ಶ್ರೀ ಗೋಪಾಲದಾಸಾರ್ಯ ವಿರಚಿತ ಉಡುಪಿ ಶ್ರೀಕೃಷ್ಣ ಪ್ರಾರ್ಥನಾ ಸುಳಾದಿ
ರಾಗ ಕಾಂಬೋಧಿ
ಧ್ರುವತಾಳ
ಮಗುವಾಗಿ ಮಗನಾಗಿ ಮಮತೆ ಪುಟ್ಟಿಸಿ ನಿನ್ನ
ಮಗುವ ರೂಪವು ತೋರಿ ಮರಳಿ ಎನ್ನ ಕಣ್ಣಿಗೆ
ಸಿಗದಂತೆ ನೀನು ಎನ್ನ ಮಗನೆಂದು ಪೇಳಿಕೊಂಡ
ಬಗೆ ಆವ ಲೀಲೆಯೋ ಚನ್ನಿಗನೆ ಗೋವಳರಾಯಾ ಬಪ್ಪ
ಬಗೆ ಏನೊ ಎನ್ನೊಡನೆ ಚುನ್ನಾಟವಾಡಲಿಕ್ಕೆ
ಅಗಣಿತ ಗುಣಗಣ ಅಂಬುಧಿಯೋ
ಸೊಗಸಾಗಿ ಎನಗೆ ಮೊದಲಿಗೆ ನಿಜವ ತೋರಿದರೆ
ಮಿಗಿಲಾಗಿ ನಿನ್ನ ಸ್ತೋತ್ರಗಳನಾದರು ಮಾಳ್ಪೆ
ಯುಗ ಮಹಾ ಪ್ರಳಯಕೆ ಚಲಿಸದ ಸರ್ವೇಶ
ಮಗುವಾಗಿ ತೋರಿ ಮೋಸಗೊಳಿಸುವ ದರಿಯದಾದೆ
ನಗುಬಾಟಲವ ಮಾಡಿ ಕಡಿಗೆ ಹಿಂದೆ ನೋಳ್ಪಿವಿಯೊ
ಧಿಕು ಧಿಕು ಎನ್ನ ಜನ್ಮ ಸಾರ್ಥಕೇನೊ
ನಗಧರ ಚಲುವ ಗೋಪಾಲವಿಟ್ಠಲ ಕೃಷ್ಣ
ನಗೆ ಆಟ ತೋರೆನ್ನೊಡನೆ ಸಿಗದೆ ಮರಿಯಾಗಬಹುದೆ ॥ 1 ॥
ಮಟ್ಟತಾಳ
ತಿಳಿಯದೆ ಸ್ವಪ್ನದಿ ಕಳವಳಿಕೆಯಿಂದ
ಶಳದು ನೂಕಿದೆನಲ್ಲ ಬಳಿಯ ನಿಲ್ಲ ಗೊಡದೆ
ಕಿಲಕಿಲನೆ ನಗುತ ಚಿನ್ನ ಬಾಲಕನಾಗಿ
ಸುಳಿದು ಆಡಿದರು ತಿಳಿಯದೆ ನಾ ಪೋದೆ
ತಳಕು ಹಾಕಿ ಕಾಲು ತೊಡರಿಸಿ ಕೊಂಡರು
ಎಳೆದು ಎಳೆದು ನಿನ್ನ ಎಬ್ಬೆಟ್ಟಿದೆನಲ್ಲಾ
ಭಳಿರೆ ನಿನ್ನ ಮಾಯಾ ಬಡವರಿಗೆ ಇನ್ನು
ತಿಳಿಯಲೊಶವೆ ಕರುಣ ಚಿತ್ರ ವಿಚಿತ್ರನೆ
ಮಲತ ಮಲ್ಲರ ಗಂಡ ಗೋಪಾಲವಿಟ್ಠಲ
ಅಲೌಕಿಕ ಚರಿಯ ಅಘಟಿತ ಮಹಾಘಟಿತಾ ॥ 2 ॥
ತ್ರಿಪುಟತಾಳ
ಪುಟ್ಟಿದ ಶಿಶುವೆಲ್ಲಿ ಎಷ್ಟು ದಿವಸಾಯಿತು
ದೃಷ್ಟಿಲಿ ನಾನೆತ್ತ ನೋಡಿದವನೆ ಅಲ್ಲ
ಕೊಟ್ಟವನೆ ಕೊಂಡೊಯ್ದನೆಂದು ಮನಸು ಎಲ್ಲ
ಘಟ್ಯಾಗಿ ಅದರ ಚಿಂತನಿಯ ಗಂಧವೆ ಎಲ್ಲ
ಬಿಟ್ಟವನಿಗೆ ಸ್ವಪ್ನದಲ್ಲಿ ಆ ರೂಪದಿ
ಚೇಷ್ಟಿಯ ತೋರಿಸಿ ಚತುರ ಕ್ರೀಡಿಯನಾಡಿ
ಬಿಟ್ಟು ಕೊನಿಗೆ ಎನಗೆ ದೃಷ್ಟಿಗೆ ತೋರದ
ಶ್ರೇಷ್ಠ ಬಾಲಕ ರೂಪ ನೀನೊ (ಅಜಿತನೊ) ಅಜೀವನೊ
