Showing posts with label ಹರಿಕಥಾಮೃತಸಾರ ಸಂಧಿ 21 ankita jagannatha vittala ಕರ್ಮ ವಿಮೋಚನ ಸಂಧಿ HARIKATHAMRUTASARA SANDHI 21 KARMA VIMOCHANA SANDHI. Show all posts
Showing posts with label ಹರಿಕಥಾಮೃತಸಾರ ಸಂಧಿ 21 ankita jagannatha vittala ಕರ್ಮ ವಿಮೋಚನ ಸಂಧಿ HARIKATHAMRUTASARA SANDHI 21 KARMA VIMOCHANA SANDHI. Show all posts

Wednesday, 27 January 2021

ಹರಿಕಥಾಮೃತಸಾರ ಸಂಧಿ 21 ankita jagannatha vittala ಕರ್ಮ ವಿಮೋಚನ ಸಂಧಿ HARIKATHAMRUTASARA SANDHI 21 KARMA VIMOCHANA SANDHI

  

Audio by Mrs. Nandini Sripad


ರಚನೆ : ಶ್ರೀ ಜಗನ್ನಾಥ ದಾಸರು 
for saahitya click   ಹರಿಕಥಾಮೃತಸಾರ ಸಂಧಿ 1 to 32  


ಶ್ರೀಜಗನ್ನಾಥದಾಸಾರ್ಯ ವಿರಚಿತ ಹರಿಕಥಾಮೃತಸಾರ , 

 ಕರ್ಮವಿಮೋಚನ ಸಂಧಿ , ರಾಗ ಹಂಸಾನಂದಿ


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||


ಮೂಲ ನಾರಾಯಣನು ಮಾಯಾ ಲೋಲ ಅನಂತ ಅವತಾರ ನಾಮಕ

ವ್ಯಾಳ ರೂಪ ಜಯಾ ರಮಣನ ಆವೆಶನು ಎನಿಸುವನ

ಲೀಲೆಗೈವ ಅನಂತ ಚೇತನ ಜಾಲದೊಳು ಪ್ರದ್ಯುಮ್ನ

ಬ್ರಹ್ಮಾಂಡ ಆಲಯದ ಒಳ ಹೊರಗೆ ನೆಲೆಸಿಹ ಶಾಂತಿ ಅನಿರುದ್ಧ||1||


ಐದು ಕಾರಣ ರೂಪ ಇಪ್ಪತ್ತೈದು ಕಾರ್ಯಗಳು ಎನಿಸುವವು

ಆರೈದು ರೂಪದಿ ರಮಿಸುತಿಪ್ಪನು ಈ ಚರಾಚರದಿ

ಭೇದ ವರ್ಜಿತ ಮೂರ್ಜಗದ್ಜನ್ಮಾದಿ ಕಾರಣ ಮುಕ್ತಿದಾಯಕ

ಸ್ವಉದರದೊಳಿಟ್ಟು ಎಲ್ಲರನು ಸಂತೈಪ ಸರ್ವಜ್ಞ||2||


ಕಾರ್ಯ ಕಾರಣ ಕರ್ತೃಗಳೊಳು ಸ್ವಭಾರ್ಯರಿಂದ ಒಡಗೂಡಿ

ಕಪಿಲಾಚಾರ್ಯ ಕ್ರೀಡಿಸುತಿಪ್ಪ ತನ್ನೊಳು ತಾನೆ ಸ್ವೇಚ್ಚೆಯಲಿ

ಪ್ರೇರ್ಯನು ಅಲ್ಲೇ ರಮಾಬ್ಜ ಭವರು ಆರ್ಯ ರಕ್ಷಿಸಿ ಶಿಕ್ಷಿಸುವನು

ಸ್ವವೀರ್ಯದಿಂದಲಿ ದಿವಿಜ ದಾನವ ತತಿಯ ದಿನದಿನದಿ||3||


ಈ ಸಮಸ್ತ ಜಗತ್ತಿನೊಳಗೆ ಆಕಾಶದೊಳು ಇರುತಿಪ್ಪ

ವ್ಯಾಪ್ತಾವೇಶ ಅವತಾರಾಂತರಾತ್ಮಕನಾಗಿ ಪರಮಾತ್ಮ

ನಾಶ ರಹಿತ ಜಗತ್ತಿನೊಳಗೆ ಅವಕಾಶದನು ತಾನಾಗಿ

ಯೋಗೀಶಾಶಯ ಸ್ಥಿತ ತನ್ನೊಳು ಎಲ್ಲರನಿಟ್ಟು ಸಲಹುವನು||4||


ದಾರು ಪಾಷಾಣಗತ ಪಾವಕ ಬೇರೆ ಬೇರೆ ಇಪ್ಪಂತೆ

ಕಾರಣ ಕಾರ್ಯಗಳ ಒಳಗಿದ್ದು ಕಾರಣ ಕಾರ್ಯನು ಎಂದೆನಿಸಿ

ತೋರಿಕೊಳ್ಳದೆ ಎಲ್ಲರೊಳು ವ್ಯಾಪಾರ ಮಾಡುವ

ಯೋಗ್ಯತೆಗಳ ಅನುಸಾರ ಫಲಗಳ ಉಣಿಸಿ ಸಂತೈಸುವ ಕೃಪಾಸಾಂದ್ರ||5||


ಊರ್ಮಿಗಳೊಳಿಪ್ಪ ಕರ್ಮ ವಿಕರ್ಮ ಜನ್ಯ ಫಲ ಅಫಲಂಗಳ

ನಿರ್ಮಲಾತ್ಮನು ಮಾಡಿ ಮಾಡಿಸಿ ಉಂಡು ಉಣಿಸುತಿಪ್ಪ

ನಿರ್ಮಮ ನಿರಾಮಯ ನಿರಾಶ್ರಯ ಧರ್ಮವಿತು ಧರ್ಮಾತ್ಮ ಧರ್ಮಗ

ದುರ್ಮತೀ ಜನರ ಒಲ್ಲನು ಅಪ್ರತಿಮಲ್ಲ ಶ್ರೀನಲ್ಲ||6||


ಜಲದ ವಡಬಾನಳಗಳು ಅಂಬುಧಿ ಜಲವನು ಉಂಬುವವು

