ಶ್ರೀವಿಜಯದಾಸಾರ್ಯ ವಿರಚಿತ
ಶ್ರೀಹರಿ ಸ್ವತಂತ್ರ ಪ್ರಮೇಯ ಸುಳಾದಿ
(ಸಕಲ ವಸ್ತುಗಳು ಹರಿಯಾಧೀನವಾಗಿರಲು , ಎನ್ನದೆಂಬೋದು ಪಾರತಂತ್ರನಾದ ಜೀವನಿಗೆಲ್ಲಿ?)
ರಾಗ ಸೌರಾಷ್ಟ್ರ
ಧ್ರುವತಾಳ
ನಿನ್ನಾಧೀನ ದೇಹ ಪ್ರಾಣೇಂದ್ರಿಯ ಕರ್ಮಾಚರಣೆ
ನಿನ್ನಾಧೀನ ಜ್ಞಾನ ಇಚ್ಛೆ ಪ್ರಯತ್ನ ಪರಿಪರಿ
ನಿನ್ನಾಧೀನ ಬುದ್ಧಿ ಮತಿ ಧೈರ್ಯ ಕೀರ್ತಿ ಶಕ್ತಿ
ನಿನ್ನಾಧೀನ ಜಪ ತಪೋ ದಾನ ಧ್ಯಾನ ನಿದಾನಾ
ನಿನ್ನಾಧೀನ ಅಭಯ ವಿರೋಗ ಯೋಗ ಭೋಗ
ನಿನ್ನಾಧೀನ ಉಕುತಿ ಯುಕುತಿ ಭಕುತಿ ಮುಕ್ತಿ
ನಿನ್ನಾಧೀನ ವೈರಾಗ್ಯಭಾಗ್ಯ ವಸನ ಭೂಷಣ
ನಿನ್ನಾಧೀನ ದೇಶ ಕೋಶ ಓದು ಮಾಧುರ್ಯ
ನಿನ್ನಾಧೀನ ಬಾಲ್ಯ ಯೌವ್ವನ ವಾರ್ಧಿಕ್ಯ
ನಿನ್ನಾಧೀನ ಇಷ್ಟಾನಿಷ್ಟ ಪಾಪ ಪುಣ್ಯ
ನಿನ್ನಾಧೀನ ಪ್ರಕೃತಿ ಕಾಲ ವೇದ ಜೀವರು
ನಿನ್ನಾಧೀನ ಅಮಿಶ್ರ ಮಿಶ್ರಾ ತತ್ವ ತತ್ಪದಾರ್ಥ
ನಿನ್ನಾಧೀನ ಕಾರ್ಯ ಕಾರಣ ಕಾರ್ಯ ಸಂಗತಿ
ನಿನ್ನಾಧೀನ ನಾನಾ ವ್ಯಾಪಾರ ವ್ಯಕ್ತಾವ್ಯಕ್ತ
ನಿನ್ನಾಧೀನ ಯಾವತ್ತು ಬೊಮ್ಮಾಂಡ
ಅನಂತಾನಂತ ಕಲ್ಪ ಕಲ್ಪಾ ನಿನ್ನಾಧೀನ
ನಿನ್ನಾಧೀನ ನಿನ್ನಾಧೀನ ನಿನ್ನಾಧೀನ
ಒಂದೊಂದೆ ಎರಡೆ ಏನೆಂತ ಪೇಳಲಿ
ಎನ್ನೊಶವಲ್ಲ ಎಲೊ ದೇವರ ದೇವ
ಪನ್ನಗಶಯನ ವಿಜಯವಿಟ್ಠಲ
ಬಣ್ಣಿಸಲಾರೆನೊ ಭಕುತವತ್ಸಲ ॥ 1 ॥
ಮಟ್ಟತಾಳ
ಜನುಮ ಜನುಮಂಗಳು ನಿನ್ನಾಧೀನ
ಹೊಣೆಯಾಗಿದ್ದು ಹಗಲಿರುಳು ನೀನೆ
ಅನುಭವಕೆ ತಂದಿತ್ತದ್ದು ಇತ್ತದೊ
ಮನೋಜಯವಾಗಲಿ ಅನ್ಯವಾಗಲಿ
ತೃಣಯೋನಿ ಬಂದರು ತೊಲಗಬಲ್ಲದು ಏನೊ
ಘನ ಮೂರುತಿ ನಮ್ಮ ವಿಜಯವಿಟ್ಠಲರೇಯ
ನಿನಗಿದು ಸರ್ವದ ಲೀಲೆ ಲೋಕದಲಿ ॥ 2 ॥
ತ್ರಿವಿಡಿತಾಳ
ಎಲ್ಲ ನಿನ್ನಾಧೀನವಾಗಿವೆ ಅನ್ಯಥ
ಇಲ್ಲವಲ್ಲವಯ್ಯಾ ಇದರೊಳಗೊಂದು
ಬಲ್ಲವನಾರಯ್ಯಾ ವ್ಯವಧಾನ ಕಾಲಗಳು
