನವಲ್ಲ ಘನ ಸದೃಶ

ಅಣುವಲ್ಲ ಘನವಲ್ಲ ಗುಣಗಣ ನಿಲಯನೆ

ಏನೆಂಬೆ ನಿನ್ನ ಸೋಜಿಗವು ನೆಲೆಯಿಲ್ಲ

ಅನಿಮಿಷರೀಶ ನಿನ್ನ ಅನಿಮಿಷ ಗಣದವರು

ಎಣಿಸಿ ಗುಣಿಸಿ ಗುಣ ನೆಲೆಗಾಣರೊ

ಮನುಜ ವನಜ ತನುಜ ಜೀವಾದಿಗಳ

ತನುವಿನೊಳಗೆ ಒಂದಿನವಗಲದೆ

ಧನವ ಕಾಯುವ ಸರ್ಪನ ತೆರದಿ ನ -

ಮ್ಮನು ಪಾಲಿಸುವ ಕಾಸನು ಬೇಡದೆ

ಘನಮಹಿಮ ವಿಜಯವಿಟ್ಠಲ ಮುನಿನುತ 

ನಿನ್ನ ಅಣುಘನರೂಪ ಕಾಣೆನೊ ನಾನು ॥ 1 ॥ 


 ಮಟ್ಟತಾಳ 


ಪುರುಷರ ಮೋಹಿಸುವ ಪರಮ ಸುಂದರದೇವ

ಪುರುಷೋತ್ತಮ ನೀನೆ ಪುರುಷ ಪ್ರಧಾನನೆ

ಪುರುಷನು ನೀನೆ ಪುರುಷ ಬೀಜನು ನೀನೆ

ಪುರಾಣದಲ್ಲಿ ಪರಿಪೂರ್ಣಮಯ ನೀನೆ

ಪುರಾರಿ ಪುರಂದರ ಪುರುಷಾರ್ಥವನೀವ

ಪುರುಷಾಮೃಗವ ತಂದ ಪುರುಷನ ಪ್ರಾಣ ಕಿಂ -

ಪುರುಷ ವಂದಿತಪಾದ  ವಿಜಯವಿಟ್ಠಲ 

ಪರಮ ಪುರಾತನೆ ಪುರುಷರೂಪತ್ರಯನೆ ॥ 2 ॥ 


 ತ್ರಿವಿಡಿತಾಳ 


ಪೊಡವಿ ಸಿಂಹಾಸನ ಕೊಡೆಯು ಗಗನ ನಿನಗೆ

ಮಡುವಿನುದಕ ಗೋವು ಕೊಡುವ ಪಾಲಭಿಷೇಕ

ಅಡವಿ ತುಲಸಿ ಲತೆ ಗಿಡ ಕುಸುಮ ನಿನ್ನ

ಅಡಿಗೇರಿಸುವೆನಯ್ಯಾ ನುಡಿಮಂತ್ರಗಳಿಂದ

ಬಿಡದೆ ತಿರುಗುವ ರವಿ ಕಡಲಸುತನು ದೀಪ

ಒಡವೆ ತಾರೆಗಳು ನಿನಗಿಡುವ ಆಭರಣವು

ಬಡಿವಾಣವೆಲ್ಲ ಅಂಗಡಿಯ ಪದಾರ್ಥಗಳು

ಕೊಡುವ ಕಪ್ಪಗಳು ನಿನಗಿಡುವ ಕಾಣಿಕೆ ದೇವ

ಸುಡುವ ದಾವಾಗ್ನಿಯೆ ಕಡುತೇಜದಾರತಿ

ಅಡಿಗಡಿಗೆ ಸಂಶಯ ವಿಡಿಯದಲೆ ನಾನು

ಒಡನೊಡನೆ ಆವಾವ ಎಡಿಯಲ್ಲಿದ್ದವೆಲ್ಲ