ಅಬ್ದ ಮಳೆಗರೆದಿಳಿಗೆ ಶಾಂತಿಯನೀವುದು ಅನಲನು ತಾನೇ ಭುಂಜಿಪುದು

ತಿಳಿವುದು ಈ ಪರಿಯಲ್ಲಿ ಲಕ್ಷ್ಮೀ ನಿಲಯ ಗುಣ ಕೃತ ಕರ್ಮಜ

ಫಲಾಫಲಗಳು ಉಂಡು ಉಣಿಸುವನು ಸಾರವಾಗ ಸರ್ವ ಜೀವರಿಗೆ||7||


ಪುಸ್ತಕಗಳ ಅವಲೋಕಿಸುತ ಮಂತ್ರ ಸ್ತುತಿಗಳ ಅನಲೇನು

ರವಿಯ ಉದಯಾಸ್ತಮಯ ಪರ್ಯಂತ ಜಪಗಳ ಮಾಡಿ ಫಲವೇನು

ಹೃಸ್ಥ ಪರಮಾತ್ಮನೆ ಸಮಸ್ತ ಅವಸ್ಥೆಗಳೊಳಿದ್ದು ಎಲ್ಲರೊಳಗೆ

ನಿರಸ್ತಕಾಮನು ಮಾಡಿ ಮಾಡಿಪನು ಎಂದು ತಿಳಿಯದವ||8||


ಮದ್ಯ ಭಾಂಡವ ದೇವ ನದಿಯೊಳಗೆ ಅದ್ದಿ ತೊಳೆಯಲು ನಿತ್ಯದಲಿ

ಪರಿಶುದ್ಧವು ಅಹುದೆ ಎಂದಿಗಾದರು

ಹರಿ ಪದಾಬ್ಜಗಳ ಬುದ್ಧಿ ಪೂರ್ವಕ ಭಜಿಸದವಗೆ ವಿರುದ್ಧವು ಎನಿಸುವವೆಲ್ಲ

ಕರ್ಮ ಸಮೃದ್ಧಿಗಳು ದುಃಖವನೆ ಕೊಡುತಿಹವು ಅಧಮ ಜೀವರಿಗೆ||9||


ಭಕ್ತಿ ಪೂರ್ವಕವಾಗಿ ಮುಕ್ತಾಮುಕ್ತ ನಿಯಾಮಕನ

ಸರ್ವೋದ್ರಿಕ್ತ ಮಹಿಮೆಗಳ ಅನವರತ ಕೊಂಡಾಡು ಮರೆಯದಲೆ

ಸಕ್ತನಾಗದೆ ಲೋಕವಾರ್ತೆ ಪ್ರಸಕ್ತಿಗಳನು ಈಡಾಡಿ

ಶೃತಿ ಸ್ಮೃತಿ ಉಕ್ತ ಕರ್ಮವ ಮಾಡುತಿರು ಹರಿಯಾಜ್ಞೆಯೆಂದರಿದು||10||


ಲೋಪವಾದರು ಸರಿಯೇ ಕರ್ಮಜ ಪಾಪಪುಣ್ಯಗಳು ಎರಡು ನಿನ್ನನು ಲೇಪಿಸವು

ನಿಷ್ಕಾಮಕನು ನೀನಾಗಿ ಮಾಡುತಿರೆ

ಸೌಪರಣಿ ವರವಹನ ನಿನ್ನ ಮಹಾಪರಾಧಗಳ ಎಣಿಸದಲೆ

ಸ್ವರ್ಗಾಪವರ್ಗವ ಕೊಟ್ಟು ಸಲಹುವ ಸತತ ಸುಖಸಾಂದ್ರ||11||


ಸ್ವರತ ಸುಖಮಯ ಸುಲಭ ವಿಶ್ವಂಭರ ವಿಷೋಕ ಸುರಾಸುರಾರ್ಚಿತ ಚರಣ ಯುಗ

ಚಾರು ಅಂಗ ಶಾರ್ನ್ಗ ಶರಣ್ಯ ಜಿತಮನ್ಯು

ಪರಮ ಸುಂದರ ತರ ಪರಾತ್ಪರ ಶರಣ ಜನ ಸುರಧೇನು ಶಾಶ್ವತ ಕರುಣಿ

ಕಂಜದಳಾಕ್ಷಕಾಯೆನೆ ಕಂಗೊಳಿಪ ಶೀಘ್ರ||12||


ನಿರ್ಮಮನು ನೀನಾಗಿ ಕರ್ಮ ವಿಕರ್ಮಗಳು ನಿರಂತರದಿ

ಸುಧರ್ಮ ನಾಮಕಗೆ ಅರ್ಪಿಸುತ ನಿಷ್ಕಲುಷ ನೀನಾಗು

ಭರ್ಮ ಗರ್ಭನ ಜನಕ ದಯದಲಿ ದುರ್ಮತಿಗಳನು ಕೊಡದೆ

ತನ್ನಯ ಹರ್ಮ್ಯದೊಳಗಿಟ್ಟು ಎಲ್ಲ ಕಾಲದಿ ಕಾವ ಕೃಪೆಯಿಂದ||13||


ಕಲ್ಪಕಲ್ಪದಿ ಶರಣ ಜನ ವರಕಲ್ಪವೃಕ್ಷನು

ತನ್ನ ನಿಜ ಸಂಕಲ್ಪದ ಅನುಸಾರದಲಿ ಕೊಡುತಿಪ್ಪನು ಫಲಾಫಲವ

ಅಲ್ಪಸುಖದ ಅಪೇಕ್ಷೆಯಿಂದ ಅಹಿತಲ್ಪನ ಆರಾಧಿಸದಿರು ಎಂದಿಗು

ಶಿಲ್ಪಗನ ಕೈ ಸಿಕ್ಕ ಶಿಲೆಯಂದದಲಿ ಸಂತೈಪ||14||


ದೇಶ ಭೇದ ಆಕಾಶದಂದದಿ ವಾಸುದೇವನು ಸರ್ವ ಭೂತ ನಿವಾಸಿಯೆನಿಸಿ

ಚರಾಚರಾತ್ಮಕನು ಎಂದು ಕರೆಸುವನು

ದ್ವೇಷ ಸ್ನೇಹ ಉದಾಸೀನಗಳಿಲ್ಲ ಈ ಶರೀರಗಳೊಳಗೆ

ಅವರ ಉಪಾಸನಗಳಂದದಲಿ ಫಲವೀವನು ಪರಬ್ರಹ್ಮ್ಹ||15||


ಸಂಚಿತಾಗಾಮಿಗಳ ಕರ್ಮ ವಿರಿಂಚಿ ಜನಕನ ಭಜಿಸೆ ಕೆಡುವವು

ಮಿಂಚಿನಂದದಿ ಪೊಳೆವ ಪುರುಷೋತ್ತಮ ಹೃದಯ ಅಂಬರದಿ

ವಂಚಿಸುವ ಜನರೊಲ್ಲ ಶ್ರೀವತ್ಸಾಂಚಿತ ಸುಸದ್ವಕ್ಷ

ತಾ ನಿಷ್ಕಿಂಚನ ಪ್ರಿಯ ಸುರಮುನಿಗೇಯ ಶುಭಕಾಯ||16||


ಕಾಲದ್ರವ್ಯ ಸುಕರ್ಮ ಶುದ್ಧಿಯ ಪೇಳುವರು ಅಲ್ಪರಿಗೆ

