ಕಂಡೆನೀಗ ರಂಗನಾಥನ ಕಾರುಣ್ಯನಿಧಿಯ ಪ.
ಕಂಡೆನೀಗ ರಂಗಾಥನ ಭೂ-
ಮಂಡಲದೊಳುದ್ದಂಡ ಮೂರುತಿ
ಹಿಂಡು ದೈತ್ಯರ ತಂಡ ತಂಡದಿ
ತುಂಡು ತುಂಡು ಮಾಡಿದ ಸ್ವಾಮಿಯ ಅ.ಪ.
ಕಾಮಪಿತನ ಕೌಸ್ತುಭ ಹಾರನ ಕಸ್ತೂರಿ
ನಾಮವ ನೇಮದಿಂದ ಧರಿಸಿದಾತನ
ವಾಮಭಾಗಲಕ್ಷ್ಮಿ ಸಹಿತ ಹೇಮ ಮಂಟಪದೊಳಗೆ ಕುಳಿತು
ಕಾಮಿಸಿದ ಭಕ್ತರಿಗೆ ಕಾಮಿತಾರ್ಥ ಕೊಡುವ ಸ್ವಾಮಿಯ 1
ಗರುಡವಾಹನವೇರಿ ಗಗನದಿ ಚರಿಸುತ್ತ ಬಂದು
ಸರಸಿಯೊಳು ಕರಿಯ ಸಲಹಿದೆ
ಪರಮಭಕ್ತರ ಕಾವದೇವ ಕರುಣವಾರಿಧಿ ಕಮಲನಯನ
ಉರಗಶಯನ ಉದ್ಧಾರಿ ನಿನ್ನ ಮರೆಯಹೊಕ್ಕೆ ಕಾಯೊ ಎನ್ನ2
ಇಂದುಧರನ ಸಖನೆ ಕೇಳಯ್ಯ ಬಂದಂಥ ದುರಿತ
ಹಿಂದು ಮಾಡಿ ಮುಂದೆ ಸಲಹಯ್ಯ
ತಂದೆ ಅಡಿಯ ಹೊಂದಿದೆನು ಇಂದು ಹೆಳವನಕಟ್ಟೆ ರಂಗ ಆ-ನಂದ ಪಡಿಸೊ ರಾಮಲಿಂಗ ಹೊಂದಿದೆನು ನಿನ್ನ ಚರಣ3
****