ಎಲ್ಲೆಲ್ಲಿ ಪೋಗಿ ತಿರುಗುವ ಸಂಭ್ರಮ
ಸಲ್ಲುವದೇನೋ ಸ್ವಾತಂತ್ರ ಒಬ್ಬರಿಗಾದರು
ಕಲ್ಲು ಕವಣಿ ನಿನ್ನಾಧೀನ ಕಾಣೋ
ತಲ್ಲಣಿಸುತಲಿದೆ ನಿನ್ನ ಭೀತಿಗೆ ಪ್ರತಿ -
ಸೊಲ್ಲನಾಡುವರುಂಟೆ ಸುರರಾದ್ಯರು
ವಲ್ಲೆನೆಂದರೆ ಪಾರ್ಥನ ರಣರಂಗದಲಿ
ನಿಲ್ಲಿಸಿ ವ್ಯಾಪಾರ ಮಾಡಿಸಿದೆ
ಹುಲ್ಲು ಮಾನವರ ಪಾಡೇನು ನಿನ್ನ ಇಚ್ಛೆ -
ಯಲ್ಲದೆ ಮತ್ತೊಂದು ಕಾರಣ ಉಂಟೆ
ಅಲ್ಲಿ ಇಲ್ಲಿ ಇಪ್ಪೆನೆಂಬೊ ಸಂಶಯವ್ಯಾಕೆ
ಎಲ್ಲಿ ಪೊಂದಿಸಲಲ್ಲಿ ಇರಬೇಕು
ಬಲ್ಲಿದ ಬಲವಂತ ವಿಜಯವಿಟ್ಠಲ ಲಕುಮಿ -
ನಲ್ಲ ನಾರಾಯಣ ನಾನಾವತಾರನೆ ॥ 3 ॥
ಅಟ್ಟತಾಳ
ಇಂತು ಇಂತು ನಿನ್ನಾಧೀನವಾಗೆ
ಎಂತು ಎಂತು ಎನ್ನಾಧೀನವು
ಮುಂತೆ ತಿಳಿಯದು ಮಾಡುವಾಲೋಚನೆ
ಭ್ರಾಂತಿ ಜೀವನ ಸಮರ್ಥನೆ
ಸಂತತ ನಿನ್ನಾಧೀನವಾಗಿರೆ
ಮಂತ್ರಜ್ಞ ಮನುಜಂಗೆ ಮೃಗ ಮರುಳಾದಂತೆ
ತಂತುಗಾರ ನಿನ್ನ ತ್ರಾಣ ಇನ್ನಾವದೊ
ಅಂತರಂಗದಲ್ಲಿ ಆಡುವನೆ
ಸಂತೋಷ ಮೂರುತಿ ವಿಜಯವಿಟ್ಠಲ ದೈ -
ತ್ಯಾಂತಕ ಭಕುತ ಬಂಧು ಆನಂದ ॥ 4 ॥
ಆದಿತಾಳ
ಮಡದಿ ಮಕ್ಕಳು ನಿನ್ನಾಧೀನ
ಒಡವೆ ವಸ್ತಾ ನಿನ್ನಾಧೀನ
ಪಡಿಬಾನವು ನಿನ್ನಾಧೀನ
ಒಡೆತನವು ನಿನ್ನಾಧೀನ
ಬಡತನ ಭಾಗ್ಯ ನಿನ್ನಾಧೀನ
ಬಡಿವಾರ ಸೌಮ್ಯ ನಿನ್ನಾಧೀನ
ಕೊಡುವೊದು ಕೊಂಬುವದು ನಿನ್ನಾಧೀನ
ನಡತಿ ನುಡತಿ ನಿನ್ನಾಧೀನ
ಪಿಡಿವದು ಬಿಡುವದು ನಿನ್ನಾಧೀನ
ಉಡುವದು ಹೊದುವದು ನಿನ್ನಾಧೀನ
ಕೆಡುವದು ಉಳಿವದು ನಿನ್ನಾಧೀನ
ಒಡಲಾ ತೃಪ್ತಿ ನಿನ್ನಾಧೀನ
ಅಡಿ ಇಡುವದು ನಿನ್ನಾಧೀನ
ಕಡಿಗೆ ನಾನೇ ನಿನ್ನಾಧೀನ
ಪೊಡವಿಪತಿ ಸಿರಿ ವಿಜಯವಿಟ್ಠಲ
ಒಡನೊಡನೆ ಎನ್ನನು ಪಾಲಿಪನೆ ॥ 5 ॥
ಜತೆ
ನಿನ್ನಾಧೀನವಾಗಿ ಸಕಲ ವಸ್ತುಗಳಿರೆ
ಎನ್ನದೆಂಬೋದೇನೊ ವಿಜಯವಿಟ್ಠಲ ಸ್ವಾಮಿ ॥
****