ಅವು ನಿರ್ಮೂಲ ಗೈಸುವವು ಅಲ್ಲ ಪಾಪಗಳ ಎಲ್ಲ ಕಾಲದಲಿ

ತೈಲ ಧಾರೀಯಂತ ಅವನ ಪದ ಓಲೈಸಿ ತುತಿಸದಲೆ ನಿತ್ಯದಿ

ಬಾಲಿಷರು ಕರ್ಮಗಳೆ ತಾರಕವೆಂದು ಪೇಳುವರು||17||


ಕಮಲಸಂಭವ ಶರ್ವ ಶಕ್ರಾದಿ ಅಮರರೆಲ್ಲರು

ಇವನ ದುರತಿಕ್ರಮ ಮಹಿಮೆಗಳ ಮನವಚನದಿಂ ಪ್ರಾಂತಗಾಣದಲೆ

ಶ್ರಮಿತರಾಗಿ ಪದಾಬ್ಜ ಕಲ್ಪದ್ರುಮದ ನೆಳಲ ಆಶ್ರಯಿಸಿ

ಲಕ್ಷ್ಮೀ ರಮಣ ಸಂತೈಸೆಂದು ಪ್ರಾರ್ಥಿಪರು ಅತಿ ಭಕುತಿಯಿಂದ||18||


ವಾರಿಚರವು ಎನಿಸುವವು ದರ್ದುರ ತಾರಕಗಳೆಂದರಿದು

ಭೇಕವನು ಏರಿ ಜಲಧಿಯ ದಾಟುವೆನೆಂಬುವನ ತೆರದಂತೆ

ತಾರತಮ್ಯ ಜ್ಞಾನ ಶೂನ್ಯರು ಸೂರಿಗಮ್ಯನ ತಿಳಿಯಲರಿಯದೆ

ಸೌರಶೈವ ಮತಾನುಗರ ಅನುಸರಿಸಿ ಕೆಡುತಿಹರು||19||


ಕ್ಷೋಣಿಪತಿ ಸುತನೆನಿಸಿ ಕೈದುಗ್ಗಾಣಿಗೊಡ್ಡುವ ತೆರದಿ

ಸುಮನಸ ಧೇನು ಮನೆಯೊಳಗಿರಲು ಗೋಮಯ ಬಯಸುವಂದದಲಿ

ವೇಣುಗಾನಪ್ರಿಯನ ಅಹಿಕ ಸುಖಾನುಭವ ಬೇಡದಲೆ

ಲಕ್ಷ್ಮೀ ಪ್ರಾಣನಾಥನ ಪಾದ ಭಕುತಿಯ ಬೇಡು ಕೊಂಡಾಡು||20||


ಕ್ಷುಧೆಯ ಗೋಸುಗ ಪೋಗಿ ಕಾನನ ಬದರಿ ಫಲಗಳ ಅಪೇಕ್ಷೆಯಿಂದಲಿ

ಪೊದೆಯೊಳಗೆ ಸಿಗ ಬಿದ್ದು ಬಾಯ್ದೆರೆದವನ ತೆರದಂತೆ

ವಿಧಿಪಿತನ ಪೂಜಿಸದೆ ನಿನ್ನಯ ಉದರ ಗೋಸುಗ

ಸಾಧುಲಿಂಗ ಪ್ರದರ್ಶಕರ ಆರಾಧಿಸುತ ಬಳಲದಿರು ಭವದೊಳಗೆ||21||


ಜ್ಞಾನ ಜ್ಞೇಯ ಜ್ಞಾತೃವೆಂಬ ಅಭಿಧಾನದಿಂ ಬುದ್ಧಾದಿಗಳ ಅಧಿಷ್ಠಾನದಲಿ ನೆಲೆಸಿದ್ದು

ಕರೆಸುತ ತತ್ತದಾಹ್ವಯದಿ

ಭಾನುಮಂಡಲಗ ಪ್ರದರ್ಶಕ ತಾನೆನಿಸಿ ವಶನಾಗುವನು

ಶುಕ ಶೌನಕಾದಿ ಮುನೀಂದ್ರ ಹೃದಯಾಕಾಶಗತ ಚಂದ್ರ||22||


ಉದಯ ವ್ಯಾಪಿಸಿ ದರ್ಶ ಪೌರ್ಣಿಮ ಅಧಿಕ ಯಾಮವು ಶ್ರವಣ ಅಭಿಜಿತು

ಸದನವೈದಿರೆ ಮಾಳ್ಪ ತೆರದಂದದಲಿ ಹರಿಸೇವೆ

ವಿಧಿ ನಿಷೇಧಗಳು ಏನು ನೋಡದೆ ವಿಧಿಸುತಿರು

ನಿತ್ಯದಲಿ ತನ್ನಯ ಸದನದೊಳಗಿಂಬಿಟ್ಟು ಸಲಹುವ ಭಕ್ತವತ್ಸಲನು||23||


ನಂದಿವಾಹನ ರಾತ್ರಿ ಸಾಧನೆ ಬಂದ ದ್ವಾದಶಿ ಪೈತೃಕ ಸಂಧಿಸಿಹ ಸಮಯದಲಿ

ಶ್ರವಣವ ತ್ಯಜಿಸುವಂತೆ ಸದಾ

ನಿಂದ್ಯರಿಂದಲಿ ಬಂದ ದ್ರವ್ಯವ ಕಣ್ದೆರೆದು ನೋಡದಲೆ

ಶ್ರೀಮದಾನಂದತೀರ್ಥ ಅಂತರ್ಗತನ ಸರ್ವತ್ರ ಭಜಿಸುತಿರು||24||


ಶ್ರೀ ಮನೋರಮ ಮೇರು ತ್ರಿಕಕುದ್ಧಾಮ ಸತ್ಕಲ್ಯಾಣಗುಣ ನಿಸ್ಸೀಮ

ಪಾವನನಾಮ ದಿವಿಜೋದ್ಧಾಮ ರಘುರಾಮ

ಪ್ರೇಮಪೂರ್ವಕ ನಿತ್ಯ ತನ್ನ ಮಹಾ ಮಹಿಮೆಗಳ ತುತಿಸುವರಿಗೆ

ಸುಧಾಮಗೆ ಒಲಿದಂದದಲಿ ಅಖಿಳಾರ್ಥಗಳ ಕೊಡುತಿಪ್ಪ||25||


ತಂದೆ ತಾಯ್ಗಳ ಕುರುಹನರಿಯದ ಕಂದ ದೇಶಾಂತರದೊಳಗೆ ತನ್ನಂದದಲಿ

ಇಪ್ಪವರ ಜನನೀ ಜನಕರನು ಕಂಡು

ಹಿಂದೆಯೆನ್ನನು ಪಡೆದ ಅವರು ಈ ಯಂದದಲಿಪ್ಪರೋ ಅಲ

ನಾನು ಅವರ ಎಂದು ಕಾಣುವೆನೆನುತ ಹುಡುಕುವ ತೆರದಿ ಕೋವಿದರು||26||


ಶ್ರುತಿ ಪುರಾಣ ಸಮೂಹದೊಳು ಭಾರತ ಪ್ರತಿ ಪ್ರತಿ ಪದಗಳೊಳು

