..
ಕರವ ಪಿಡಿ ಗುರುರಾಯ | ಶಿರಬಾಗಿ ಬೇಡುವೆ
ಪೊರೆಯೊ ಸತ್ಕವಿಗೇಯ | ನೆರೆನಂಬಿದೆನು ನೀ
ಮರೆಯದಿರು ಶುಭಕಾಯ | ಹೇ ಸೂರಿವರ್ಯ ಪ
ಉರಗಕೇತನ ಮೊರೆಯ ಲಾಲಿಸಿ
ತರಣಿಜನಿಗೆರಡೊಂದು ಯುಗದಲಿ
ಧುರದಿ ಸಾರಥಿಯಾಗಿ ಸ್ಯಂದನ
ಭರದಿ ನಡೆಸಿದ ಪರಮ ಪುರುಷನೆ ಅ.ಪ
ಶರಣು ಜನ ಸುರಧೇನು | ಹೇ ತಾತ ನೀ
ಮೂರೆರಡು ಜನುಮಗಳನ್ನು | ಕಳೆದು ಮ
ತ್ತುರುವ ಅವತಾರವನು ಭಕ್ತಿಪೂರ್ವಕ
ಪಿರಿಯರಾಜ್ಞದಿ ನೀನು ಪೂರೈಸಲಿನ್ನು
ಧರಣಿಯೊಳಗವತರಿಸಿ ನರರಿಗೆ
ಅರಿಯದಂದದಿ ಹರಿಯ ದಿಸೆಯೋಳ್
ಹರಿಯ ಸ್ಮರಿಸುತ ಚರಿಪ ಧೊರೆ ತವ
ಚರಣ ದರುಶನಗರೆದು ಕರುಣದಿ 1
ಬಿಡಿಸೊ ಎನ್ನ ಕ್ಲೇಶ ತಡಮಾಡದಲೆ ನೀ
ಕಡಿಯೊ ಈ ಭವ ಪಾಶ | ದೃಢಮನವ ಕೊಡು ನಿ
ನ್ನಡಿಗಳಲಿ ನಿರ್ದೋಷ | ನುಡಿಯಲಾಲಿಸಿ
ಬಿಡದೆ ಮಾಡುಪದೇಶ ಪೊಡವೀಶದಾಸ
ಒಡೆಯನೇ ನೀನಡಗಿ ಎನ್ನನು
ಕಡೆಗೆ ನೋಡಲು ಪಡೆದ ಜನನಿಯು
ಪಿಡಿದು ಬಾಲನ ಮಡುವಿನೋಳ್ ತಾ
ಬಿಡುವ ತೆರ ತವ ನಡತೆ ಎನಿಪುದು 2
ಮಂದನಾನಿಜವಯ್ಯ | ಸಂದೇಹವಿಲ್ಲದೆ
ಕುಂದು ಎಣಿಸದೆ ಜೀಯ ಬಂದೆನ್ನ ಮನದಲಿ
ನಿಂದು ನೀಸಲಹಯ್ಯ ವಂದಿಪೆನು ಶ್ರೀ ಪು
ರಂದರಾರ್ಯರ ಪ್ರೀಯ ಆನಂದ ನಿಲಯ 3
***