Showing posts with label ತೃಣ ಪ್ರಾರಂಭ vijaya vittala ankita suladi ಬಿಂಬ ಸ್ಪಷ್ಟತ್ವ ಸುಳಾದಿ TRUNA PRARAMBHA BIMBA SPASHTATVA SULADI. Show all posts
Showing posts with label ತೃಣ ಪ್ರಾರಂಭ vijaya vittala ankita suladi ಬಿಂಬ ಸ್ಪಷ್ಟತ್ವ ಸುಳಾದಿ TRUNA PRARAMBHA BIMBA SPASHTATVA SULADI. Show all posts

Thursday 10 June 2021

ತೃಣ ಪ್ರಾರಂಭ vijaya vittala ankita suladi ಬಿಂಬ ಸ್ಪಷ್ಟತ್ವ ಸುಳಾದಿ TRUNA PRARAMBHA BIMBA SPASHTATVA SULADI

 

Audio by Vidwan Sumukh Moudgalya

ಶ್ರೀ ವಿಜಯದಾಸಾರ್ಯ ವಿರಚಿತ 


 ತಾರತಮ್ಯ ಕಲ್ಪಸಾಧನ - ಒಂದು ಕಲ್ಪದಲ್ಲಿ ಜೀವರುಗಳ ಸಂಖ್ಯಾ ಬಿಂಬದರ್ಶನ ಕ್ರಮ , ಬಿಂಬ - ಸ್ಪಷ್ಟತ್ವ ಸುಳಾದಿ 