ತಡೆಯದೆ ಮನದಲ್ಲಿ ಕೊಡುವೆನರ್ಪಿತವೆಂದು

ಕುಡುತೆ ಜಲಕೆ ಮುಕುತಿ ಕೊಡುವ ವಿಜಯವಿಟ್ಠಲ ॥ 3 ॥ 


 ಅಟ್ಟತಾಳ 


ಏಳುವಾಗಲಿ ಮುಗ್ಗಿ ಬೀಳುವಾಗಲಿ ಹರಟೆ

ಹೇಳುವಾಗಲಿ ವಾರ್ತೆ ಕೇಳುವಾಗಲಿ ದೇಶ

ಆಳುವಾಗಲಿ ಭಾರ ತಾಳುವಾಗಲಿ ಧನ -

ಹೂಳುವಾಗಲಿ ಸುಖ ಬಾಳುವಾಗಲಿ ನಿತ್ಯ

ವ್ಯಾಳೆಯಾಗಲಿ ಅವೇಳೆಯಾಗಲಿ ಮನ -

ದಾಲೋಚನೆಯೆಲ್ಲ ವಾಲಗ ಹರಿಯೆನ್ನಿ

ವೇಳೆ ಸವಿಯದರ ವೇಳೆ ಸವೆಯಲಿಲ್ಲ

ನಾಲಿಗೆಯಿಂದಲಿ ಪೇಳುವದಲ್ಲದೆ

ಆಲದೆಲೆಯ ಶಾಯಿ ವಿಜಯವಿಟ್ಠಲ ತಾಯಿ

ಲಾಲಿಸಿದಂತೆ ಮಾತ ಲಾಲಿಸಿಕೊಂಬ ॥ 4 ॥ 


 ಆದಿತಾಳ 


ಎತ್ತಣ ಸಮರ್ಪಣೆ ಎತ್ತಣ ಸಮರ್ಪಣೆಂದು

ಎತ್ತಲಿದ್ದ ಹರಿಯು ಎತ್ತ ತೃಪ್ತನಾಹನೆಂದು

ಚಿತ್ತದಲ್ಲಿ ಭೇದಗೊಂಡು ತತ್ತಳಗೊಂಬುವದಲ್ಲ

ನಿತ್ಯ ಭಕ್ತಿಯಿಲ್ಲದವನು ಹತ್ತಿಲಿ ಪದಾರ್ಥವೆಲ್ಲ

ಜತ್ತಾಗಿರಿಸಿಕೊಂಡು ಸುತ್ತ ಸಮರ್ಪಣೆಯೆಂದು

ಇತ್ತು ನಲಿದಾಡಿದರೆ ಉತ್ತಮ ಶ್ಲೋಕನು ಒಪ್ಪ

ಚಿತ್ತ ಶುದ್ಧನಾಗಿ ಕರವೆತ್ತಿ ಬಲು ದೀನನಾಗಿ

ಅತ್ತಲಿದ್ದ ಉದಕವು ಅತ್ತಲರ್ಪಿತವೆನಲು

ಚಿತ್ತಜ ಪಿತನು ಮೆಚ್ಚಿ ಚಿತ್ತದಲ್ಲಿ ಒಪ್ಪಿಕೊಂಡು

ಹತ್ತಕ್ಕೆ ನೂರಾರು ಮಾಡಿ ಬಿತ್ತಿ ಬೆಳೆಸಿ ಉಣಿಸುವ

ಇತ್ತ ಬರುವ ಭವದೂರ ವಿಜಯವಿಟ್ಠಲರೇಯಾ 

ಎತ್ತಲಾದರೇನು ತನ್ನ ಭೃತ್ಯನೆಂದರೊಡಂಬಡುವ ॥ 5 ॥ 


 ಜತೆ 


ಅಚ್ಚುತಗರ್ಪಿತವೆಂದು ದಾಸರೆನಲು ಕಲ -

ಗಚ್ಚು ಕುಡಿದ ಕಾಣೊ ವಿಜಯವಿಟ್ಠಲ ಮೆಚ್ಚಿ ॥

********