Showing posts with label ಭಕ್ತಿಗೆ ಮೂರು ಗುಣಗಳು ಬೇಕು ಯುಕ್ತಿವಂತರು mahipati. Show all posts
Showing posts with label ಭಕ್ತಿಗೆ ಮೂರು ಗುಣಗಳು ಬೇಕು ಯುಕ್ತಿವಂತರು mahipati. Show all posts

Thursday, 12 December 2019

ಭಕ್ತಿಗೆ ಮೂರು ಗುಣಗಳು ಬೇಕು ಯುಕ್ತಿವಂತರು ankita mahipati

ಭೈರವಿರಾಗ ದಾದರಾ ತಾಳ

ಭಕ್ತಿಗೆ ಮೂರು ಗುಣಗಳು ಬೇಕು ಯುಕ್ತಿವಂತರು ಕೇಳಿ
ಮುಕ್ತಿ ಶೀಲವ ತಿಳಿದು ನಿಜವಿರಕ್ತತನದಲಿ ಬಾಳಿ ||ಧ್ರುವ||

ಪ್ರೇಮ ಪ್ರೀತಿ ರತಿ ನೇಮದಲಿ ಶ್ರೀಸ್ವಾಮಿಚರಣದಲಿಡಬೇಕು
ಸೌಮ್ಯ ಸಮಾಧಾನದಲಿ ತಾನಮೃತವನು ಹಿಡಿಯಬೇಕು
ರೋಮರೋಮವನು ಕೋಮಲವಾಗಿ ನಿರ್ಮಲದಲಿ ನಡಿಬೇಕು
ಶಮೆದಮೆಯಲಿ ತಾ ಕ್ಷಮೆಯನು ಪಡೆದು ಸಮದೃಷ್ಟಿಗುಡಬೇಕು ||೧||

ನಿತ್ಯನಿತ್ಯ ವಿವೇಕವ ತಿಳಿದು ಪಥ್ಯದಲಿ ನಡಿಯಬೇಕು
ಚಿತ್ತವೃತ್ತಿ ಸುವೃತ್ತಿಯ ಮಾಡಿ ಸತ್ಯದಲಿ ನುಡಿಯಬೇಕು
ಉತ್ತಮೋತ್ತಮ ವಸ್ತುದ ನಿಜಸುಖ ಹೃತ್ಕಮಲದಲಿಡಬೇಕು
ಭಕ್ತಿಗೆ ಭಾವನೆ ಬಲಗೊಂಡು ವೈರಾಗ್ಯದ ಸುಖ ತೊಡಬೇಕು ||೨||

ಸೋಹ್ಯ ಸೊನ್ನಿಯ ಸೂತ್ರವ ತಿಳಿದು ಸ್ಥಾಯಿಕನಾಗಿರಬೇಕು
ಧ್ಯೇಯಧ್ಯಾತಧ್ಯಾನವ ತಿಳಿದು ಮಾಯದ ಮೊನಿ ಮುರಿಯಬೇಕು
ನ್ಯಾಯನೀತಿಯ ನೆಲೆನಿಭವನು ಉಪಾಯದಲಿ ಅರಿಯಬೇಕು
ಪಾಯಕನಾಗನುದಿನ ಮಹಿಪತಿ ಗುರುಪಾದದಿ ಸ್ಥಿರವಿರಬೇಕು ||೩||
********