ನಿರ್ಜಿತನ ಗುಣ ರೂಪಗಳ ಪುಡುಕುತ ಪರಮ ಹರುಷದಲಿ

ಮತಿಮತರು ಪ್ರತಿದಿವಸ ಸಾರಸ್ವತ ಸಮುದ್ರದಿ

ಶಫರಿಯಂದದಿ ಸತತ ಸಂಚರಿಸುವರು ಕಾಣುವ ಲವಲವಿಕೆಯಿಂದ||27||


ಮತ್ಸ್ಯಕೇತನ ಜನಕ ಹರಿ ಶ್ರೀವತ್ಸ ಲಾಂಛನ ನಿಜ ಶರಣ ಜನವತ್ಸಲ

ವರಾರೋಹ ವೈಕುಂಠಆಲಯ ನಿವಾಸಿ

ಚಿತ್ಸುಖಪ್ರದ ಸಲಹೆನಲು ಗೋವತ್ಸ ಧ್ವನಿಗೊದಗುವ ತೆರದಿ

ಪರಮೋತ್ಸಾಹದಿ ಬಂದೊದಗವುನು ನಿರ್ಮತ್ಸರರ ಬಳಿಗೆ||28||


ಸೂರಿಗಳಿಗೆ ಸಮೀಪಗ ದುರಾಚಾರಿಗಳಿಗೆ ಎಂದೆಂದು ದೂರಾದ್ದೂರತರ

ದುರ್ಲಭನು ಎನಿಸುವನು ದೈತ್ಯ ಸಂತತಿಗೆ

ಸಾರಿ ಸಾರಿಗೆ ನೆನೆವವರ ಸಂಸಾರವೆಂಬ ಮಹೋರಗಕೆ ಸರ್ವಾರಿಯೆನಿಸಿ

ಸದಾ ಸುಸೌಖ್ಯವನು ಈವ ಶರಣರಿಗೆ||29||


ಚಕ್ರ ಶಂಖ ಗದಾಬ್ಜಧರ ದುರತಿಕ್ರಮ ದುರಾವಾಸ

ವಿಧಿ ಶಿವ ಶಕ್ರ ಸೂರ್ಯಾದ್ಯ ಅಮರ ಪೂಜ್ಯ ಪದಾಬ್ಜ ನಿರ್ಲಜ್ಜ

ಶುಕ್ರ ಶಿಷ್ಯರ ಅಶ್ವಮೇಧಾ ಪ್ರಕ್ರಿಯವ ಕೆಡಿಸಿ

ಅಬ್ಜಜಾಂಡವ ಅತಿಕ್ರಮಿಸಿ ಜಾಹ್ನವಿಯ ಪಡೆದ ತ್ರಿವಿಕ್ರಮಾಹ್ವಯನು||30||


ಶಕ್ತರೆನಿಸುವರೆಲ್ಲ ಹರಿ ವ್ಯತಿರಿಕ್ತ ಸುರಗಣದೊಳಗೆ

ಸರ್ವೋದ್ರಿಕ್ತನು ಎನಿಸುವ ಸರ್ವರಿಂದಲಿ ಸರ್ವ ಕಾಲದಲಿ

ಭಕ್ತಿ ಪೂರ್ವಕವಾಗಿ ಅನ್ಯ ಪ್ರಸಕ್ತಿಗಳ ನೀಡಾಡಿ

ಪರಮಾಸಕ್ತನು ಆಗಿರು ಹರಿಕಥಾಮೃತ ಪಾನ ವಿಷಯದಲಿ||31||


ಪ್ರಣತ ಕಾಮದ ಭಕ್ತ ಚಿಂತಾಮಣಿ ಮಣಿಮಯಾಭರಣ ಭೂಷಿತ

ಗುಣಿ ಗುಣ ತ್ರಯ ದೂರ ವರ್ಜಿತ ಗಹನ ಸನ್ಮಹಿಮ

ಎಣಿಸ ಭಕ್ತರ ದೋಷಗಳ ಕುಂಭಿಣಿಜೆಯಾಣ್ಮ ಶರಣ್ಯ

ರಾಮಾರ್ಪಣವೆನಲು ಕೈಕೊಂಡ ಶಬರಿಯ ಫಲವ ಪರಮಾತ್ಮ||32||


ಬಲ್ಲೆನೆಂಬುವರಿಲ್ಲವು ಈತನ ಒಲ್ಲೆನೆಂಬುವರಿಲ್ಲ

ಲೋಕದೊಳಿಲ್ಲದಿಹ ಸ್ಥಳವಿಲ್ಲವೈ ಅಜ್ಞಾತ ಜನರಿಲ್ಲ

ಬೆಲ್ಲದಚ್ಚಿನ ಬೊಂಬೆಯಂದದಿ ಎಲ್ಲರೊಳಗಿರುತಿಪ್ಪ

ಶ್ರೀಭೂ ನಲ್ಲ ಇವಗೆ ಎಣೆಯಿಲ್ಲ ಅಪ್ರತಿಮಲ್ಲ ಜಗಕೆಲ್ಲ||33||


ಶಬ್ದ ಗೋಚರ ಶಾರ್ವರೀಕರ ಅಬ್ದ ವಾಹನನನುಜ

ಯದುವಂಶಾಬ್ಧಿ ಚಂದ್ರಮ ನಿರುಪಮ ಸುನಿಸ್ಸೀಮ ಸಮಿತಸಮ

ಲಬ್ಧನಾಗುವ ತನ್ನವಗೆ ಪ್ರಾರಬ್ಧ ಕರ್ಮಗಳ ಉಣಿಸಿ ತೀವ್ರದಿ

ಕ್ಷುಬ್ಧ ಪಾವಕನಂತೆ ಬಿಡದಿಪ್ಪನು ದಯಾಸಾಂದ್ರ||34||


ಶ್ರೀ ವಿರಿಂಚಿ ಆದಿ ಅಮರ ವಂದಿತ ಈ ವಸುಂಧರೆಯೊಳಗೆ

ದೇವಕಿ ದೇವಿ ಜಠರದೊಳು ಅವತರಿಸಿದನು ಅಜನು ನರರಂತೆ

ರೇವತೀ ರಮಣ ಅನುಜನು ಸ್ವಪದಾವಲಂಬಿಗಳನು ಸಲಹಿ

ದೈತ್ಯಾವಳಿಯ ಸಂಹರಿಸಿದ ಜಗನ್ನಾಥ ವಿಠಲನು||35||

*********


harikathAmRutasAra gurugaLa karuNadindApanitu kELuve

parama BagavadBaktaru idanAdaradi kELuvudu||


mUla nArAyaNanu mAyA lOla ananta avatAra nAmaka

vyALa rUpa jayA ramaNana AveSanu enisuvana

lIlegaiva ananta cEtana jAladoLu pradyumna