 ರಾಗ : ಶ್ರೀರಂಜನಿ 


 ಧ್ರುವತಾಳ 


ತೃಣ ಪ್ರಾರಂಭ ಮಾಡಿ ಪರಮೇಷ್ಠಿ ಪರಿಯಂತ

ಎಣಿಸಿ ಗುಣಿಸುವುದು ತಾರತಮ್ಯದಿ

ಗಣನೆ ಉಂಟು ಕೇಳೊ ಒಂದೊಂದು ಬೊಮ್ಮಾಂಡಕ್ಕೆ

ಅನುಮಾನ ಮಾಡಸಲ್ಲಾ ಗುಣವಂತರು

ಜನಿಸುವರು ಚರ್ಮ ಭಾವಿ ಯೋಗ್ಯತ ಸಾ-

ಧನ ಜೀವಿಗಳು ಪ್ರವಹದಂತೆ

ವನಜಸಂಭವನೊಬ್ಬ ಸಂಪೂರ್ಣ ಬಿಂಬ ದ-

ರ್ಶನ ಕಾಂಬ ಸರ್ವದಾ ಬಹುಪ್ರಕಾರ

ಅನಿಲ ದೇವನು ಮುಖ್ಯ ಉಳಿದವರಿಗಿಂತ

ಮನದಿಚ್ಛೆಯಲ್ಲಿ ಸ್ಪಷ್ಟತ್ವ ಭೇದ

ದಿನದಿನದಲ್ಲಿ ಎನ್ನಿ ಮಿಕ್ಕಾದ ತೊಂಭತ್ತೆಂಟು

ಜನರು ಲಾತವ್ಯರೆಂದು ಕರೆಸುವರು

ಎಣಿಕೆ ಮಾಡಿ ಇಲ್ಲಿಗೆ ಶತ ಜನರನ್ನು ನಿತ್ಯ

ಘನವಾಗಿ ಯೋಗ್ಯತಾ ಅಪರೋಕ್ಷವೋ

ಇನಿತು ನೋಡಿರೊ ಮಿಗಿಲಾದ ಶತ ಜನ ಸಾ-

ಧನ ದೇಹದವರೆಂದು ಕೊಂಡಾಡಿರೊ

ಅನಿಲ ವಿರಂಚಿ ಹರಿಯಿಂದಲೆ ಉತ್ಪತ್ತಿ

ಜನನ ಇಲ್ಲವೊ ಕಾಣೊ ಅನ್ಯರಿಂದ

ವನಜ ಸಂಭವ ವಾಯು ಇದ್ದಲ್ಲಿ ಸರ್ವರು

ಮನೆ ಮಾಡಿಕೊಂಡಿಪ್ಪರು ಹರಿ ಕೃಪೆಯಲಿ

ತೃಣ ಸ್ವರೂಪದಲ್ಲಿ ಅರಲವ ಕಾಲ ಬಿಡದೆ

ಗುಣರೂಪ ಕ್ರಿಯಾದಲ್ಲಿ ಹರಿ ದರುಶನ

ವನಜ ಭವಾಂಡದೊಳಗೀರ್ವರಿಗಧಿಕಾರ

ಅನುವಾಗಿ ಇಪ್ಪದು ತತ್ವ ಸಹಿತ

ಗುಣತ್ರಯ ಪರಿಯಂತ ಅಂಶಿ ಪ್ರಕಾಶ ವ್ಯಾಪ್ತಿ

ಸನುಮತ ಮೇಲೆ ಅಂತ:ಕರುಣ ಜನ್ಯ

ಜನನವೆ ಇನ್ನೂರು ಜನಕೆ ಉಳಿದ ಋಜು

ಗಣವೆಲ್ಲ ಅಸೃಜ್ಯರಾಗಿಪ್ಪರೊ

ಅನುದಿನ ಇವರೆಲ್ಲ ಜ್ಞಾನವಂತರು ಸ-

ಜ್ಜನ ಶಿರೋಮಣಿಗಳೊ ನಿರ್ದೋಷರು

ಗಣನೆ ಇಲ್ಲದ ರೂಪ ತೆತ್ತಕಾಲಕ್ಕು ಸು-

ಗುಣ ವಾರಿಧಿಗಳೆನ್ನು ಪ್ರಳಯ ಸಹಿತ

ಕ್ಷಣ ಒಂದಾದರು ಈ ಜನಕೆ ಲೇಶ ಮಾತ್ರ

ದನುಜಾರಾವೇಶವಿಲ್ಲ ಎಲ್ಲಿದ್ದರು

ಇನಕೋಟಿ ತೇಜಾ ನಮ್ಮ ವಿಜಯವಿಠ್ಠಲ ನಂಘ್ರಿ

