ವ್ಯಾಸರಾಯರು
ಚಂದ್ರಾ ಧರೆಯೊಳು ಮೂಡಿದಾ
ಪ್ರಹ್ಲಾದನೆಂಬ ಚಂದ್ರಾ ಪ
ಹೊಂದಿದವರ ಹೃದಯಾಂಧಕಾರನೀಗುವ ಗುಣ-
ಸಾಂದ್ರ ವ್ಯಾಸರಾಜೇಂದ್ರನೆಂಬುವ ಅ.ಪ.
ವಿಕಸಿತಸತ್ಕುಮುದಕೆ ಬಂಧೂ ಖಳ
ಮುಖಾರವಿಂದವಳಿದು ಕೊಂದೂ
ಸುಖದಿ ಕುಳಿವ ಬುಧಚಕೋರ ತತ್ವ
ಪ್ರಕಾಶಕರ ಚಂದ್ರಿಕಾಪೂರ್ಣನೆಂಬ 1
ಹೇಯಮತಗಳೆಲ್ಲವ ಮುರಿದೂ ಬಲು
ಬಾಯಿಬಾರದೆ ನಿಲ್ಲಲು ಜರಿದೂ
ಮಾಯಿಚೋರರು ಪಲಾಯನಗೈಯಲು
ನ್ಯಾಯಾಮೃತಮಯ ವೃಷ್ಟಿ ಕರೆಸಿದಾ 2
ಕಂಡೂ ಗೋಪಾಲಕೃಷ್ಣನ ಪದವ ಕದ-
ರುಂಡಲಿಗೀಶ ಭಕ್ತನಾಮೋದವ
ಕೊಂಡು ಭೂಮಂಡಲವ ಪಂಡಿತ ಜನಮನ
ತಾಂಡವವಾಡಿದ ತರ್ಕತಾಂಡವ ಮಾಡಿದ 3
***