Showing posts with label ಆನೆಯ ನೋಡಿರಯ್ಯ ನೀವರೆಲ್ಲರೂ neleyadikeshava AANEYA NODIRAYYA NEEVELLAROO. Show all posts
Showing posts with label ಆನೆಯ ನೋಡಿರಯ್ಯ ನೀವರೆಲ್ಲರೂ neleyadikeshava AANEYA NODIRAYYA NEEVELLAROO. Show all posts

Thursday, 29 April 2021

ಆನೆಯ ನೋಡಿರಯ್ಯ ನೀವರೆಲ್ಲರೂ ankita neleyadikeshava AANEYA NODIRAYYA NEEVELLAROO

 Audio by Vidwan Sumukh Moudgalya


 

ಶ್ರೀ ಕನಕದಾಸರ ಕೃತಿ


 ರಾಗ : ಮೋಹನ     ಭಜನಠೇಕಾ


ಆನೆಯ ನೋಡಿರಯ್ಯ ನೀವರೆಲ್ಲರೂ 

ಆನಂದ ಪಡೆಯಿರಯ್ಯಾ...... ॥ಪ॥


ತಾನು ತನ್ನವರೆಂಬ ಮಾನವರ ಸಲಹಿದೆ ॥ಅ.ಪ॥


ಪಾಂಡುಚಕ್ರೇಶನ ಸುತಗೆ ಒಲಿದ ಆನೆ 

ಕಡುಗಲಿ ಮಾಗಧನ ಒರಸಿದಾನೆ

ಹಿಂಡುಗೋವಳರೊಳು ಹಿರಿಯನ ಕಳೆಯದಾನೆ

ಲಂಡರಿಗೆ ಎದೆಗೊಡುವ ಪುಂಡ ಆನೆ ॥೧॥


ಬಾಲಕನ ನುಡಿಕೇಳಿ ಖಳನ ಸೀಳಿದಾನೆ 

ಪಾಲುಂಡು ವಿದುರನ ಸಲಹಿದಾನೆ 

ಲೋಲಾಕ್ಷಿಯ ಮನಭಂಗಕ್ಕೊದಗಿದಾನೆ

ಖೂಳ ಶಿಶುಪಾಲನ ಸೀಳಿದಾನೆ ॥೨॥


ಅಜಮಿಳನಿಗೆ ನಿಜಪದವಿಯ ಕೊಟ್ಟಾನೆ

ಕುಜನರೆಲ್ಲರನು ವರ್ಜಿಸಿದಾನೆ

ಅಜಪಿತ ಕಾಗಿನೆಲೆ ಆದಿಕೇಶವನೆ 

ತ್ರಿಜಗವಲ್ಲಭ ತಾನು ಭಜಕರ ವಶವಾನೆ ॥೩॥

*****

ಈ ಕೃತಿಯನ್ನು ರಚನೆ ಮಾಡಿದ ಸಂದರ್ಭ :

(ಸಂಗ್ರಹ)


ಶ್ರೀ ಕನಕದಾಸರ ಪ್ರಯಾಣ ಒಮ್ಮೆ ನಂಜನಗೂಡಿನ ಕಡೆಗೆ ಸಾಗಿತ್ತು.

