ದೇವ ನೀನಹುದೋ ದೇವರದೇವ ನೀನಹುದೋ ಪ
ದೇವ ರಿಪುವನದಾವ ದುರಿತಾಖ್ಯನಾವ ನಮಿತರ
ಕಾವ ಕರುಣಸಂಜೀವ ಜಿತಪೂರ್ಣಕಾಮ ಅ.ಪ
ದೇವಕಿಯಲ್ಲವತರಿಸಿ ಗೋಕುಲವನ್ನು
ಪಾವನವನ್ನು ಮಾಡಿ ಮಡುಹಿ ಮಾವನ ಮಧು-
ರಾವನಿಯನುಗ್ರಸೇನಗಿತ್ತು ದೈತ್ಯಾಳಿಯ ಸವರಿ
ಜೀವ ಸಖನಾಗಿ ಪಾಂಡವರಿಗೆ, ಪಾರ್ಥ
ಸೇವೆಯಲಿ ಸಂದು ಕೀಲಿಸಿ ಕೌರವರನ್ನು
ಭೂವರನ ಹಯಮೇಧಕೊಲಿದು ಬಂದಾ 1
ಧರ್ಮರಾಜನ ಯಜ್ಞತುರಗ ರಕ್ಷೆಗೆ ಕೃತ-
ವರ್ಮಜರು ಕೂಡಿ ನಡಸಿ ನೀಲಾಂಕನ
ಮರ್ಮವರಿತು ಸೋಲಿಸಿ ಹಂಸಧ್ವಜರನ್ನು ಮಾಮಳಿದಡರಿ
ಕರ್ಮವಶದಿಂದ ಬಭ್ರುವಾಹನನ ಕೈಯ
ದುರ್ಮರಣವಾದ ವಿಜಯ ಕರ್ಣರನು
ಪೆರ್ಮೆಯಿಂದಸುವಿತ್ತು ಹೊರೆದ ನಿತ್ಯ ನಿರ್ಮಳಿಕನಹುದೊ 2
ಮುಂತೆ ನಡೆದರ್ಜುನಿಯ ಗೂಡಿ ತಾಮ್ರಧ್ವ
ಜಂ ತುಡುಕಿ ಬರೆ ದ್ವಿಜನಾಗಿ ಶಿಖಿ
ಕೇತುವನು ಬೇಡಿ ವೀರವರ್ಮನ ಗೆಲಿದು ಕುಳೀಂದ್ರಗೊಲಿದು
ದಂತಿಪುರಕೆ ಬಂದರಸನ ಹಯಮೇಧ-
ಮಂ ಪಾಲಿಸಿ ತ್ರಿಜಗವನು ಪಾಂಡವರಿ-
ಗಿತ್ತೊಲಿದು ಸುರಪುರವ ಪೊರೆವ ಲಕ್ಷ್ಮೀಕಾಂತ ನೀನಹುದೋ 3
****