brahmAnDa Alayada oLa horage nelesiha SAnti aniruddha||1||


aidu kAraNa rUpa ippattaidu kAryagaLu enisuvavu

Araidu rUpadi ramisutippanu I carAcaradi

BEda varjita mUrjagadjanmAdi kAraNa muktidAyaka

sva^^udaradoLiTTu ellaranu saMtaipa sarvaj~ja||2||


kArya kAraNa kartRugaLoLu svaBAryarinda oDagUDi

kapilAcArya krIDisutippa tannoLu tAne svEcceyali

prEryanu allE ramAbja Bavaru Arya rakShisi SikShisuvanu

svavIryadindali divija dAnava tatiya dinadinadi||3||


I samasta jagattinoLage AkASadoLu irutippa

vyAptAvESa avatArAntarAtmakanAgi paramAtma

nASa rahita jagattinoLage avakASadanu tAnAgi

yOgISASaya sthita tannoLu ellaraniTTu salahuvanu||4||


dAru pAShANagata pAvaka bEre bEre ippante

kAraNa kAryagaLa oLagiddu kAraNa kAryanu endenisi

tOrikoLLade ellaroLu vyApAra mADuva

yOgyategaLa anusAra PalagaLa uNisi santaisuva kRupAsAndra||5||


UrmigaLoLippa karma vikarma janya Pala aPalangaLa

nirmalAtmanu mADi mADisi unDu uNisutippa

nirmama nirAmaya nirASraya dharmavitu dharmAtma dharmaga

durmatI janara ollanu apratimalla SrInalla||6||


jalada vaDabAnaLagaLu aMbudhi jalavanu uMbuvavu

abda maLegarediLige SAntiyanIvudu analanu tAnE Bunjipudu

tiLivudu I pariyalli lakShmI nilaya guNa kRuta karmaja

PalAPalagaLu unDu uNisuvanu sAravAga sarva jIvarige||7||


pustakagaLa avalOkisuta mantra stutigaLa analEnu

raviya udayAstamaya paryanta japagaLa mADi PalavEnu

hRustha paramAtmane samasta avasthegaLoLiddu ellaroLage

nirastakAmanu mADi mADipanu endu tiLiyadava||8||


madya BAnDava dEva nadiyoLage addi toLeyalu nityadali

pariSuddhavu ahude endigAdaru

hari padAbjagaLa buddhi pUrvaka Bajisadavage viruddhavu enisuvavella

karma samRuddhigaLu duHKavane koDutihavu adhama jIvarige||9||


Bakti pUrvakavAgi muktAmukta niyAmakana

sarvOdrikta mahimegaLa anavarata konDADu mareyadale