ದಾರಿಯಲ್ಲಿ ಒಂದು ವಿಚಿತ್ರವಾದ ಪ್ರಸಂಗ ; ನೂರಾರು ಜನ ಗಾಬರಿಗೊಂಡು ಓಡೋಡಿಬರುತ್ತಿದ್ದರು.ಆ ಕಡೆಗೆ ಆಗಮಿಸುತ್ತಿದ್ದ ಶ್ರೀ ಕನಕದಾಸರನ್ನು ಕುರಿತು - ' ಸ್ವಾಮಿ ತಾವ್ಯಾರೋ ತಿಳಿಯದು, ಕೂಡಲೆ ಹಿಂದಿರುಗಿ, ಆನೆಯೊಂದು ಮದವೇರಿ ಇತ್ತ ಧಾವಿಸುತ್ತಿದೆ ; ಅದರ ನಿಯಂತ್ರಣ ಯಾರಿಗೂ ಸಾಧ್ಯವಾಗದೆ ಹೋಗಿದೆ , ಸ್ವಲ್ಪ ತಡವಾದರೂ ಅಪಾಯ ತಪ್ಪಿದ್ದಲ್ಲ ' ಎಂದು ಹೇಳಿ ಓಡತೊಡಗಿದರು. ದಾಸರು  ಆ ಮಾತಿನಿಂದ ವಿಚಲಿತರಾಗದೆ ಅಲ್ಲಿಂದ ಬೇರೆಡೆಗೆ ತೆರಳದೆ ನಿಶ್ಚಿಂತೆಯಿಂದ ಅದೇ ದಾರಿಯಲ್ಲೇ ಮುಂದೆ ಸಾಗಿದರು. ಆನೆ ಧಾವಿಸಿ ಬಂದೇ ಬಿಟ್ಟಿತು . ದಾಸರು ಕೂಡಲೇ ಆನೆಯನ್ನು ತಮ್ಮ ಕೈಗಳಿಂದ ಸ್ಪರ್ಶಿಸಿದರು. ಆಶ್ಚರ್ಯ! ಕೂಡಲೆ ಆನೆ ಶಾಂತವಾಯಿತು ; ಅವರ ಮುಂದೆ ನಿಂತು ಸೊಂಡಿಲನ್ನು ಮುಂದೆ ಮಾಡಿ ದಾಸರನ್ನು ಮೇಲೆ ಎತ್ತಿ ತನ್ನ ಮೇಲೆ ಕೂರಿಸಿಕೊಂಡು ಬಿಟ್ಟಿತು. ಅದರ ಮೇಲೆ ಕುಳಿತೇ ದಾಸರು ದೇವಸ್ಥಾನಕ್ಕೆ ತೆರಳಿದರು. ಜನರಿಗೆ ಆಶ್ಚರ್ಯವೋ ಆಶ್ಚರ್ಯ. ಮದ್ದಾನೆಯನ್ನು ಹಾಗೆ ಮಂತ್ರಮುಗ್ಧವನ್ನಾಗಿಸಿದ ಅವರ ಸಾಮರ್ಥ್ಯಕ್ಕೆ ಜನ ಮಣಿದರು. ಅದರ ರಹಸ್ಯವನ್ನು ಕೇಳ ಬಯಸಿದಾಗ ದಾಸರೆಂದರಂತೆ - " ಭಗವಂತನು ಎಲ್ಲೆಡೆ ಇರುವನು , ಅವನನ್ನು ನಂಬಿದವರನ್ನು ಎಂದೂ ಕೈಬಿಡನು ; ಆನೆಯಲ್ಲಿರುವ ಭಗವಂತನನ್ನು ನಾನು ಸ್ತುತಿಸಿದೆ ; ಅವನು ಆನೆಯ ಮದವನ್ನಿಳಿಸಿದ ; ತನ್ನ ಬಳಿಗೆ

 ನನ್ನನ್ನು  ಕರೆಸಿಕೊಂಡ" . ಶ್ರೀಕನಕದಾಸರ ತತ್ವಜ್ಞಾನದ ಪರಿಪಾಕ ಅಚ್ಚರಿ ಹುಟ್ಟಿಸುವಂಥದ್ದು.

ಇದರಂತೆ " ಆನೆ ಬರುತಿದೆ ನೋಡಮ್ಮ ! ಮದ್ದಾನೆ ಬರುತಿದೆ"

ಹಾಗೂ " ಆನೆ ಬಂದಿದೆ ಇದಿಗೋ ಮದ್ದಾನೆ" ಎಂಬ ಇನ್ನೆರಡಿ ಕೀರ್ತನೆಗಳು ಸಹ ಉಪಲಬ್ಧವಿದ್ದು ಅವು ಸಹ ಈ ಘಟನೆಯ ಪ್ರಾಮಾಣ್ಯಕ್ಕೆ ಸಾಕ್ಷಿಯಂತಿವೆ.

🙏 ಶ್ರೀಕೃಷ್ಣಾರ್ಪಣಮಸ್ತು 🙏

*****