ವನಜ ಧ್ಯಾನವನು ಮಾಳ್ಪರು ಆಧಿಕಾಧಿಕವಾಗಿ॥೧॥


 ಮಟ್ಟತಾಳ 


ಗರುಡ ಶೇಷಾದಿಗಳ ಗಣ ವುಂಟು ಪು-

ಷ್ಕರ ಪರಿಯಂತವು ಎಣಿಕೆ ಮಾಡಿದರು ವಿ-

ಸ್ತರ ಮಹಿಮೆಗಳನ್ನು ಇವರಿವರ ಜನನ

ತರತಮ್ಯದನುಸಾರ ಅಪರೋಕ್ಷ ಸಾಧನ

ಶರೀರಗಳೆನ್ನು ಒಂದಾನಂತವಾಗಿ

ಪರಿಮಿತ ಅಂಶಗಳು ಮನಸ್ತತ್ವದ ತನಕಾ

ನಿರುತ ವ್ಯಾಪ್ತಿಗಳಯ್ಯಾ ಇದರೊಳು ಖಗ ಸರ್ಪೇ-

ಶ್ವರ ಅಹಂಕಾರದಲ್ಲಿ ಸ್ಥಿರವಾಗಿ ಇದ್ದು ತತ್ತದ್ವ್ಯಾಪಾರ

ತಿರೋಭಾವನೆ ಇಲ್ಲ ಕಲ್ಪವೆ ಭೇದ

ಹರಿ ದರ್ಶನದಲ್ಲಿ ಕ್ರಮೇಣ ಅಭಿವೃದ್ಧಿ

ಚರಮ ಶರೀರಕ್ಕೆ ಪೂರ್ಣ ಭಕುತಿ ಯೋಗ್ಯರು

ಅರಿವುದು ಇವರಿಗೆ ಅಸೃಜ್ಯಾ ಕಾಲಕ್ಕು

ಗರುವತನವೆ ಇಲ್ಲ ಅವತಾರಾವೇಶ

ಧರೆಯಮೇಲೆ ಬಂದಾಗ ಅನುರಾವೇಶದಿಂದ ಮಾನಿಸಾನ್ನ ಉಣಲು

ಮರವು ಪುಟ್ಟುವುದು ಅವರವರ ಯೋಗ್ಯತ ಕಾಲ ಭೇದವೆನ್ನಿ

ಪರಮ ಮುಖ್ಯಸ್ವಾಮಿ ವಿಜಯವಿಠ್ಠಲರೇಯ 

ಸರಸಿಜಾಂಡದೊಳು ಈ ಪರಿ ವ್ಯಾಪಾರ ಮಾಳ್ಪ॥೨॥


 ತ್ರಿವಿಡಿತಾಳ 


ಗರುಡ ಪನ್ನಗ ಜೀವರು ಅಷ್ಟಶತ ಈರ್ವರು

ಸರಿ ಎನ್ನಿ ಗುಣ ರೂಪ ಕ್ರೀಯಾದಿಗಳಲ್ಲಿ

ತಾರತಮ್ಯವೆ ಉಂಟು ಭಿನ್ನ ಚರಿತೆ ನೋಡು

ಚರಿಸುವರು ಒಂದೊಂದು ನೀತಿಯಲ್ಲಿ

ಸುರಪ ಸ್ಮರ ಪದಸ್ಥರು ನಾಲ್ವತ್ತು ಜನ ಅಹಂ-

ಮರುತ ಮೂವತ್ತಾರು ಜನರು ಸಿದ್ಧಾ

ಗುರು ಮನು ಮುಂತಾದ ಜನಪದಸ್ಥರು ಮೂವ-

ತ್ತೆರಡು ಸಿದ್ಧ ಮೇಲೆ ಇಪ್ಪತ್ತು ನಾಲ್ಕು ಜನ

ಮರೀಚಿಗಳೆನ್ನು ಸೂರ್ಯಾದ್ಯರು ಇಪ್ಪತ್ತು

ವರುಣ ನಾರದ ವಿಡಿದು ಮಿತ್ರಾದಿಗಳ ತನಕ

ನೆರೆದರೈ ಹದಿನೆಂಟು  ಜನರು

ತರುವಾಯ ಉಕ್ತ ಶೇಷರು ಹದಿನಾರು ವಿ-

ವರಿಸುವೆ ಇವರೊಳು ಗಣ ತಾರತಮ್ಯವೋ

