Showing posts with label ಮಂಗಳಾಂಗ ಮನ್ನಿಸಿ ತಪ್ಪನು ರಂಗನಾಥ ರಕ್ಷಿಸೈ ತಂದೆ ಎನ್ನನು others. Show all posts
Showing posts with label ಮಂಗಳಾಂಗ ಮನ್ನಿಸಿ ತಪ್ಪನು ರಂಗನಾಥ ರಕ್ಷಿಸೈ ತಂದೆ ಎನ್ನನು others. Show all posts

Friday, 27 December 2019

ಮಂಗಳಾಂಗ ಮನ್ನಿಸಿ ತಪ್ಪನು ರಂಗನಾಥ ರಕ್ಷಿಸೈ ತಂದೆ ಎನ್ನನು others

ರಾಗ ನೀಲಾಂಬರಿ ಮಟ್ಟ ತಾಳ 

ಮಂಗಳಾಂಗ ಮನ್ನಿಸಿ ತಪ್ಪನು
ರಂಗನಾಥ ರಕ್ಷಿಸೈ ತಂದೆ ಎನ್ನನು ||ಪ||

ಮಮತೆ ಇಲ್ಲದ ಮಡದಿ ಏತಕೆ, ರಂಗನಾಥ
ಸುಮತಿ ಇಲ್ಲದ ಸುತನು ಏತಕೆ
ಕುಮತಿಯುತರ ಸಂಗವೇಕೆ, ಸಮತೆಯಿಲ್ಲದ ಬಂಧುವೇಕೆ
ಅಮಿತ ನಿನ್ನ ಚರಣಕಮಲ ರಮಿತನಾಗದ ಮನುಜನೇಕೆ ||೧||

ಕಣ್ಣು ಇಲ್ಲದ ರೂಪ ಏತಕೆ, ರಂಗನಾಥ
ಹೊನ್ನು ಇಲ್ಲದ ಬಾಳು ಏತಕೆ
ಮುನ್ನ ಮೂಗು ಇಲ್ಲದ ಮುಖವು ಮಣ್ಣು ತಿಂದು ಹೋದರೇನು
ಅಣ್ಣ ನಿನ್ನ ಭಕುತಿ ಇಲ್ಲದ ಸಣ್ಣ ಮನುಜ ಸತ್ತರೇನು ||೨||

ದಾನವಿಲ್ಲದ ಧನವು ಏತಕೆ, ರಂಗನಾಥ
ಜ್ಞಾನವಿಲ್ಲದ ವಿದ್ಯೆ ಏತಕೆ
ಆಣೆ ಇಲ್ಲದ ಅರಸು ತಾನು ಅಡವಿಪಾಲು ಆದರೇನು
ದೀನ ಬಂಧು ನಿನ್ನ ನಂಬದ ಮಾನಹೀನ ಮನುಜನೇತಕೆ ||೩||

ಮಕ್ಕಳಿಲ್ಲದ ಮನೆಯು ಏತಕೆ, ರಂಗನಾಥ
ಅಕ್ಕರೆಯಿಲ್ಲದ ಊಟವೇತಕೆ
ಸೊಕ್ಕಿ ನಡೆವ ಬಂಟನೇತಕೆ ಮಿಕ್ಕುಮೀರ್ವ ಶಿಷ್ಯನೇತಕೆ
ರಕ್ಕಸಾರಿ ನಿನ್ನ ಸೇರದ ಸೊಕ್ಕುನರನ ಜನ್ಮವೇತಕೆ ||೪||

ಸಾಕು ಸಾಕು ದೀನನಾದೆನು, ರಂಗನಾಥ
ಸಾಕು ಸಾಕೈ ಬೇಗ ಎನ್ನನು
ಕಾಕು ಮಾಡಿ ವೈಕುಂಠದ ನಗರದೊಡೆಯ ನಾರಸಿಂಹ
ಏಕ ಭಕ್ತಿಯಿಂದಲಿರುವನ ಏಕೆ ಕೈಯ ಬಿಡುವೆ ದೊರೆಯೆ ||೫||
*********