ಭಕ್ತವತ್ಸಲ ಭಾರಕರ್ತಾ | ಕರುಣವಂತ
ನಿತ್ಯ ನಿರ್ಮಲ ಸರ್ವ ಶಕ್ತ | ಶಾಂತಾತ್ಮಕ ಪ.
ಸುತ್ತ ವಿರಜೆ ಉನ್ಮತ್ತ ಮುಕ್ತರ
ನೃತ್ಯ ಗೀತೆ ವೈಚಿತ್ರದೋಲಗವು
ಇತ್ತಂಡದಿ ಮೈಹತ್ತಿ ಕುಳಿತ ಸತಿಯ
ರೆತ್ತಲಿತ್ತ ಬಂದ ಚಿತ್ರ ಮಹಿಮ ಹೇ ಅ.ಪ.
ಮಂಗಳ ಮಹಿಮ ವಿಹಂಗ ಗಮನ ತು-
ರಂಗರೂಪನೆ ಅಂತರಂಗದಿ ನೆಲಸಿ ಸು-
ಸಂಗದಿಂದಲಿ ಲಿಂಗ ಭಂಗಗೈಸುತ ಜ-
ನ್ಮಂಗಳ ಕಡೆ ಮಾಡು ರಂಗ ಕರುಣಾಪಾಂಗ
ಇಂಗಡಲಳಿಯನೆ ತುಂಗ ಮಹಿಮ ನರ-
ಸಿಂಗ ನಿನ್ನಯ ಚರಣಂಗಳ ತೋರಿಸೋ
ಭಂಗಪಡುವೆ ಭವಹಿಂಗಿಸಿ ಪೊರೆ ಕಾ-
ಳಿಂಗ ಮಥನ ಯದುಪುಂಗವ ಕರುಣಿ 1
ಗತಿ ನೀನೆ ಎಂದು ಶ್ರೀಪತಿ ನಿನ್ನ ಮೊರೆಹೊಕ್ಕೆ
ಹಿತದಿಂದ ಕಾಯೊ ದ್ರೌಪದಿಯ ಕಾಯ್ದಂಥ ದೈವ
ಚ್ಯುತದೂರ ಮುಕ್ತರ ಸ್ತುತಿಪ್ರಿಯ ಶ್ರೀ ವಾಯು-
ಸುತನಿಂದರ್ಚಿತ ಪಾದ ಪ್ರತಿ ಕಾಣೆ ನಿನಗೆಣೆ
ವ್ರತನೇಮಗಳೊಂದಿತರ ಕರ್ಮ ಸು-
ಪಥ ಕಾಣೆನು ಗತಿಯಿಲ್ಲದೆ ಶ್ರೀ-
ಪತಿ ಕೃಪೆ ಮಾಡುತ ತತುವ ಮಾನಿಗಳ
ಕೃತಿ ತಿಳಿಸುತ ನಿನ ತುತಿಸುವ ಮತಿಕೊಡು 2
ಗೋಪಿಕಂದನೆ ಬಾಲರೂಪಧಾರಕ ಮಧ್ವ-
ರಪಾರ ಸ್ತುತಿ ಕೇಳಿ ಗೋಪೀಚಂದನದಿ ಬಂದು
ಈ ಪರಿ ನಿಂತ ದೇವಪತಿ ಜನಗಳ ಪೊರೆದು
ಕಾಪಾಡುವ ಕರ್ತ ಗೋಪಾಲಕೃಷ್ಣವಿಠ್ಠಲ
ಶ್ರೀಪದ್ಮಜಮುಖ ಸುರಾಪ ಧರೇಂದ್ರರು
ತಾಪಸಿಗಳೂ ನಿನ್ನ ವ್ಯಾಪಾರ ತಿಳಿಯದೆ
ಗೋಪ್ಯಾದಿ ನುತಿಸಿ ಸ್ವರೂಪ ಯೋಗ್ಯತೆಯಂತೆ
ವ್ಯಾಪಕ ನಿನ್ನಯ ರೂಪವ ಕಾಂಬರು 3
***