ಪರಮೇಷ್ಠಿ ಮಾನಸ ಪುತ್ರರು ಹದಿನಾಲ್ಕು

ಪರಿಜನ್ಯರಾರಂಭಿಸಿ ಪುಷ್ಕರಾಂತ

ಯೆರಡಾರು ಜನರೆನ್ನು ಸಮ ಜೀವರೊಂದೊಂದು

ಮರಳೆ ಕರ್ಮ ದೇವತೆಗಳೀರೈದರೋ

ಅರಸುಗಳೊಬ್ಬಬ್ಬರೆಂಟು ಮಂದಿ ಗಣಿತ

ಅರಿಕೆ ಯಿಲ್ಲದೆ ಸುರರು ಅಗ್ನಿ ಪುತ್ರರು ಮಿಕ್ಕ-

ವರು ಬ್ಯಾರೆ ಬ್ಯಾರೆ ಆರೇಳು ಮಂದಿ

ಸುರಗಂಧರ್ವರು ನಾಲ್ಕು ಮರ್ತ್ಯಾಂತ ತೃಣ ಜೀವಕ್ಕೆ

ಪರಿಮಿತ ಇಲ್ಲವೋ ನಿರಂಶರು

ಹರಿಯೇ ಈ ಪರಿಯಿಂದ ಕಲ್ಪ ಕಲ್ಪಕೆ ನಿಂ-

ದಿರದೆ ಪುಟ್ಟಿಸುತಿಪ್ಪಾ ಅಸೃಜ್ಯರಾ

ಕರುಣಾಕರ ಮೂರ್ತಿ ವಿಜಯವಿಠ್ಠಲರೇಯ 

ನಿರವೈರರ ಕೂಡ ಇಂತು ನಲಿದಾಡುವಾ॥೩॥


 ಅಟ್ಟತಾಳ 


ಇದರೊಳು ಕ್ರಮವುಂಟು ಒಂದೊಂದು ಜನತಮ್ಮ

ಪದವೀಯಸಾರಿ ವಿಲಿಂಗರಾದ ಮೇಲೆ

ಒದಗಿ ಬಾಹೋರು ಸಲಿಂಗರು ವೇಗದಿ

ನದಿ ಪ್ರವಾಹದಂತೆ ಕಾಲ ವ್ಯವಧಾನ

ವಿಧಿಶಿವ ಮಿಕ್ಕಾದ ಜನರೆಲ್ಲ ಜತ್ತಾಗಿ

ಮುದದಿಂದ ಸೋಪಾನ ಬಂದಂತೆವೋ

ಇದರಲ್ಲಿ ಪೂರ್ಣ ವಿಭೂತಿ ಲಕ್ಷಣ ನವ-

ವಿಧ ಭಕುತಿಯುಳ್ಳ ಚರಮ ಶರೀರಿಗ-

ಳುದುಭವಿಸುವರು ಒಬ್ಬರೊಬ್ಬರು ಮುಂದು

ಇದರ ತರುವಾಯ ಅಪರೋಕ್ಷವಾದ ಗಣದ ಮಧ್ಯದಲ್ಲಿಗೆ

ಸದಮಲ ಸಂಖ್ಯೆಗೆ ಒಂದೊಂದು ಕಡಿಮೆ ಚೇತ

ನದ ಲೆಕ್ಕವ ನೋಡು ಸ್ಪಪ್ಟತ್ವದಲ್ಲಿ ಭೇದ

ಇದರಲ್ಲಿ ಸಾಧನ ಸಾಧ್ಯ ಪದಸ್ಥ ತ್ರಿ-

ವಿಧವೆನ್ನು ಬಿಂಬಾ ಬಿಂಬೋಪಾಸನೆ ಅಧಿ-

ಕಾಧಿಕವಾಗಿ ಮಾಡುತಲಿಪ್ಪರು

ಪದುಮ ಭವಾಂಡ ಸಮೇತ ತೃಣಾದ್ಯರ

ಹೃದಯಸ್ಥ ಮೂರ್ತಿಯ ಉಚಿತ ಜನ್ಮದಲ್ಲಿ

ಅಧಿಕಾರ ತನದಿಂದ ಯೋಗ್ಯತಾನುಸಾರ

ನದರುಶನ ಅನುಕ್ರಮವಾಗಿ ಒಂದೊಂದು 

ಇದನೆ ಲಾಲಿಸುವದು ಸೋತ್ತುಮರಬಿಟ್ಟು

ತುದಿಮೊದಲಾಗಿ ತಮಗಿಂತ ನೀಚರ

