ankita ಲಕುಮೀಶ
ರಾಗ: [ಬಹುದಾರಿ] ತಾಳ: [ಆದಿ]
ಹಿಡಕೋ ಬಿಡಬೇಡ ಶ್ರೀ ರಾಘವೇಂದ್ರರ ಪಾದ ಪ
ಪೊಡವಿಜ ರಮಣನ ದೃಢ ಕರುಣಕವಚವ
ಎಡೆಬಿಡದೆ ಧರಿಸಿದ ಒಡೆಯ ರಾಯರಪಾದ ಅ ಪ
ಕೃತಯುಗದಲಿ ಈತ ಮಾತೆ ಗರ್ಭದಲಿರೆ
ಚತುರವದನಸುತ ಇವರಿಗೆ ಶೃತಿನುತ ತತ್ತ್ವ
ಮಂತ್ರವ ಪೇಳಲು ತನ್ನ ಪಿತಗೆ ಹರಿಯ ತೋರಿ
ಗತಿಕೊಡಸಿದರಂಘ್ರಿ 1
ವಸುಧಿಲಿ ವ್ಯೆಷ್ಣವ ಬಿಸಜಕೆ
ವ್ಯಾಸರಾಜ ಭಾಸುರತೇಜದ ಭಾಸ್ಕರನೆಂದೆನಿಸಿ
ಸಾಸಿರನಾಮನ ಲೇಸಾಗಿ ಪಾಡುತ
ರಾಶಿ ರತ್ನದಭಿಷೇಕಗೊಂಡವರಂಘ್ರಿ 2
ಗುರುಸುಧೀಂದ್ರರ ದಿವ್ಯಕರಕಮಲಜರೆನಿಸಿ
ವರಹಜತಟದೊಳಗೆ ಎಸೆವಾ ವರಮಂತ್ರಗೃಹದೊಳು
ನರಹರಿಯ ಧ್ಯಾನದಿ ಶರಣರ ಕಲ್ಪ-
ತರುವೆನಿಸಿದರಂಘ್ರಿ 3
ಭಾರತಿಪತಿಶಾಸ್ತ್ರವಾರಿಧಿ ಈಜುತ ಪರಿಮಳ ಸದ್ಗ್ರಂಥ
ವಿರಚಿಸುತ ಮೊರೆಹೊಕ್ಕ ಭಕುತರ
ಕರಪಿಡಿದು ಕಾಯುತ ಹರಿಭಕ್ತಿಇತ್ತು ಮುಕ್ತಿಪಥವ ತೋರುವರಂಘ್ರಿ 4
ಪ್ರತಿದಿನ ಪ್ರತಿಕ್ಷಣಕೆ ಅತಿವೈಭವದಿಂದ
ಭಕ್ತರಿಂದಲಿ ಸೇವೆ ಕೈಗೊಳುತ ಯತಿಯಲಿ ಲಕುಮೀಶ
ಚತುರರೂಪದಿ ನಿಂತು ಅತಿಶಯ ವರವೀವಕಥೆ ತಿಳಿದವರಂಘ್ರಿ 5
***