Showing posts with label ಕಾಮಾನ ಜನನಿಯೆ ಸೋಮಾನ ಸೋದರಿ krishnavittala. Show all posts
Showing posts with label ಕಾಮಾನ ಜನನಿಯೆ ಸೋಮಾನ ಸೋದರಿ krishnavittala. Show all posts

Monday, 2 August 2021

ಕಾಮಾನ ಜನನಿಯೆ ಸೋಮಾನ ಸೋದರಿ ankita krishnavittala

ಕಾಮಾನ ಜನನಿಯೆ ಸೋಮಾನ ಸೋದರಿ

ಸಾಮಾಜ ವರದನ ಪ್ರೇಮವ ಕೊಡಿಸಮ್ಮ ಪ


ನೇಮಾದಿಂದಲಿ ಹರಿ ನಾಮಾವ ನುಡಿಸುತ

ತಾಮಾಸ ಓಡುವಂತೆ ನೀಮಾಡಬೇಕಮ್ಮ ಅ.ಪ


ನಿತ್ಯ ತೃಪ್ತಳೆನಿನ್ನ ನಿತ್ಯದಿ ಬೇಡಿಕೊಂಬೆ

ಭೃತ್ಯರೊಳಗೆ ಎನ್ನ ಎತ್ತಿ ಸೇರಿಸೆ ತಾಯೆ ||

ಮತ್ತನಾಗದೆ ಭವದಿ ಉತ್ತುಮನೆನಿಸುತ

ಆತ್ಮದಿ ಹರಿ ತೋರಿ ಕೃತಕೃತ್ಯನೆನಿಸಮ್ಮ 1

ದೇಶಕಾಲದಿನೀನು ಶ್ರೀಶಗೆ ಸಮಳಮ್ಮ

ನಾಶಮಾಡುತ ದೋಷ ದಾಸಾನು ಎನಿಸಮ್ಮ ||

ಶ್ವಾಸಾಶೇಷರನೆಲ್ಲ ಲೇಸಾಗಿ ಆಳುವಳೆ

ವಾಸುದೇವನಲ್ಲಿ ಆಸೇಯ ನೀಡಮ್ಮ 2

ಶೃತಿಯಲ್ಲಿ ನೀನಿದ್ದು ಸ್ತುತಿಸೀ ಶ್ರೀಹರಿಯನ್ನ

ಮತ್ತೆಸೃಜಿಸುವಂತೆ ಎತ್ತಿಗಾನವ ಮಾಳ್ವೆ ||

ಎತ್ತ ನೋಡಲು ಬಲು ಕತ್ತಲೆಕಣಿ ತಾಯೆ

ಸತ್ಯವ ಬಿಡದಂತೆ ಹತ್ತೀಸೆ ಹರಿದಾರಿ3

ಹರಿಯಂತೆ ಅವತಾರ ನಿರುತನೀ ಮಾಡುತ

ಪರಿ ಪರಿ ರೂಪದಿಂದ ಪರಿಚರಿಯ ನೀಮಾಳ್ವೆ ||

ಸರ್ವೇಶ ಹರಿಯಿಂದ ಸರ್ವಕಾಲದಿ ಕೂಡಿ

ಸರ್ವಕಾರ್ಯವ ಮಾಳ್ವೆ ಸರಿಯಾರೆ ನಿನಗಮ್ಮಾ 4

ಅಕ್ಷರ ರೂಪಳೆ ಈಕ್ಷಿಸುಕರುಣದಿಂದ

ತ್ರ್ಯಕ್ಷೇಶ ವಿಧಿಮಾತೆ ಅಕ್ಷರನರ್ಧಾಂಗಿ ||

ಕುಕ್ಷೀಲಿ ಬ್ರಹ್ಮಾಂಡ ಲಕ್ಷ್ಯವಿಲ್ಲದೆ ಪಡೆದಿ

ಅಕ್ಷಯ ಮಾಡಿ e್ಞÁನ ಮೋಕ್ಷಾವ ಕೊಡಿಸಮ್ಮಾ5

ವಿಕಾರ ಶೂನ್ಯಳೆ ಪ್ರಕೃತಿಗೆ ಮಾನಿಯೆ

ನೀಕಾರ್ಯ ಕಾರಣಕ್ಕೆ ಮುಖ್ಯ ಹೇತುವೆ ತಾಯೆ ||

ಪ್ರಕೃತಿ ಬಂಧವ ಬಿಡಿಸಿ ಸಾಕಾರ ಮೂರುತಿ

ಲೋಕನಾಯಕ ಹರಿಯ ಏಕಾಂತದಲಿ ತೋರೆ6

ತ್ರಿಗುಣ ಕಾರ್ಯಗಳೆಲ್ಲ ಸುಗುಣಿ ನೀ ಮಾಡುತ

ನಿಗಮ ವೇದ್ಯನ ನಿತ್ಯ ಪೊಗಳಿ ಹಿಗ್ಗುವೆ ಮಾತೆ ||

ಜಗವೆಲ್ಲ ಕುಣಿಸುತ ನಗುತಲೀಲೆಯಿಂದ

ನಿಗಮಾದಿಗಳ ಮೀರಿ ಬಗೆ ಬಗೆ ಲೀಲೆ ಕಾಂಬೆ 7

ನಿತ್ಯಾ ಮುಕ್ತಳು ನೀನು ಪ್ರೀತಿಲಿ ನಮಿಪೆನೆ

ಮಾತುಲಾಲಿಸಿ ಎನ್ನ ನಿತ್ಯದಿ ಸಲಹೆಮ್ಮ ||

ಹೆತ್ತ ತಾಯಿಯು ನೀನು ಎತ್ತಿ ಪೊರೆಯದಿರೆ

ಎತ್ತ ಪೋಗಲಿ ನಾನು ಉತ್ತುಮರಮೆ ಹೇಳೆ 8

ಸಾಗರನ ಮಗಳೆ ಆಗಮರೂಪಳೆ

ಹೋಗೀಸುಲಿಂಗವ ಸಾಗಿಸಿಗುಣಕಾರ್ಯ ||

ಭಾಗ್ಯ ಸ್ವರೂಪಳೆ ಬಾಗಿ ನಮಿಸುವೆ

ಆಗು ಮಾಡಿಸು ಹರಿ ಗೀತೆಗಳೆನ್ನಿಂದ 9

ಮರುತ ದೇವನ ಪಿತನ ಉರದಲಿ ವಾಸಿಪಳೆ

ಹರಿಗುರು ಚರಣದಿ ನಿರುತ ಭಕ್ತಿಯ ಕೊಟ್ಟು ||

ವಾರಿಜನಾಭನಲ್ಲಿ ಧಾರೆ ಧಾರೆಯ ಭಕ್ತಿ

ಬೀರೀಕರುಣಿಸು ಸಾರಸ ದಳನಯನೇ 10

ಮಾತು ಮಾತಿಗೆ ನಮ್ಮ ಖ್ಯಾತಾಜಯತೀರ್ಥ

ವಾತನೊಳ್ವಾಸಿಪ ನವನೀತ ಧರಿಸೀಹ ||

ಶ್ರೀ ತಾಂಡವ ಕೃಷ್ಣ ವಿಠಲರಾಯನ ಸ್ಮರಣೆ

ಆತ್ಮಾದೊಳಗೆ ನಿಂತು ಖ್ಯಾತೀಲಿನಡಿಸಮ್ಮಾ 11

****