..
kruti by pradyumna teertha ಪ್ರದ್ಯುಮ್ನತೀರ್ಥರು
ಮಂಗಳಂ ಜಯ ಜಯ ಮಂಗಳಂ ಪ
ಪರಮಾಸನದಲಿ ಕುಳಿತವಗೆ
ಪರತತ್ವವ ತಾ ತಿಳಿದವಗೆ
ಕರುಣದಿಂದ ದುರಿತಾವಳಿಗಳನು
ಸ್ಮರಿಸಿದ ಮಾತ್ರದಿ ಪರಿಹರಿಸುವಗೆ 1
ಪೊಡವಿಯಲಿ ಶೋಭಿಸುವವಗೆ
ಕಡಲಶಯನನ ಭಕ್ತನಿಗೆ
ಅಡಿಗಳ ಬಿಡದೆ ಭಜಿಪ ಸುಜನರಿಗೆಲ್ಲ
ಕಡುತರ ಜ್ಞಾನವ ನೀಡುವಗೆ 2
ಸತ್ಯಧೀರರ ಕುವರನಿಗೆ
ಸತ್ಯಜ್ಞಾನನೆಂದೆನಿಸುವಗೆ
ಅತ್ಯಾದರದಿಂದ ರಾಮನ ಧ್ಯಾನಿಸಿ
ಪ್ರತ್ಯಕ್ಷವ ಕರೆಸಿರುವವಗೆ 3
ಕಾಮಕ್ರೋಧವ ಬಿಟ್ಟವಗೆ
ಪ್ರೇಮ ಆಶೆಗಳ ಸುಟ್ಟವಗೆ
ಧೂಮಕೇತು ಸಖ ಸೂನುವಾಹನನ
ನೇಮದಿಂದ ಆರಾಧಿಪಗೆ 4
ದಂಡ ಕಮಂಡಲ ಪಿಡಿದವಗೆ
ಪಂಡಿತರಿಂದತಿ ಪೂಜಿತಗೆ
ಕೊಂಡಾಡಿದರ್ಯಮ ದಂಡನೆ ತಪ್ಪಿಸಿ
ಶೊಂಡನಾದ ನರಹರಿ ತೋರ್ಪಗೆ 5
***