ಕುಡಿಸೆನಗೆ ಹರಿ ನಿನ್ನ ನಾಮರಸವ ಪ
ಕೊಡಬೇಡ ಅನ್ಯರಸ ಹಸಿದಿದ್ದರೂ ಇರುವೆ ಅ.ಪ
ಜನರ ಮನ್ನಣೆ ದೃಷ್ಟಿ ಕನಸಿನಲಾದರೂ ಬೇಡ
ಮನವು ನಿನ್ನಲಿ ಸತತ ನೆಲಸಿರಲಿ ಸ್ವಾಮಿ
ತೃಣವನು ಘನ ಮಾಳ್ಪ ಅನಿಲಮಂದಿರವಾಸ
ಪ್ರಣತಪಾಲಕ ನಿನ್ನ ಮೊರೆಹೊಕ್ಕೆನಯ್ಯ 1
ನಿಜ ಭಕ್ತ ಪದವೀಯೊ ಋಜುವರ್ಗ ಸಂಪೂಜ್ಯ
ಅಜ ಜನಕ ಜಗದೀಶ ಗೋಪಾಲ ಬಾಲ
ವೃಜಿನವ ದೂರ ಮಾಡಿ ಮಾಯಸೆರೆಯನು ಬಿಡಿಸಿ
ಕುಜನರ ಸಂಗ ಎನ್ನ ಹತ್ರ ಸುಳಿಯದಂತೆ ಮಾಡೊ 2
ಕೇಳಿಸು ನಿನ್ನ ಕಥೆ ನೋಡಿಸು ತವ ಮೂರ್ತಿ
ಬಾಳಿಸು ಮನ ನಿನ್ನ ಧ್ಯಾನದಲ್ಲಿ
ಫಾಲಕ್ಷ ಸಖ ಪೂರ್ಣ ಜಯೇಶವಿಠಲ
ಕಾಲಿಗೆ ಬಿದ್ದವನ ಕೈಹಿಡಿದು ಉದ್ಧರಿಸು 3
***