..
ಮಂಗಳಂ ಶ್ರೀರಾಮಚಂದ್ರಗೆ ಜಯ
ಮಂಗಳಂ ಸೀತಾಸಮೇತನಿಗೆ ಪ.
ಮಚ್ಛಾವತಾರಗೆ ವೇದವ ತಂದಗೆ
ಕೂರ್ಮರೂಪದಿ ಜಲದೊಳು ಪೊಕ್ಕವಗೆ
ಹಿರಣ್ಯಾಕ್ಷಸುರನ ಗೆಲಿಯೆ ಬಂದು
ಮೆಚ್ಚೆ ವರಹರೂಪ ತೋರಿದಗೆ 1
ಛತ್ರಿಯ ಪಿಡಿದು ಭರತ ನಿಂದಿರಲಾಗ
ಶತ್ರುಘ್ನ ಚಾಮರವನು ಬೀಸಲು
ಮತ್ತೆ ಲಕ್ಷ್ಮಣ ಮಡುದೆಲೆ ಕೊಡುತಿರಲಾಗಿ
ವಿಸ್ತಾರ ವೈಭೋಗ ರಘುರಾಮಗೆ 2
ತಮ್ಮ ಲಕ್ಷ್ಮಣ ಸಹ ಒಲ್ಮೆಯಿಂದಲಿ ಬಂದ
ನಮ್ಮ ಶ್ರೀರಘುರಾಮಚಂದ್ರನಿಗೆ
ಸನ್ಮಾನದಲಿ ರಾಮ ಸಾಗರಶಯನಾಗೆ
ಚೆನ್ನ ಚುಂಚನಕಟ್ಟೆಸ್ಥಿರವಾಸಿಗೆ 3
ಎಡದ ಕರದಿ ಬಿಲ್ಲು ಬಲದ ಕರದಿ ಬಾಣ
ಕರದ ಕಮಲದೊಳಗಿಪ್ಪವನಿಗೆ
ಬಲದ ಭಾಗದಿ ಸಿರಿ ಸೀತೆಯ ಧರಿಸಿದ
ಚದುರ ಶ್ರೀ ಕಲ್ಯಾಣ ಚಂದ್ರನಿಗೆ 4
ಹರುಷದಿ ದೇವತೆಗಳಿಗೊರವಿತ್ತಗೆ
ದುರುಳ ರಕ್ಕಸರ ಸಂಹರಿಸಿದಗೆ
ಪರಮ ಭಕ್ತನಿಗೆ ಸ್ಥಿರರಾಜ್ಯವನೆ ಕೊಟ್ಟ
ಹಯವದನಮೂರ್ತಿ ಎಂದೆನಿಸಿದಗೆ 5
***