ಇಷ್ಟು ಮಾತ್ರವು ಎನ್ನ ಮನದಲ್ಲಿ ನೆಲೆಗೊಂಡು
ಸ್ಪಷ್ಟಾಗಿ ತಿಳಿಪೋದು ಸರ್ವೇಶ್ವರ
ಎಷ್ಟಿಲ್ಲ ವೆಂದರೆ ಎನ್ನ ಮನದ ವ್ಯಥೆ
ಬಿಟ್ಟು ಪೋಗದು ಕಾಣೊ ಬಿನ್ನೈಸುವೆ
ಇಷ್ಟು ಮಾತ್ರವು ಅಲ್ಲ ನಿನ್ನ ರೂಪ ಬಾಲ -
ಕೃಷ್ಣನೆಂದು ಪೆಸರು ಪೇಳಿದ್ಯಾಗ
ಎಷ್ಟು ಜನ್ಮದ ನೋಪು ನಾ ತಿಳಿದವನಲ್ಲ
ಘಟ್ಯಾಗಿ ಎನ್ನ ಗುರುಗಳೆ ಬಲ್ಲರೊ
ಪುಟ್ಟ ಬಾಲಕ ಉಡುಪಿ ಕೃಷ್ಣ ಗೋಪಾಲವಿಟ್ಠಲ
ಇಷ್ಟೇವೊ ಎನ್ನ ಪ್ರಾಪ್ತಿ ಮುಂದೆ ಉಂಟೊ ॥ 3 ॥
ಮಟ್ಟತಾಳ
ತೃಷಿಲಿಂದ ನೀರು ರಭಸದಿ ಕುಡಿವಂಗೆ
ಕಸಗೊಂಡ ತೆರನಂತೆ ಕೈಯೊಳ ಪಾತ್ರೆಯ
ಹಸಿದನ್ನವ ಕೊಂಬಗೆ ಹಾರ ಹೊಡದ ತುತ್ತು
ಕೊಸರಿ ಬಿಟ್ಟಂತಿನ್ನು ಎನ್ನ ಆಶಿಯ ನೋಡು
ಉಸರಲಾರಿನೊ ನೀ ಪೋಷಿಸಿ ಸುಖಿಸಿ ಎನ್ನ
ಕೊಸರಿ ಬಿಟ್ಟಕ್ಲೇಶ ಕೊಂದೆನಲಿಲ್ಲ ಈಡಿಲ್ಲ
ಕಸುಕೊಂಡು ಗಂಟಗಲ್ಲದ ಬಿಡಿದಿನ್ನು
ಉಸುರದೆ ಮೆಲ್ಲಗೆ ಪೋದವನಂತೆ ರಾ -
ಜಸ ಮತಿಯವನಿಗೆ ನಿನ್ನ ಒಲಿಮೆ ಎಂತೊ
ಅಸಮ ದೇವ ಕೃಷ್ಣ ಗೋಪಾಲವಿಟ್ಠಲ ಕ -
ನಸಿನ ರೂಪವು ಮನಸ್ಸಿಗೆ ನೆಲೆಯಾಗು ॥ 4 ॥
ಆದಿತಾಳ
ಏನನ್ನರಿಯೆ ನಿನ್ನ ಮಹಿಮೆ ಏನನ್ನರಿಯೆ ನಿನ್ನ ಸೇವೆ
ಏನನ್ನರಿಯೆ ಪ್ರೀತಿ ಕರ್ಮ ಏನನ್ನರಿಯೆ ಜ್ಞಾನ ಮಾರ್ಗ
ಏನನ್ನರಿಯೆ ಭಕುತಿ ಸ್ಥಿತಿಯು ಏನನ್ನರಿಯೆ ವಿರಕುತಿಯು
ಏನೋ ನಿನ್ನ ಕರುಣಪೂರ್ಣ ನೀನು ಎಂದು ನಾನು ಬಲ್ಲೆ
ದೀನನಾಥ ಎನ್ನ ಅವಗುಣ ಗುಣ ನಿನಗೇನೊ
ಜೇನು ಕ್ರಿಮಿಗಳ ವಮನವನು ಮಜ್ಜನವು ಎಂದು
ಜ್ಞಾನಿಗಳು ತಂದು ಸ್ನಾನ ಮಾಡಿಪರೊ ನಿನಗೆ
ಜ್ಞಾನಿಗಳ ಪಾದದಡಿಯಲಿ ನಾನು ಬಿದ್ದವನು ಎಂದು
ನೀನೇ ನೋಡಿ ಸಾಕಬೇಕು ಶ್ರೀನಿವಾಸ ದಯಾಂಬುಧಿ
ಮಾನಿಸರೂಪಾಗಿ ಪೊಳೆದ ಜಾಣ ಗೋಪಾಲವಿಟ್ಠಲ
ಪ್ರಾಣಾಧಾರ ನಿನ್ನ ಇರವ ಧ್ಯಾನದೊಳಗೆ ನಿಲಿಸಿ ಕಾಯೋ ॥ 5 ॥