saktanAgade lOkavArte prasaktigaLanu IDADi

SRuti smRuti ukta karmava mADutiru hariyAj~jeyendaridu||10||


lOpavAdaru sariyE karmaja pApapuNyagaLu eraDu ninnanu lEpisavu

niShkAmakanu nInAgi mADutire

sauparaNi varavahana ninna mahAparAdhagaLa eNisadale

svargApavargava koTTu salahuva satata suKasAMdra||11||


svarata suKamaya sulaBa viSvaMBara viShOka surAsurArcita caraNa yuga

cAru aMga SArnga SaraNya jitamanyu

parama suMdara tara parAtpara SaraNa jana suradhEnu SASvata karuNi

kanjadaLAkShakAyene kangoLipa SIGra||12||


nirmamanu nInAgi karma vikarmagaLu nirantaradi

sudharma nAmakage arpisuta niShkaluSha nInAgu

Barma garBana janaka dayadali durmatigaLanu koDade

tannaya harmyadoLagiTTu ella kAladi kAva kRupeyiMda||13||


kalpakalpadi SaraNa jana varakalpavRukShanu

tanna nija sankalpada anusAradali koDutippanu PalAPalava

alpasuKada apEkSheyinda ahitalpana ArAdhisadiru endigu

Silpagana kai sikka Sileyandadali santaipa||14||


dESa BEda AkASadandadi vAsudEvanu sarva BUta nivAsiyenisi

carAcarAtmakanu endu karesuvanu

dvESha snEha udAsInagaLilla I SarIragaLoLage

avara upAsanagaLandadali PalavIvanu parabrahmha||15||


sancitAgAmigaLa karma virinci janakana Bajise keDuvavu

mincinandadi poLeva puruShOttama hRudaya aMbaradi

vancisuva janarolla SrIvatsAncita susadvakSha

tA niShkincana priya suramunigEya SuBakAya||16||


kAladravya sukarma Suddhiya pELuvaru alparige

avu nirmUla gaisuvavu alla pApagaLa ella kAladali

taila dhArIyanta avana pada Olaisi tutisadale nityadi

bAliSharu karmagaLe tArakavendu pELuvaru||17||


kamalasaMBava Sarva SakrAdi amararellaru

ivana duratikrama mahimegaLa manavacanadiM prAntagANadale

SramitarAgi padAbja kalpadrumada neLala ASrayisi

lakShmI ramaNa santaisendu prArthiparu ati Bakutiyinda||18||