ಬದಿಯಲ್ಲಿ ಇದ್ದ  ವಸ್ತುಗಳೆಲ್ಲಾ ಕಾಂಬೋರು

ಮದಮತ್ಸರಗಳಿಲ್ಲ ದುಷ್ಪ್ರಾರಬ್ಧ ಒ-

ದದು ನೂಕುವರು ದೈತ್ಯಾವೇಶ ವರ್ಜರು ಸ-

ರ್ವದ ಹರಿ ದರುಶನ ಅಪರೋಕ್ಷ ಕಾಲಕ್ಕೆ

ಉದಧೀ ತೆರೆಯಂತೆ ಪುಷ್ಕರ ವಿಡಿದಿನ್ನು

ಪದುಮನಾಭನ ವಾಹನ ಪರಿಯಂತರ

ಇದೇ ಸಿದ್ಧ ರವಿಮಂಡಲದಂತೆ ಕಾಂಬೋರು

ಮಧುವೈರಿ ವಿಜಯವಿಠಲ ರೇಯನ ಪಾದ

ಪದುಮವೇ ಗತಿಯೆಂದು ಹೇಳಿ ಕೇಳುತ ದೃಢಾ ॥೪॥


 ಆದಿತಾಳ 


ತ್ರಣ ಖಗ ಮೃಗಾದಿಗಳು ಹೃದಯದಲ್ಲಿ ನೋಳ್ಪರು

ಮನುಜೋತ್ತಮರು ಮಂಟಪ ಪೀಠಾವರಣ ಸ್ಥಿರ

ಮನದಲ್ಲಿನೋಳ್ಪರು ಇವರ ತರುವಾಯ

ಜನಪತಿ ಮರ್ತ್ಯಗಂಧರ್ವರು ಚೆನ್ನಾಗಿ

ತನುವಿನೊಳಗೆ ಸಪ್ತಸ್ಥಾನದಲ್ಲಿ ಸುಷು-

ಮ್ನನಾಡಿ ತದ್ಗತ ಹರಿರೂಪಗಳು ಮೂಲೇ-

ಶನ ಸಹ ಕಾಂಬುವರು ಈ ಮೇಲೆ ಅಜಾನಜರು

ಗುಣಿಸು ತ್ರಿನಾಡಿವಿಡಿದು ಸರ್ವ ದೇಹದಲ್ಲಿ

ಶನಿ ಪುಷ್ಕರಾದಿ ಬೊಮ್ಮವಿಡಿದು ತದ್ಗತ ಹರಿಯ

ಇನಿತು ನೋಡುವರಯ್ಯಾ ಅತತ್ವನಾಯಕರು

ಮಿನುಗುವ ವಿರಾಟ ರೂಪ ಸಮೇತ ನೀಕ್ಷಿಸುವರು

ನೆನೆನೆನೆದು ಮುಂದೆ ಅಪ್ರತಿಕಾಲಂಬರು

ಘನಪಾಗಿ ಕರ್ಮಪ ಇಂದ್ರ ಪರ್ಯಂತ

ಮನಸ್ತತ್ವ ಕಡೆಮಾಡಿ ಮಿತಿಯಲ್ಲಿ ನೋಡುವರು

ವಿನುತ ನಂದನ ರುದ್ರ ಅಹಂಕಾರದಲಿ ಎನ್ನಿ

ಅನಿಲ ಪಿತಾಮಹಾ ತಮ್ಮ ತತ್ವದ ತನಕಾ

ಕ್ಷಣ ಬಿಡದೆ ನೋಡುವರೊ ನಿರ್ದೋಷವಂತರಾಗಿ

ಎಣಿಕೆ ಮಾಡೆಲೊ ಇವರು ವ್ಯಾಪ್ತ ದರ್ಶಿಗಳು

ಗಣನೆ ಇಲ್ಲದೆ ಹರಿಯ ಅನುಗ್ರಹಕ್ಕೆ ಪಾತ್ರರು

ಪ್ರಣತ ಜನ ಮಂದಾರ ವಿಜಯವಿಠಲನ್ನ ಉಪಾ-

ಸನೆ ಮಾಡಿ ನೋಡುವರು ಅಪರೋಕ್ಷಕಾಲಕ್ಕೆ ॥೫॥


 ಜತೆ 


ಬ್ರಹ್ಮಸ್ಥಂಬ ಪರಿಯಂತ ಕೊಂಡಾಡಿ ಮರೆಯದೆ

ಬ್ರಹ್ಮವಂದಿತ ವಿಜಯವಿಠಲ ಮುಂದಾಡುವ

*****