ಜತೆ
ಸ್ವಪ್ನದಲ್ಲಿ ಸುಳಿದ ಅಪರಿಮಿತ ಮಹಿಮ
ತಪಸಿಗೆ ವದಗೊ ಗೋಪಾಲವಿಟ್ಠಲ ಕೃಷ್ಣ ॥
ಈ ಸುಳಾದಿಯ ರಚನೆಯ ಸಂದರ್ಭ :
ಶ್ರೀಗೋಪಾಲದಾಸರು ಎರಡನೆಯ ಬಾರಿ ಉಡುಪಿ ಶ್ರೀಕೃಷ್ಣನ ಸಂದರ್ಶನ ಮಾಡಲು ಪ್ರೇರಣೆಯಾಗಿ , ತಮ್ಮ ಅನುಜರೊಡನೆ ಉಡುಪಿ ಯಾತ್ರೆಯನ್ನು ಕೈಗೊಂಡರು. ಉಡುಪಿಯಲ್ಲಿದ್ದಾಗ , ಒಂದು ದಿನ , ಶ್ರೀದಾಸರಾಯರಿಗೆ ಬೆಳಗಿನ ಜಾವ ಇದ್ದಕ್ಕಿದ್ದಂತೆಯೇ ತೇಜಃಪುಂಜವಾದ ಒಂದು ಮಗು ಬಂದು , ತೊಡೆಯ ಮೇಲೆ ಕೂತು ಆಡಿ ನಲಿಯುತ್ತಿದ್ದು , ತಮ್ಮ ಹೊಟ್ಟೆಯಲ್ಲಿಯೇ ಹುಟ್ಟಿ ಆಟಪಾಟಗಳಿಂದ ಆನಂದಪಡಿಸಿ ಕೆಲಕಾಲವಿದ್ದ ಅನುಭವವನ್ನು ತೋರಿಸಿದ ಶ್ರೀಕೃಷ್ಣ. ಇದ್ದಕ್ಕಿದ್ದಂತೆ ಮಗುವು ಕೈಬಿಟ್ಟು ಹೋದಂತೆ ಅನುಭವ ಕೊಟ್ಟ. ಆನಂದಾನುಭವಕ್ಕಿಂತ ಹೆಚ್ಚಿತು ದುಃಖಾನುಭವ. ಸ್ವಾಮಿ ! ನನ್ನೊಡನೆ ಇಷ್ಟು ಚೆಲ್ಲಾಟವಾಡಿ ನಾನು ಪಡೆದ ಮಗುವೇ ಇದೆಂದು ಭ್ರಮೆಪುಟ್ಟಿಸಿ , ಮಗುವಿನೊಡನೆ ಅತ್ಯಾನಂದ ಪಡುತ್ತಿದ್ದ ನನಗೆ , ನೀನು ಕಣ್ಮರೆಯಾಗಿ ದುಃಖಸಾಗರದಲ್ಲಿ ಮುಳುಗಿಸಿದೆ. ಪುನಃ ಆ ರೂಪವನ್ನು ತೋರಿಸಿ ಆನಂದಪಡಿಸಿದರಲ್ಲದೆ ಹೋಗದು ಆ ದುಃಖ. ಬಾಲಬ್ರಹ್ಮಚಾರಿಯಾದ ನಾನು , ನಿನ್ನ ಮತ್ತು ನಮ್ಮ ಗುರುವರ್ಯರ ಸೇವೆ ಮಾಡಿಕೊಂಡಿದ್ದೆ. ಈಗ ನಮ್ಮ ಗುರುಗಳ ಕಡೆ ನೋಡಿಯಾದರೂ , ಅವರ ಶಿಷ್ಯನೆಂಬುದರಿಂದ ದರ್ಶನವಿತ್ತು ದುಃಖವನ್ನು ಪರಿಹರಿಸು ಕೃಷ್ಣಾ! .....ಇತ್ಯಾದಿ ಮಾತುಗಳಿಂದ ಶ್ರೀದಾಸರಾಯರು ಸ್ವಪ್ನಾವಸ್ಥೆಯಲ್ಲಿನ ತಮ್ಮ ಮನಸ್ಸಿನ ಬವಣೆಯನ್ನು , ಸ್ವಪ್ನದಲ್ಲಿ ತೋರಿದ ಶ್ರೀಹರಿಯ ರೂಪ - ಲಾವಣ್ಯ - ಆಟಪಾಟಗಳನ್ನು ಎಲ್ಲ ವೃತ್ತಾಂತವನ್ನು ತಮ್ಮಂದಿರಿಗೆ ವಿವರಿಸಿ ಬರೆಯಿಸಿದ ಸುಳಾದಿ ಇದು.
ಲೇಖಕರು :
ಹರಿದಾಸರತ್ನಂ ಶ್ರೀಗೋಪಾಲದಾಸರು
*******