ಮೂರು ತುಂಡಾದ ಹನುಮನ ನೋಡಿರೆ ಪ.
ಮಾರುತಿಯ ಮರ್ಮವಿದರಿಂದರಿಯರೆ ಅ.ಪ.
ಮೊದಲ ಕಟ್ಟೆಯ ದಡದಿ ಮೊದಲಿದ್ದ ಹನುಮನ
ವಿಧಿವಶದಿ ಖಳರು ಕಿತ್ತೊಗೆಯೆ ಮದದಿ
ಮೊದಲು ಕಟ್ಟೆಯು ನಿಲದೆ ಒಡೆದು ಪರಿಯಲು ತುಂಗೆ
ಅದರೊಳಡಗಿದ್ದ ಕೆಲಕಾಲವೀ ರಾಯ 1
ದೈವವಶದಿಂ ವ್ಯಾಸರಾಯರಿಲ್ಲಿಗೆ ಬರಲು
ದೇವರಿಲ್ಲದ ಭವನ ಕಂಡು ನಿಂದು
ತಾವೆ ಸ್ಥಾಪಿಸುವೆವೆಂಬನಿತರೊಳು ಸ್ವಪ್ನದಲಿ
ಪಾವಮಾನಿಯು ತನ್ನ ಇರುವು ತೋರಿದನೊ 2
ಬರುತ ಕಟ್ಟೆಯ ದಿಡಗಿನಲ್ಲಿ ನಿಂದು ಕರೆವಡೆ
ಬರಲು ಮೂರು ತುಂಡು ಹನುಮರಾಯ
ತರುತ ಸ್ಥಾಪಿಸಿ ಬಂಧಿಸಲು ದ್ವಾರವಾರದಲಿ
ಕರನ್ಯೂನ ಸಾಕಾರ ಸರಿಯಾದನೀತ 3
ಮೂರು ಯುಗದಲಿ ತಾನು ಮೂರು ರೂಪವ ತಾಳಿ
ಮೂರು ಮೂರ್ತಿಯ ಭಜಿಸಿ ಮೂರು ಆಶ್ರಮದಿ
ಮೂರಾರು ಎರಡೊಂದು ದುರುಳ ಮತಗಳ ಮುರಿದು
ಮೂರುದಶ ಏಳು ಗ್ರಂಥಗಳ ಸ್ಥಾಪಿಸಿದ 4
ಮೂರು ಗುಣಬದ್ಧ ಮೂರು ದೇಹದಿ ನೆಲಸಿ
ಮೂರು ವಿಧ ಜಪದಿಂದ ಮೂರ್ಗತಿಯನೀವ
ಮೂರು ಸ್ಥಾನದಿ ಮೂರು ಕೋಟಿರೂಪವ ಧರಿಸಿ
ಮೂರು ಲೋಕದಿ ಮೆರೆವ ಮಾರುತಿಯ ಚರ್ಯ 5
ಮೂರು ನಾಡಿಯ ಮಧ್ಯೆ ಮೂರೈದುದಲ್ಲಿ
ತೋರುವೊ ಹರಿರೂಪ ತೋರಿಸುವನು
ಮೂರು ಅವಸ್ಥೆಗಳ ವಿೂರಿದ ಜಾಗ್ರತನು
ಮೂರು ಕಾಲದಿ ಜೀವರನು ಕಾಯುವನ 6
ಮೂರು ಮಾರ್ಗಗಳಿಂದ ಮಾರುತಿಯ ತೋರುವೊ
ದಾರಿಯಿಂದಲಿ ಹರಿಯ ಸಾರಿ ಭಜಿಸೆ
ಸೇರಿಸುವ ಗೋಪಾಲಕೃಷ್ಣವಿಠ್ಠಲನ ಪುರವ
ತಾರಿಸುವ ಭವವನಧಿ ಮೊದಲಗಟ್ಟೇಶ7
****