ಕಾಖಂಡಕಿ ಶ್ರೀ ಮಹಿಪತಿರಾಯರು
ತ್ರಾಹಿ ಶ್ರೀ ಗುರುನಾಥ ತ್ರಾಹಿ ಸದ್ಗುರುನಾಥ ತ್ರಾಹಿ ಕರುಣಾಳು ಗುರುಮೂರ್ತಿ ಸದೋದಿತ ತ್ರಾಹಿ ಶ್ರೀನಾಥ ಕರುಣಿಸೆನ್ನನು ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ದೀನ ನಾಥ ತ್ರಾಹಿ ಗುರು ಮನ್ನಾಥ ಕಾಯೊ ಎನ್ನನು 1
ಹಿಂದೆ ಅನೇಕ ಜನ್ಮವನು ಸೋಸಿ ಬಂದು ನಾನಾ ಹೀನಯೋನಿ ಮುಖದಲಿ ಜನಿಸಿ ಕಂದಿ ಕುಂದಿದೆ ಗರ್ಭಪಾಶದೊಳು ಅಂದಿಗಿಂದಿಗೆ ನಿಮ್ಮ ಕುರುಹು ಕಾಣದೆ ತಿರುಗಿ ಮುಂದಗಾಣದೆ ಕುರುಡನಂತಾದೆ ಧರೆಯೊಳು ಬಂದೆ ಶ್ರೀಗುರು ಪಾದವನ್ನರಿಯದೆ 2
ಇಂದೆನ್ನ ಜನುಮ ಸಾಫಲ್ಯವಾಯಿತಯ್ಯ ಗುರು ಇಂದು ಮುನ್ನಿನ ಪುಣ್ಯ ಉದಯವಾಯಿತು ಎನಗೆ ಇಂದೆನ್ನ ಜೀವ ಪಾವನವಾಯಿತು ಸಂದು ಹರಿಯಿತು ಜನ್ಮ ಮರಣ ಎನಗಿಂದು ತಾ ಮುಂದೆ ಯಮಬಾಧೆ ಗುರಿಯಾಗುವದ್ಹಿಂಗಿತು ತಂದೆ ಶ್ರೀಗುರು ಚರಣದರುಶನದಲಿ 3
ದೇಶಿಗರ ದೇವನಹುದಯ್ಯ ಶ್ರೀಗುರುಮುನಿಯೆ ಅಶೆಪೂರಿತ ಕಲ್ಪವೃಕ್ಷ ಚಿಂತಾಮಣಿಯೆ ವಿಶ್ವ ವ್ಯಾಪಕ ಆತ್ಮ ಹಂಸಮಣಿಯೆ ಈಶ ದೇವೇಶ ಸರ್ವೇಶ ಸದ್ಗುಣಮಣಿಯೆ ವಾಸುದೇವನು ತ್ರೈಲೋಕ್ಯ ತಾರಕಮಣಿಯೆ ಭಾಸಿ ಪಾಲಿಪ ಭವನಾಶ ಮಣಿಯೆ 4
ಕರುಣ ದಯದಿಂದ ನೋಡೆನ್ನ ಶ್ರೀಗುರುರಾಯ ತರಳ ಮಹಿಪತಿ ಪ್ರಾಣೊಪ್ಪಿಸಿಕೊಂಡು ಈ ದೇಹ ಹೊರೆದು ಸಲಹುವದೆನ್ನ ಇಹಪರವನು ಕರದ್ವಯ ಮುಗಿದು ಎರಗುವೆನು ಸಾಷ್ಟಾಂಗದಲಿ ತಾರಿಸುವದೆಂದು ಸ್ತುತಿಸುವೆ ಅಂತರಾತ್ಮದಲಿ ತ್ರಾಹಿ ತ್ರಾಹಿಯೆಂಬೆನು ಮನದಲಿ 5
****