..
ಹಮ್ಮನಳಿದು ನಮ್ಮ ಮತವ-
ನೆಮ್ಮ ಜಯಮುನೀಂದ್ರ ಕೃತಿಯ
ರಮ್ಯರಸವ ಸವಿದು ಸವಿದು
ನಿಮ್ಮ ದುರ್ಮತಗಳನೆ ಬಿಡಿರೊ ಪ.
ಸುಖಮುನಿ ಚತುರ್ಮುಖರು ಕುಮತ
ನಿಕರವ ನೋಡಿ ಮನಕೆ ತಂದು
ಸುಕೃತಿಯೆಂಬ ಶ್ರೌತ ಜಲದಿ ಕೃಷ್ಣನ ಪಾದ ತೊಳೆಯಲು
ಭಕುತಿಭರದಿ ಗಿರೀಶಮುಖ್ಯ
ಸಕಲ ಸುರರು ಶಿರದ ಮೇಲೆ
ಲಕುಮಿ ಆತ್ಮಕರಾಗಿ ಧರಿಸಿ
ಸುಖಿಸಿದ ಕಥೆ ಸ್ಮøತಿಯೊಳಿರಲು 1
ಆಗ ಭಗೀರಥನ ತೆರದಿ ಯೋಗಿ ಜಯಮುನೀಂದ್ರ ಕೃಪಾ-
ಸಾಗರನಾಗಿ ಧರೆಗೆ ಬಂದು
ಈ ಗುರುಕೃತಿಗಂಗೆಯ
ಬೇಗ ತಾನು ತುತಿಸಿ ಮೈಯ
ಯಾಗಗೊಳಿಸಿ ಸಹಸ್ರ ಮುಖದಿ
ಭಾಗವತರೆಂಬ ಬುಧರಿಗಿತ್ತ
ಭಾಗ್ಯವ ನೀವೆಲ್ಲ ನೋಡಿರೊ 2
ಶ್ರುತಿಮಯವಾದ ಬಹಳ ಬಲು ಯು
ಕುತಿಯನೆ ಅಳವಡಿಸಿ ಸು-
ಮತಿಯೆಂಬ ಮಂದರ ಹೂಡಿ
ಮಥಿಸಿ ಮಧ್ವಮತಾಬ್ಧಿಯ
ಯತಿಶಿರೋಮಣಿ ಜಯಮುನಿ ಶ್ರೀ-
ಪತಿ ಹಯವದನ್ನ ಬಲದಿ
ಶ್ರುತಿಯಮೃತವ ರಚಿಸಿದ ನಮ್ಮ
ಕ್ಷಿತಿಸುರರೆ ಕುಡಿದು ನೋಡಿರೋ3
***