vAricaravu enisuvavu dardura tArakagaLendaridu

BEkavanu Eri jaladhiya dATuveneMbuvana teradante

tAratamya j~jAna SUnyaru sUrigamyana tiLiyalariyade

sauraSaiva matAnugara anusarisi keDutiharu||19||


kShONipati sutanenisi kaiduggANigoDDuva teradi

sumanasa dhEnu maneyoLagiralu gOmaya bayasuvandadali

vENugAnapriyana ahika suKAnuBava bEDadale

lakShmI prANanAthana pAda Bakutiya bEDu konDADu||20||


kShudheya gOsuga pOgi kAnana badari PalagaLa apEkSheyindali

podeyoLage siga biddu bAyderedavana teradante

vidhipitana pUjisade ninnaya udara gOsuga

sAdhulinga pradarSakara ArAdhisuta baLaladiru BavadoLage||21||


j~jAna j~jEya j~jAtRuveMba aBidhAnadiM buddhAdigaLa adhiShThAnadali nelesiddu

karesuta tattadAhvayadi

BAnumaMDalaga pradarSaka tAnenisi vaSanAguvanu

Suka SaunakAdi munIndra hRudayAkASagata caMdra||22||


udaya vyApisi darSa paurNima adhika yAmavu SravaNa aBijitu

sadanavaidire mALpa teradandadali harisEve

vidhi niShEdhagaLu Enu nODade vidhisutiru

nityadali tannaya sadanadoLagiMbiTTu salahuva Baktavatsalanu||23||


nandivAhana rAtri sAdhane banda dvAdaSi paitRuka sandhisiha samayadali

SravaNava tyajisuvante sadA

nindyarindali banda dravyava kaNderedu nODadale

SrImadAnandatIrtha antargatana sarvatra Bajisutiru||24||


SrI manOrama mEru trikakuddhAma satkalyANaguNa nissIma

pAvananAma divijOddhAma raGurAma

prEmapUrvaka nitya tanna mahA mahimegaLa tutisuvarige

sudhAmage olidandadali aKiLArthagaLa koDutippa||25||


tande tAygaLa kuruhanariyada kanda dESAntaradoLage tannandadali

ippavara jananI janakaranu kanDu

hindeyennanu paDeda avaru I yandadalipparO ala

nAnu avara endu kANuvenenuta huDukuva teradi kOvidaru||26||


Sruti purANa samUhadoLu BArata prati prati padagaLoLu

nirjitana guNa rUpagaLa puDukuta parama haruShadali

