..
kruti by Nidaguruki Jeevubai
ಜನಕರಾಜನ ಸುತೆ ಜಾನಕಿ ಜೋ ಜೋ
ಇನಕುಲತಿಲಕನರ್ಧಾಂಗಿಯೆ ಜೋ ಜೋ ಪ
ಕುಂದಣ ಕೆತ್ತಿದ ಚಂದದ ತೊಟ್ಟಿಲ
ಮಂದಗಮನೆಯರು ತಂದಿರಿಸಿದರು
ಸುಂದರಾಂಗಿ ವೈದೇಹಿಯನೆತ್ತುವ ಆ-
ನಂದದಿ ಜೋಗುಳ ಪಾಡ್ವರು ಜೋ ಜೋ 1
ರತ್ನ ಮುತ್ತುಗಳ ಕಿರೀಟವು ಹೊಳೆಯಲು
ಮುತ್ತಿನ ತೊಡುಗೆಯಲಿ ರಂಜಿಸುವ ಸುಂದರಿಯ
ಉತ್ತಮ ಸತಿಯರು ತೊಟ್ಟಿಲ ಪಿಡಿಯುತ
ಅರ್ಥಿಯ ಜೋಗುಳ ಪಾಡ್ವರು ಜೋ ಜೋ2
ಕೌಸಲ್ಯದೇವಿಯ ಕಂದನ ರಮಣಿಯೆ
ಕೌಶಿಕಯಜ್ಞದ ಪಾಲನಅರಸಿಯೆ
ಹಂಸವಾಹನನ ಪಿತನ ಸತಿಯೆ ಖಳ
ಧ್ವಂಸ ಮಾಡಿದ ರಘುರಾಮನರಸಿಯೆ 3
ಅಂಬುಜನಯನೆ ಪೀತಾಂಬರ ಶೋಭಿತ
ಕಂಬುಕಂಠಿ ಕೋಕಿಲವಾಣಿ ಜೋ ಜೋ
ತುಂಬುಗುರುಳ ಮುಖ ಕಮಲೆಯೆ ಜೋ ಜೋ
ನಂಬಿದವರ ಕಾಯ್ವ ಕರುಣಿಯೆ ಜೋ ಜೋ4
ಕಮಲನಯನೆ ಕಮಲಾಲಯೆ ಜೋ ಜೋ
ಕಮಲಗಂಧಿಯೆ ಕಮಲೋದ್ಭವೆ ಜೋ ಜೋ
ಕಮಲನಾಭ ವಿಠ್ಠಲನ ಸತಿ ಜೋ ಜೋ
ಕಮಲೆ ಹೃತ್ಕಮಲದಿ ವಾಸಿಸÀು ಜೋ ಜೋ5
***