ಹ್ಯಾಂಗೆ ಉದ್ದರಿಸುವಿ ಎನ್ನ ಕೃಷ್ಣ ಕರುಣ ಸಂಪನ್ನ ಪ
ಹೋಗಿ ಹೊಗಿ ವಿಷಯ ಕೂಪದಲ್ಬೀಳ್ವವನಾಅ.ಪ.
ದಾಸನು ಎಂದೆನಿಸಿ ಮೆರೆವೆ
ಮನದೀ ಲೇಶಾ ಭಕುತಿಯನಾನೊಂದರಿಯೇ
ವೇಷಹಾಕಿದೆ ಧನಕೆ ಬರಿದೇ
ಆಶೆ ಇಟ್ಟು ಭವದಿ ವಂಚಕನೆನಿಸಿದವನಾ1
ಮಂದಿ ಜನರ ಮುಂದೆ ವೈರಾಗ್ಯನಟನೆ
ಮಂದಿರದೊಳು ಬಹು ಕಾಮದ ಭಜನೆ
ಬಂಧು ಬಳಗ ಕೂಡೆ ಬಹಳ ಭಕ್ತಿ
ಇಂದಿರೇಶನ ಧ್ಯಾನ ದೋಳ್ವಿರಕ್ತಿ2
ಗುರುಹಿರಿಯರ ಜರಿವೊದೆ ಜಪವು
ದುರುಳರ ಸಂಗ ದೋಳ್ಮೆರೆವೋದೆ ವ್ರತವು
ಪರಿಸರನ ಶಾಸ್ತ್ರದೋಳ್ಮೌನ
ನರನಾರಿ ಸ್ತವ ದೋಳ್ಧ್ಯಾನ 3
ವೇದ ಓದಿದೆ ನಾನು ಆದರೇನು
ಮೋದತೀರ್ಥರ ಮರ್ಮ ಸಿಗಲಿಲ್ಲವು ಇನ್ನು
ವಾದಕ್ಕನುಕೂಲ ವಾಯ್ತದು ಅಷ್ಟೆ
ಖೇದ ತೊಲಗದೆ ಮನದಿ ಬಹುಕಷ್ಟಪಟ್ಟೇ 4
ಭುಕ್ತಿ ಪಡೆಯೆ ಕಾಲಕಳೆದೆನಲ್ಲಾ
ಯುಕ್ತಿಯಿಂದಲಿ ನೀನು ಒಲಿವೋನು ಅಲ್ಲಾ
ಭಕ್ತ ಜನರ ಸಂಗ ನಾ ಪಿಡಿಯಲಿಲ್ಲ
ಮುಕ್ತಿಗಾಗುವ ಭಾಗ್ಯ ಎನ್ನಲಿಲ್ಲವಲ್ಲಾ 5
ಸ್ವೋತ್ತುಮರ ನೋಡೆ ಮಾತ್ಯರ್ಯ ಎನಗೇ
ವಾತ್ಯಲ್ಯ ತೋರೆನು ಸ್ಧಾವರ ಜನಕೇ
ಕುತ್ಸಿತ ಪಾವಡ ಬೀರುವೆ ಜಗಕೆ
ತಾತ್ಸಾರ ತೋರುವೆ ಭಕ್ತರ ಗುಣದೀ6
ಈಷಣ ತ್ರಯಗಳ ಬಿಡಲಿಲ್ಲ ಲೇಶಾ
ಭಾಷಣದಿ ತೋರ್ಪೆe್ಞÁನ ಪ್ರಕಾಶ
ಈಶ ನೀನೊಬ್ಬನೆ ಸರಿಯೆಂಬೆ ಹರಿಯೆ
ದಾಸನಾಗಿ ಬಾಳ್ವೆ ಬಹು ನೀಚ ಜನಕೆ 7
ನಾನು ನಾನೆಂಬುದು ತುಂಬಿದೆ ಮನದಿ
ನೀನು ನಿನ್ನಾಧೀನ ವೆಂತ್ಹೇಳಿ ದೃಢದಿ
e್ಞÁನವಿದ್ದರು ಇಲ್ಲ ಎನಚರ್ಯೆ ನೋಡೆ
ಮಾನಿನಿಯರ ಬೊಂಬೆ ಗುಣಗಣನೆ ಮಾಡೆ 8
ಮೂರೊಂದು ಹರಿತ್ಯಾಗ ತೊರೆಯಲಿಲ್ಲ
ವೈರಿ ಆರರ ಬೇರು ನಾಕೀಳಲಿಲ್ಲ
ವೀರ ವೈಷ್ಣವನಾಗಿ ಬಾಳಲಿಲ್ಲಾವಲ್ಲ
ಗಾರು ಮನ್ನಿಸದಿರೆ ಗತಿಯೊಬ್ಬರಿಲ್ಲಾ 9
ವ್ರತನೇಮ ಉಪವಾಸ ಸಾಧನೆಯಿಲ್ಲ
ರತಿಯಿಂದ ಸಲಹೆಂದು ನಾಕೂಗಲಿಲ್ಲ
ಮತಿ ಮತದಿ ಪುಟ್ಟಿದರು ಫಲವಾಗಲಿಲ್ಲ
ಗತಿ ನೀನೆ ಕೈ ಪಿಡಿಯೊ ಕೇಳುತ ಸೊಲ್ಲ 10
ಡಂಭಕ ತನದಿಂದ ಬಹುಕಾಲ ಕಳೆದೇ
ತುಂಬಿ ಭಕ್ತಿಯ ಬೇಗ ನೀ ಕಾಯೋಮುಂದೆ
ಜಂಭಾರಿ ಜಯತೀರ್ಥ ವಾಯ್ವಾಂತರ್ಗತನಾದ
ಕಂಬುಕಂಧರಧಾರಿ “ಶ್ರೀ ಕೃಷ್ಣವಿಠಲ” 11
****