matimataru pratidivasa sArasvata samudradi

SaPariyaMdadi satata sancarisuvaru kANuva lavalavikeyinda||27||


matsyakEtana janaka hari SrIvatsa lAnCana nija SaraNa janavatsala

varArOha vaikunTha^^Alaya nivAsi

citsuKaprada salahenalu gOvatsa dhvanigodaguva teradi

paramOtsAhadi baMdodagavunu nirmatsarara baLige||28||


sUrigaLige samIpaga durAcArigaLige endendu dUrAddUratara

durlaBanu enisuvanu daitya saMtatige

sAri sArige nenevavara saMsAraveMba mahOragake sarvAriyenisi

sadA susauKyavanu Iva SaraNarige||29||


cakra SaMKa gadAbjadhara duratikrama durAvAsa

vidhi Siva Sakra sUryAdya amara pUjya padAbja nirlajja

Sukra SiShyara aSvamEdhA prakriyava keDisi

abjajAMDava atikramisi jAhnaviya paDeda trivikramAhvayanu||30||


Saktarenisuvarella hari vyatirikta suragaNadoLage

sarvOdriktanu enisuva sarvariMdali sarva kAladali

Bakti pUrvakavAgi anya prasaktigaLa nIDADi

paramAsaktanu Agiru harikathAmRuta pAna viShayadali||31||


praNata kAmada Bakta ciMtAmaNi maNimayABaraNa BUShita

guNi guNa traya dUra varjita gahana sanmahima

eNisa Baktara dOShagaLa kuMBiNijeyANma SaraNya

rAmArpaNavenalu kaikoMDa Sabariya Palava paramAtma||32||


balleneMbuvarillavu Itana olleneMbuvarilla

lOkadoLilladiha sthaLavillavai aj~jAta janarilla

belladaccina boMbeyandadi ellaroLagirutippa

SrIBU nalla ivage eNeyilla apratimalla jagakella||33||


Sabda gOcara SArvarIkara abda vAhanananuja

yaduvaMSAbdhi candrama nirupama sunissIma samitasama

labdhanAguva tannavage prArabdha karmagaLa uNisi tIvradi

kShubdha pAvakanante biDadippanu dayAsAndra||34||


SrI virinci Adi amara vaMdita I vasundhareyoLage

dEvaki dEvi jaTharadoLu avatarisidanu ajanu nararante

rEvatI ramaNa anujanu svapadAvalaMbigaLanu salahi

daityAvaLiya saMharisida jagannAtha viThalanu||35||

*********